Advertisement

ಸೌದಿ:ಕರಾವಳಿ ಯುವಕರು ಸಂಕಷ್ಟದಲ್ಲಿ; ಪಾರುಗೊಳಿಸಲು ಯತ್ನ

09:24 AM Dec 08, 2017 | |

ಮಂಗಳೂರು: ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಸೌದಿ ಅರೇಬಿಯದ ದಮಾಮ್‌ ನಗರಕ್ಕೆ ಉದ್ಯೋಗಕ್ಕೆ ತೆರಳಿದ ಅವಿಭಜಿತ ದ.ಕ.ಜಿಲ್ಲೆಯ ಮೂವರು ಯುವಕರು ಸಂಕಷ್ಟಕ್ಕೀಡಾದ ಘಟನೆ ವರದಿಯಾಗಿದೆ. 

Advertisement

ಉಡುಪಿಯ ಸಚಿನ್‌ ಕುಮಾರ್‌, ಉಪ್ಪಿನಂಗಡಿಯ ಅಬ್ದುಲ್‌ ರಶೀದ್‌ ಹಾಗೂ ಬೆಳ್ತಂಗಡಿಯ ಸಂತೋಷ್‌ ಶೆಟ್ಟಿ ಉದ್ಯೋಗ ವಂಚನೆಗೊಳಗಾದ ಯುವಕರು.

 2017ರ ಮಾರ್ಚ್‌ 24ರಂದು ಮಂಗಳೂರು ಮೂಲದ ವೀಸಾ ಏಜೆನ್ಸಿಯ ಮೂಲಕ ಎಲೆಕ್ಟ್ರೀಶಿಯನ್‌ ವೀಸಾದಲ್ಲಿ ಸೌದಿಯ ದಮಾಮ್‌ಗೆ ತೆರಳಿದ್ದು, ಉತ್ತಮ ವೇತನದ ಭರವಸೆಯನ್ನೂ ನೀಡಲಾಗಿತ್ತು. ಆದರೆ ಕಂಪೆನಿ ಭರವಸೆ ನೀಡಿದ್ದ ಉದ್ಯೋಗವನ್ನಾಗಲೀ, ವಾಸ್ತವ್ಯ, ಆಹಾರ ಯಾವುದೇ ವ್ಯವಸ್ಥೆ ನೀಡದೆ ಸತಾಯಿಸಿತ್ತು. ತ‌ಮಗೆ ಎಲೆಕೀóಶಿಯನ್‌ ಉದ್ಯೋಗವೇ ಬೇಕೆಂದು ಪಟ್ಟುಹಿಡಿದಾಗ ಕಾಟಾಚಾರಕ್ಕೆ ಉದ್ಯೋಗ ಸಂದರ್ಶನಕ್ಕೆ ಕರೆದುಕೊಂಡು ಹೋಗಿ ಸಂದರ್ಶನದಲ್ಲಿ ಫೇಲ್‌ ಮಾಡುತ್ತಿದ್ದರು. ಕೆಲವು ತಿಂಗಳು ರೂಮಿನಲ್ಲಿಯೇ ಇರಬೇಕಾಯಿತು ಎಂದು ಸಂತ್ರಸ್ತ ಯುವಕರು ಪ್ರಕರಣವನ್ನು ಕೈಗೆತ್ತಿಕೊಂಡಿರುವ ಇಂಡಿಯನ್‌ ಸೋಶಿಯಲ್‌ ಫೋರಮ್‌ ಪ್ರತಿನಿಧಿ  ನೌಶಾದ್‌ ಅವರಿಗೆ ತಿಳಿಸಿದ್ದಾರೆ. 

ಇಂಡಿಯನ್‌ ಸೋಶಿಯಲ್‌ ಫೋರಂ ಈ ವಿಚಾರವನ್ನು ಭಾರತೀಯ ರಾಯಭಾರ ಕಚೇರಿಗೆ ತಿಳಿಸಿ ಕೇಸು ದಾಖಲಿಸಿತ್ತು. ರಾಯಭಾರ ಕಚೇರಿಯ ಸಹಕಾರದೊಂದಿಗೆ ನೌಶಾದ್‌ ಅವರು ಏಜೆನ್ಸಿ ಮತ್ತು ಕಂಪೆನಿಯೊಂದಿಗೆ ಮಾತುಕತೆ ನಡೆಸಿ ಸಂತ್ರಸ್ತ ಯುವಕರಿಗೆ ಈವರೆಗಿನ ವೇತನ ನೀಡುವಂತೆ ಮತ್ತು ಅವರಿಗೆ ಸೂಕ್ತ ಉದ್ಯೋಗ ಕಲ್ಪಿಸಲು ಸಾಧ್ಯವಾಗದಿದ್ದರೆ ತವರಿಗೆ ವಾಪಸಾಗಲು ಬೇಕಾದ ನಿರ್ಗಮನ ಪತ್ರ ನೀಡುವಂತೆ ಸೂಚಿಸಿದ್ದಾರೆ. ಇದಕ್ಕೆ ಪೂರಕವಾಗಿ ಅಗತ್ಯ ದಾಖಲೆಗಳನ್ನು ತಲುಪಿಸುವಲ್ಲಿ ಎಸ್‌ಡಿಪಿಐ ದ.ಕ.ಜಿಲ್ಲಾ ಮುಖಂಡರು ಸೋಶಿಯಲ್‌ ಫೋರಂಗೆ ಸಹಕರಿಸಿದ್ದರು.

ಪ್ರಸಕ್ತ ಸಂತ್ರಸ್ತ ಯುವಕರಿಗೆ ಆಹಾರ ಮತ್ತು ವಾಸ್ತವ್ಯ ಹಾಗೂ ಟಿಕೇಟು ವ್ಯವಸ್ಥೆ ಮಾಡಲಾಗಿದೆ. ಸಚಿನ್‌, ರಶೀದ್‌ ಮತ್ತು ಸಂತೋಷ್‌ ಜೊತೆಯಾಗಿಯೇ ತವರಿಗೆ ಮರಳಲಿದ್ದು, ಶನಿವಾರ (9-12-2017) ದಂದು ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ ಎಂದು ಇಂಡಿಯನ್‌ ಸೋಶಿಯಲ್‌ ಫೋರಮ್‌ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next