ಛಾಯಾಗ್ರಾಹಕ ಸತ್ಯ ಹೆಗಡೆ ತಮ್ಮ “ಸತ್ಯ ಹೆಗಡೆ ಸ್ಟುಡಿಯೋಸ್’ ಮೂಲಕ ಕಿರುಚಿತ್ರ ನಿರ್ಮಿಸುವ ನವಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಈಗಾಗಲೇ ಅವರ ಯೂಟ್ಯೂಬ್ ಚಾನೆಲ್ ಮೂಲಕ 11 ಕಿರುಚಿತ್ರಗಳು ಬಿಡುಗಡೆ ಆಗಿವೆ. ಇದೀಗ ಮೂರು ಕಿರುಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಆ ಪೈಕಿ “ಗ್ರಾಚಾರ’ ಎಂಬ ಕಿರುಚಿತ್ರ ಇತ್ತೀಚೆಗೆ ರಿಲೀಸ್ ಆಗಿದ್ದು, ಮುಂದಿನ ದಿನಗಳಲ್ಲಿ “ಕಥೆಗಾರನ ಕತೆ’ ಹಾಗೂ “ಅಹಂ ಪರಂ’ ಎಂಬ ಕಿರುಚಿತ್ರಗಳು ಸತ್ಯ ಹೆಗಡೆ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿವೆ.
“ಕತೆಗಾರನ ಕಥೆ’ ಕಿರು ಚಿತ್ರವನ್ನು ಯುವ ಬರಹಗಾರ ಹಾಗೂ ನಿರ್ದೇಶಕ ಕೌಶಿಕ ಕೂಡುರಸ್ತೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ “ಗ್ರಾಚಾರ’ ಕಿರು ಚಿತ್ರವನ್ನು ಅಜಯ್ ಪಂಡಿತ್ ನಿರ್ದೇಶನ ಮಾಡಿದರೆ, “ಅಹಂ ಪರಂ’ ಕಿರುಚಿತ್ರವನ್ನು ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗೆ ಈ ಕಿರುಚಿತ್ರಗಳ ಪ್ರದರ್ಶನ ನಡೆದಿದ್ದು, ನಿರ್ದೇಶಕರಾದ ಗಿರಿರಾಜ್, ಚೇತನ ಕುಮಾರ್, ನಟ ನವೀನ್ ಸೇರಿದಂತೆ ಅನೇಕರು ಭಾಗವಹಿಸಿ, ಹೊಸಬರಿಗೆ ಸತ್ಯ ಹೆಗಡೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮೆಚ್ಚುಗೆ ಸೂಚಿಸಿದರು.