Advertisement

ಕೈ ಅತೃಪ್ತರ ಚೆಂಡು ರಾಹುಲ್‌ ಅಂಗಳಕ್ಕೆ

06:00 AM Sep 18, 2018 | |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಲುಗಾಡಿಸುತ್ತಿರುವ ಜಾರಕಿಹೊಳಿ ಸಹೋದರರು ಖುದ್ದು ರಾಹುಲ್‌ ಗಾಂಧಿಯವರೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಲಿ ಎಂದು ಪಟ್ಟು ಹಿಡಿದಿದ್ದು “ಚೆಂಡು’ ಹೈಕಮಾಂಡ್‌ ಅಂಗಳ ತಲುಪಿದಂತಾಗಿದೆ.

Advertisement

ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರು ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಸೋಮವಾರ ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಮಾಧಾನಪಡಿಸುವ ಕೆಲಸ ಮಾಡಿದರಾದರೂ, ಹೈಕಮಾಂಡ್‌ ಸಮ್ಮುಖದಲ್ಲೇ ಇತ್ಯರ್ಥವಾಗಲಿ ಎಂದು ರಮೇಶ್‌ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಶಾಸಕರಿಗೆ ಬೆಲೆ ಇಲ್ಲದಂತಾಗಿದೆ. ನನ್ನ ಜತೆಯಲ್ಲೂ 18 ಶಾಸಕರು ಇದ್ದು, ಹೈಕಮಾಂಡ್‌ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ನಮ್ಮ ದಾರಿ ನಮಗೆ. ಇಷ್ಟೆಲ್ಲಾ ಬೆಳವಣಿಗೆ ಆದರೂ ನಮಗೆ ಹೈಕಮಾಂಡ್‌ನಿಂದ ಖಚಿತ ಭರವಸೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಈ ಮಧ್ಯೆ, ವಿಧಾನಸಭೆ ಉಪಾಧ್ಯಕ್ಷ ಜೆಡಿಎಸ್‌ನ ಕೃಷ್ಣಾರೆಡ್ಡಿ ಕಾಂಗ್ರೆಸ್‌ನ 17 ಶಾಸಕರು ಸೇರಿದಂತೆ 18 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹರಡಿದ್ದು,  ಖಚಿತಗೊಂಡಿಲ್ಲ. ಸಿದ್ದರಾಮಯ್ಯ ಅವರ ಭೇಟಿ ನಂತರ ಮಾಧ್ಯಮದವರ ಜತೆಯೂ ಮಾತನಾಡದೆ ಕಾರಿನಲ್ಲಿ ಏಕಾಂಗಿಯಾಗಿ ರಮೇಶ್‌ ಜಾರಕಿಹೊಳಿ ನಿರ್ಗಮಿಸಿದ್ದು ಕುತೂಹಲ ಮೂಡಿಸಿದೆ. ಅವರ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ.

ಈ  ನಡುವೆ , ಹೈಕಮಾಂಡ್‌ ಸತೀಶ್‌ ಜಾರಕಿಹೊಳಿಗೆ ಬುಲಾವ್‌ ನೀಡಿದ್ದು, ಮಂಗಳವಾರ ಅಥವಾ ಬುಧವಾರ ದೆಹಲಿಗೆ ತೆರಳಲಿದ್ದಾರೆ. ರಮೇಶ್‌ ಜಾರಕಿಹೊಳಿ ಜತೆಗಿನ ಮಾತುಕತೆ ವಿವರವನ್ನೂ ಸಿದ್ದರಾಮಯ್ಯ ಅವರು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬುಧವಾರ ಸಿದ್ದರಾಮಯ್ಯ ಸಹ ದೆಹಲಿಗೆ ತೆರಳಲಿದ್ದಾರೆ. ಇದೇ ಸಂದರ್ಭದಲ್ಲಿ  ರಮೇಶ್‌ ಜಾರಕಿಹೊಳಿ ಅವರಿಗೂ ಹೈಕಮಾಂಡ್‌ ಬುಲಾವ್‌ ನೀಡಬಹುದು ಎಂದು ತಿಳಿದು ಬಂದಿದೆ.

