ನವದೆಹಲಿ: ಇನ್ನು ಮುಂದೆ ದೇಶದಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸುವವರಿಗೆ ವೀಸಾಕ್ಕಾಗಿ ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಬೇಕಾಗಿಲ್ಲ. ಹೀಗೆಂದು ನವದೆಹಲಿಯಲ್ಲಿ ಇರುವ ಆ ದೇಶದ ರಾಯಭಾರ ಕಚೇರಿ ಗುರುವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ಭಾರತದ 20 ಲಕ್ಷ ಮಂದಿ ಶಾಂತಿಯುತವಾಗಿ ತಮ್ಮ ತಮ್ಮ ಉದ್ಯೋಗಗಳಲ್ಲಿ ನಿರತರಾಗಿದ್ದಾರೆ. ಭಾರತ ಸರ್ಕಾರದ ಜತೆಗೆ ದೇಶ ಅತ್ಯುತ್ತಮ ಬಾಂಧವ್ಯ ಹೊಂದಿರುವುದರಿಂದ ರಾಜಮನೆತನ ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾಕ್ಕೆ ಪ್ರಯಾಣ ಮಾಡುವವರಿಗೆ ವೀಸಾ ಪಡೆಯಲು ಪೊಲೀಸರಿಂದ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕಾದ ಅಗತ್ಯ ಇಲ್ಲ. ಎರಡೂ ದೇಶಗಳ ನಡುವೆ ಹೊಂದಿರುವ ಸೌಹಾರ್ದಯುತ ಬಾಂಧವ್ಯದ ದ್ಯೋತಕವಾಗಿ ರಾಜಮನೆತನ ಈ ನಿರ್ಧಾರ ಕೈಗೊಂಡಿದೆ ಎಂದು ರಾಯಭಾರ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.
ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ ಬಳಿಕ ಸೌದಿ ಅರೇಬಿಯಾ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಜತೆಗಿನ ಬಾಂಧವ್ಯ ಬಹಳಷ್ಟು ವೃದ್ಧಿಯಾಗಿದೆ.