ಜೆಡ್ಡಾ(ಸೌದಿ ಅರೇಬಿಯಾ): ಕಳೆದ ಕೆಲವು ವಾರಗಳಿಂದ ಜಗತ್ತಿನ ವಿವಿಧೆಡೆ ಕೋವಿಡ್ 19 ಸೋಂಕು ಪ್ರಕರಣ ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ತನ್ನ ದೇಶದ ನಾಗರಿಕರು ಭಾರತ ಸೇರಿದಂತೆ ಹದಿನಾರು ದೇಶಗಳಿಗೆ ಪ್ರಯಾಣಿಸದಂತೆ ನಿರ್ಬಂಧ ಹೇರಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರೋಹಿತ್ ಶರ್ಮಾಗೆ ಬ್ರೇಕ್ ಕೊಟ್ಟಿದ್ಯಾಕೆ? ಇದು ಅನಗತ್ಯ: ರವಿ ಶಾಸ್ತ್ರಿ
ಕೋವಿಡ್ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಭಾರತ, ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೋಮಾಲಿಯಾ, ಇಥಿಯೋಪಿಯಾ, ಕಾಂಗೋ, ಲಿಬಿಯಾ, ಇಂಡೋನೇಷ್ಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರೂಸ್, ವೆನಿಜುವೆಲಾ ಸೇರಿದಂತೆ 16 ದೇಶಗಳಿಗೆ ಸೌದಿ ನಾಗರಿಕರು ಪ್ರಯಾಣಿಸದಂತೆ ನಿಷೇಧ ಹೇರಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ದೇಶದಲ್ಲಿ ಈವರೆಗೂ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ ಯಾವುದೇ ಶಂಕಿತ ಮಂಕಿಪಾಕ್ಸ್ ಪ್ರಕರಣವಾಗಲಿ ಹಾಗೂ ಇತರೆ ಸೋಂಕು ಪ್ರಕರಣಗಳು ಕಂಡುಬಂದಲ್ಲಿ ಅದನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿರುವುದಾಗಿ ಸೌದಿ ಅರೇಬಿಯಾ ಹೇಳಿದೆ.
ಜಗತ್ತಿನ ಸುಮಾರು 11 ದೇಶಗಳಲ್ಲಿ ಈವರೆಗೆ 80 ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ನಿಟ್ಟಿನಲ್ಲಿ ಮಂಕಿಪಾಕ್ಸ್ ಸೋಂಕು ಪ್ರಕರಣ ಹರಡದಂತೆ ತಡೆಯಲು ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.