Advertisement

ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಶಾಸಕರಿಗಿಂತ ಕುಮಾರಸ್ವಾಮಿ ಮಾತಿನಂತೆ ನಡೆಸುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರ ಮೂಲಕವೇ ಅದನ್ನು ಹೈಕಮಾಂಡ್‌ ಮುಂದೆ ಪ್ರಸ್ತಾಪಿಸಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮ ಹಿಡಿತ ಬಿಗಿಗೊಳಿಸುವ ಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹೊಸ ಬಾಂಬ್‌
ಜಾರಕಿಹೊಳಿ ಸಹೋದರರ ಅತೃಪ್ತಿ ಶಮನಗೊಳಿಸುವ ಪ್ರಯತ್ನಗಳ ಬೆನ್ನಲ್ಲೇ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್‌ ಸಮ್ಮಿಶ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್‌ ಶಾಸಕರಿಗೆ ಬೆಲೆ ಇಲ್ಲದಂತಾಗಿದೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿ ನನ್ನ ನಿರ್ಧಾರ ತಿಳಿಸುವೆ ಎಂದು “ಬಾಂಬ್‌’ಸಿಡಿಸಿದ್ದಾರೆ.

ಮತ್ತೂಂದೆಡೆ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದ ಪಕ್ಷೇತರ ಶಾಸಕ ನಾಗೇಶ್‌ ಸಹ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಸಹ ಸಿದ್ದರಾಮಯ್ಯ ಅವರನ್ನು ಭೇಟಿ ಸರ್ಕಾರದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಹೀಗಾಗಿ, ಒಂದು ಕಡೆಯಿಂದ ಸಮಸ್ಯೆ ಬಗೆಹರಿಸುತ್ತಿದ್ದರೆ ಮತ್ತೂಂದು ಕಡೆಯಿಂದ ಹೊಸ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಒಟ್ಟಾರೆ ಸಮ್ಮಿಶ್ರ ಸರ್ಕಾರದ ಮೇಲಿನ ತೂಗುಕತ್ತಿ ನೇತಾಡುವುಂತಾಗಿದೆ.

ಚಟುವಟಿಕೆ ಕೇಂದ್ರ
ಸೋಮವಾರ ಇಡೀ ದಿನ ಸಿದ್ದರಾಮಯ್ಯ ಅವರ ನಿವಾಸ ಚಟುವಟಿಕೆಯ ಕೇಂದ್ರವಾಗಿತ್ತು. ಸಚಿವ ಪುಟ್ಟರಂಗ ಶೆಟ್ಟಿ, ಶಾಸಕ ಭೀಮಾ ನಾಯ್ಕ, ಪಿ.ಟಿ. ಪರಮೇಶ್ವರ್‌ ನಾಯ್ಕ, ಡಾ.ಕೆ.ಸುಧಾಕರ್‌, ಬೈರತಿ ಸುರೇಶ್‌, ಬಿ.ಸಿ.ಪಾಟೀಲ್‌, ಮಾಜಿ ಶಾಸಕರಾದ, ಚಲುವರಾಯಸ್ವಾಮಿ ಹಾಗೂ ಮಾಜಿ ಶಾಸಕರಾದ ಎಚ್‌.ಸಿ. ಬಾಲಕೃಷ್ಣ, ಅಶೋಕ್‌ ಪಟ್ಟಣ್‌, ವೀರಣ್ಣ ಮತ್ತೀಕಟ್ಟಿ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಸಂಜೆ ರಮೇಶ್‌ ಜಾರಕಿಹೊಳಿ ಸಹ ಭೇಟಿ ಮಾಡಿ ಸುಮಾರು ಹೊತ್ತು ಚರ್ಚಿಸಿದರು.

ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ , ಕಾಂಗ್ರೆಸ್‌ ಶಾಸಕರು, ಮುಖಂಡರ ಕೆಲಸ ಕಾರ್ಯಗಳು ಆಗದಿರುವ ಬಗ್ಗೆ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿಯವರು ಲೋಕಸಭೆ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಜೆಡಿಎಸ್‌ಜತೆ ಮೈತ್ರಿ ಮಾಡಿಕೊಳ್ಳುವ ತೀರ್ಮಾನ ಮಾಡಿ ಸರ್ಕಾರ ರಚನೆಯಾಗಿದೆ. ಏನಾದರೂ ವ್ಯತ್ಯಾಸ ಇದ್ದರೆ ಸರಿಪಡಿಸೋಣ. ಆದರೆ, ಯಾರೂ ಧೃತಿಗೆಡಬೇಡಿ ಎಂದು ಸಿದ್ದರಾಮಯ್ಯ ಸಮಾಧಾನಪಡಿಸಿದರು. ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಏಕಪಕ್ಷೀಯ ತೀರ್ಮಾನ ಕೈಗೊಳ್ಳದಂತೆ ನೋಡಿಕೊಳ್ಳಲಾಗುವುದು. ಸಮನ್ವಯ ಸಮಿತಿ ಸಭೆಯಲ್ಲೂ ಆ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು ಎನ್ನಲಾಗಿದೆ. ಮತ್ತೂಂದೆಡೆ ಕಾಂಗ್ರೆಸ್‌ನ ಕೆಲವು ಶಾಸಕರು ರಮೇಶ್‌ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಈ ನಡುವೆ ಬೆಳಗಾವಿಯಲ್ಲಿ ಮಾತನಾಡಿದ ಸತೀಶ್‌ ಜಾರಕಿಹೊಳಿ, ನಾಳೆ ಅಥವಾ ನಾಳಿದ್ದು ದೆಹಲಿಗೆ ಬರುವಂತೆ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ತಿಳಿಸಿದ್ದಾರೆ. ಪಕ್ಷದ ರಾಜ್ಯ ರಾಜಕಾರಣದ ಬೆಳವಣಿಗೆ ಕುರಿತು ಚರ್ಚಿಸಲು ದೆಹಲಿಗೆ ಬರುವಂತೆ ಹೇಳಿದ್ದಾರೆ. ಈ ಭೇಟಿಯಲ್ಲಿ ವಿಶೇಷ ಏನೂ ಇಲ್ಲ. ರಾಹುಲ್‌ ಗಾಂಧಿ ಭೇಟಿ ಆಗುವುದಿಲ್ಲ, ವೇಣುಗೋಪಾಲ್‌ ಅವರನ್ನು ಮಾತ್ರ ಭೇಟಿಯಾಗುತ್ತೇನೆ.ಸಣ್ಣಪುಟ್ಟ ಸಮಸ್ಯೆ ಇತ್ಯರ್ಥಪಡಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಅವರನ್ನು ದೆಹಲಿಗೆ ಬರಲು ಹೇಳಿದ್ದಾರೆ ಎಂದು ಹೇಳಿದರು.

ಸಚಿವ ಸ್ಥಾನ ರಮೇಶ್‌ ಬದಲು ನನಗೆ ನೀಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಎರಡು ವರ್ಷಗಳ ಕಾಲ ರಮೇಶ್‌ ಅವರು ಸಚಿವರಾಗಿರುತ್ತಾರೆ. ಆ ನಂತರ ನನ್ನನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಲಾಗಿದೆ. ಅದುವರೆಗೂ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು. ಈಗಿನವರೆಗೆ ಸಮಸ್ಯೆಗಳೆಲ್ಲವೂ ಮುಗಿದ ಅಧ್ಯಾಯ. ಸರ್ಕಾರಕ್ಕೆ ನಾವು ಸಂಪೂರ್ಣ ಬೆಂಬಲ ಕೊಡುತ್ತೇವೆ. ಇಲ್ಲಿಗೆ ಇದನ್ನು ಮುಗಿಸಿದರೆ ಒಳ್ಳೆಯದು ಎಂದು ಹೇಳಿದರು.

