ಬೆಳಗಾವಿ: ಅನರ್ಹ ಶಾಸಕ ರಮೇಶ ಜಾರಕಿಹೊಳಿ ಉಪ್ಪಿನಕಾಯಿ ಹೋಳಿನಂತೆ, ಅವನನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಗೋಕಾಕನಲ್ಲಿ ಅಂಬಿರಾವ ಪಾಟೀಲ್ ಸಾಮ್ರಾಜ್ಯ ಕಟ್ಟಿದ್ದು, ಆ ಸಾಮ್ರಾಜ್ಯವನ್ನು ಧ್ವಂಸ ಮಾಡಲು ನಮಗೆ ಗೊತ್ತು ಶಾಸಕ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿಗೆ ಅಂಬಿರಾವ ಎಂದರೆ ಜಿಪಿ ಹೋಲ್ಡರ್ ಇದ್ದಂತೆ, ಆತನನ್ನು ನಿಯಂತ್ರಣ ಮಾಡಬೇಕಿದೆ ಅದನ್ನು ಮಾಡಲು ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ಅಂಬಿರಾವ ಪ್ರಭಾವವನ್ನು ಕಡಿಮೆಗೊಳಿಸಬೇಕಿದೆ. ಜಾರಕಿಹೊಳಿ ನಾಮ್ ಕೇ ವಾಸ್ತೆ ಇದ್ದ ಹಾಗೆ. ನಮ್ಮದೇನೂ ಗೋಕಾಕನಲ್ಲಿ ಇಲ್ಲದಂತಾಗಿದ್ದು, ಹೀಗಾಗಿ ಅಂಬಿರಾವನ ದರ್ಬಾರ್‌ಗೆ ಬ್ರೇಕ್ ಹಾಕುತ್ತೇವೆ ಮಾತ್ರವಲ್ಲದೇ ಅವರ ಸಾಮ್ರಾಜ್ಯವನ್ನು ಒಡೆದು ಹಾಕುತ್ತೇವೆ ಎಂದು ಸತೀಶ್ ಅವರು ಆತ್ಮವಿಶ್ವಾಸದಿಂದ ನುಡಿದರು.
ಜಾರಕಿಹೊಳಿ ಸಾಮ್ರಾಜ್ಯವನ್ನು ಒಳ್ಳೆಯ ಉದ್ದೇಶಕ್ಕಾಗಿ ಕಟ್ಟಲಾಗಿದೆ. ಆದರೆ ಅದು ಈಗ ಅದು ಆಗುತ್ತಿಲ್ಲ. ಹೀಗಾಗಿ ಅದನ್ನು ಒಡೆಯುವ ಕೆಲಸ ಮಾಡಲೇಬೇಕಿದೆ. ಸಮಾಜಕ್ಕೆ ಉಪಯೋಗ ಆಗಬೇಕು. ಜನರಿಗೆ ನ್ಯಾಯ ಒದಗಿಸಬೇಕೆಂಬ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ.
ಗೋಕಾಕನಲ್ಲಿ ಸಾಮ್ರಾಜ್ಯ ಕಟ್ಟಿದ್ದು ನಾನು, ನನ್ನನ್ನು ನಂಬಿದ ಜನರು ಅಲ್ಲಿದ್ದಾರೆ. ಹೀಗಾಗಿ ಗೋಕಾಕಕ್ಕೆ ಹೋಗುತ್ತೇನೆ ಎಂದು ಸತೀಶ್ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಆಪರೇಷನ್ ಕಮಲಕ್ಕೆ ನಾನು ಮತ್ತು ಎಂ.ಬಿ. ಪಾಟೀಲ ಅವರು ಕಾರಣ ಅಲ್ಲ. ರಮೇಶ್ ಅವರ ಪರವಾಗಿ ನಾವು ಹೋಗಿದ್ದೆವು, ನಮ್ಮಲ್ಲಿದ್ದ ಭಿನ್ನಮತವನ್ನು ಆಗಿನ ಮುಖ್ಯಮಂತ್ರಿಗಳು ಬಗೆಹರಿಸಿದ್ದರಿಂದ ಸುಮ್ಮನಾದೇವು ಆದರೆ ರಮೇಶ್ ಮಾತ್ರ ಭಿನ್ನಮತವನ್ನು ಮುದುವರಿಸಿದರು ಎಂದು ಅವರು ತಮ್ಮ ಸಹೋದರನ ವಿರುದ್ಧ ಕಿಡಿ ಕಾರಿದರು.
ಇನ್ನೂ ಹತ್ತರಿಂದ ಹನ್ನೆರಡು ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಕುರಿತು ರಮೇಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ‘ಮೊದಲಿಂದಲೂ ರಮೇಶ್ ಈ ತರಹ ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಮಂತ್ರಿ ಸ್ಥಾನ ತಪ್ಪಿದವರ ಭಿನ್ನಮತ ಜೋರಾಗಿದೆ ಆ ಊಹೆಯ ಮೇಲೆ ರಮೇಶ್ ಈ ರೀತಿಯಾಗಿ ಹೇಳಿರಬಹುದು ಎಂದವರು ಅಭಿಪ್ರಾಯಪಟ್ಟರು.
ರಮೇಶನ ವರ್ಚಸ್ಸು ಕಡಿಮೆ ಆಗುತ್ತಿರುವುದರಿಂದ ಶಕ್ತಿ ಪ್ರದರ್ಶನ ಮಾಡಲು ಸವದತ್ತಿ, ಅರಭಾವಿ, ಅಥಣಿ ಕ್ಷೇತ್ರದ ಜನರನ್ನು ಕರೆ ತಂದು ಸಂಕಲ್ಪ ಸಮಾವೇಶ ಮಾಡಿದ್ದಾರೆ ಎಂದು ದೂರಿದರು.
ಲಕ್ಷ್ಮೀ ರಮೇಶನ ರಕ್ಷಣೆಗೆ ಬರಲ್ಲ: ಸತೀಶ ಜಾರಕಿಹೊಳಿ ವ್ಯಂಗ್ಯ
ಗೋಕಾಕನಲ್ಲಿ ನಿಂತು ದೇವರಿಗೆ ರಮೇಶ ಕೈ ಮುಗಿಬೇಕಿತ್ತು. ಅದನ್ನ ಬಿಟ್ಟು ಕೇದಾರನಾಥಗೆ ಏಕೆ ಹೋಗಬೇಕಿತ್ತು. ದೇವರು ಎಂದರೆ ನಮಗೆ ಜನ ಸೇವೆ. ಜನರೇ ನಮಗೆ ದೇವರು. ಅದನ್ನು ಬಿಟ್ಟು ಅನಾವಶ್ಯಕವಾಗಿ ಎಲ್ಲ ದೇವರ ಗುಡಿ ಸುತ್ತುವುದು ಏಕೆ. ಈ ಸಲ ಕೇದಾರನಾಥ, ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ, ಪುಳೆ ಗಣಪತಿ ದೇವರು ರಮೇಶ ಜಾರಕಿಹೊಳಿಯ ರಕ್ಷಣೆಗೆ ನಿಲ್ಲುವುದಿಲ್ಲ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತಮ್ಮ ಸಹೋದರನ ಬಗ್ಗೆ ವ್ಯಂಗ್ಯವಾಡಿದರು.