ನಾನ್ಯಾಕೆ ರಾಜೀನಾಮೆ ಕೊಡಬೇಕು. ನಮ್ಮ ನಡುವೆ ಯಾವುದೇ ವೈಮನಸ್ಯ ಇಲ್ಲ. ವಿದೇಶದಿಂದ ಸಿದ್ದರಾಮಯ್ಯ ಅವರು ವಾಪಸ್ಸಾಗಿದ್ದಾರೆ. ಅವರಿಗೆ ವಿಶ್‌ ಮಾಡಲು ಬಂದಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ.  ನಮ್ಮ ನಾಯಕರನ್ನು ಮಾತನಾಡಿಸಲು ಬಂದಿದ್ದೇನೆ. ನಾನು ಯಾರ ಜತೆಯಲ್ಲೂ ಪ್ರತ್ಯೇಕ ಸಭೆ ನಡೆಸಿಲ್ಲ.
– ರಮೇಶ್‌ ಜಾರಕಿಹೊಳಿ, ಸಚಿವ

ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದಿರುವುದು.ನನ್ನನ್ನು ಮಂತ್ರಿ ಮಾಡದಿರುವ ಬಗ್ಗೆ ಅಸಮಾಧಾನವಿದೆ. ನನ್ನ ಸ್ನೇಹಿತರ ಜೊತೆ ಚರ್ಚಿಸಿ ಮಂಗಳವಾರ ನನ್ನ ನಿರ್ಧಾರ ಪ್ರಕಟಿಸುತ್ತೇನೆ.
– ಎಂ.ಟಿ.ಬಿ.ನಾಗರಾಜ್‌, ಹೊಸಕೋಟೆ ಶಾಸಕ

ನಮ್ಮ ಜಿಲ್ಲೆಯಲ್ಲಿ ರಾಜಕೀಯವಾಗಿ ಕೆಲವು ಸಮಸ್ಯೆಗಳಿವೆೆ. ಈ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿದ್ದೇನೆ. ಬಿಜೆಪಿಯವರು ಆಪರೇಷನ್‌ ಕಮಲ ಮಾಡುತ್ತಿರುವ ಬಗ್ಗೆ ಗೊತ್ತಿಲ್ಲ.  ಆಪರೇಷನ್‌ ಮಾಡಿಸಿಕೊಳ್ಳಲು ನಾನು ಪೇಷೆಂಟ್‌ ಅಲ್ಲಾ. ನಾನು ನಿಷ್ಠಾವಂತ ಕಾಂಗ್ರೆಸ್ಸಿಗ .
-ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಶಾಸಕ

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಸರಿಯಾಗಿ ಆಗುತ್ತಿಲ್ಲ.  ನನಗೆ ಕಾಂಗ್ರೆಸ್‌ ನೀಡಿದ್ದ ಭರವಸೆಯಂತೆ ಸೂಕ್ತ ಸ್ಥಾನಮಾನ ನೀಡದೆ ನಿರ್ಲಕ್ಷ್ಯ ಮಾಡಲಾಗಿದೆ. ಸರ್ಕಾರದಲ್ಲಿ ನಮ್ಮ ಮಾತಿಗೆ ಬೆಲೆಯೇ ಇಲ್ಲವಾಗಿದೆ. ಅನ್ನ ಬಡಿಸಿ ಸಾಂಬಾರ್‌ ಹಾಕುವ ವೇಳೆ ತಟ್ಟೆ ಕಿತ್ತುಕೊಳ್ಳುತ್ತಾರೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ.
– ನಾಗೇಶ್‌, ಪಕ್ಷೇತರ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next