Advertisement

ಸೋತವರನ್ನು ಸಂತೈಸುವುದು ದೊಡ್ಡ ಕೆಲಸ

09:57 PM May 25, 2019 | Team Udayavani |

ಮೈಸೂರು: ಗೆದ್ದವರನ್ನು ಹೊತ್ತು ಮೆರೆಯುವ ಈ ದಿನಗಳಲ್ಲಿ , ಸೋತವರನ್ನು ಸಂತೈಸಿ ಗೆಲುವಿನ ಹಾದಿ ತೋರಿಸಲು ಮುಂದಾಗಿರುವುದು ಶ್ಲಾಘನೀಯ ಕ್ರಮ ಎಂದು ವಿಮರ್ಶಕ ಪ್ರೊ.ಸಿ.ನಾಗಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಅಖೀಲ ಕರ್ನಾಟಕ ಪಿಯು ಕಾಲೇಜು ಉಪನ್ಯಾಸಕರ ಹಿತರಕ್ಷಣಾ ಸಂಘ ಹಾಗೂ ಮೈಸೂರು ಜಿಲ್ಲಾ ಪಿಯು ಒಕ್ಕೂಟದಿಂದ ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿರುವ ದ್ವಿತೀಯ ಪಿಯು ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಗತಿಗಳ ಶುಭ ಹಾರೈಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಪ್ರಪಂಚ ಯಾವತ್ತೂ ಕೂಡ ಗೆದ್ದವರ ಪರವಾಗಿಯೇ ಇರುತ್ತೆ. ಗೆದ್ದವರನ್ನು ಹೊಗಳುವ, ಹೆಗಲ ಮೇಲೆ ಹೊತ್ತು ಮೆರೆಯುವುದನ್ನು ರಾಜಕೀಯದಲ್ಲಿ ಹೆಚ್ಚಾಗಿ ಕಾಣಬಹುದು. ಅಂತೆಯೇ ರಾಜಕೀಯದಲ್ಲಿ ಸೋಲನ್ನೇ ಕಾಣದ ಘಟಾನುಘಟಿ ನಾಯಕರುಗಳೂ ಸೋತು ಸುಣ್ಣವಾದಾಗ ಏಕಾಂಗಿಯಾಗುವುದನ್ನೂ ಕಾಣಬಹುದು.

ಸೋತವರನ್ನು ಸಂತೈಸುವ, ಸಾಂತ್ವನ ಹೇಳಿ ಅವರು ಮತ್ತೆ ಎದ್ದು ನಿಲ್ಲುವಂತೆ ಪ್ರೋತ್ಸಾಹಿಸುವವರ ಸಂಖ್ಯೆ ಬಹಳ ವಿರಳ. ಇಂತಹ ದಿನಗಳಲ್ಲಿ ಈ ಸಂಸ್ಥೆ ಸೋತ ವಿದ್ಯಾರ್ಥಿಗಳನ್ನು ಸಂತೈಸಿ, ಗೆಲುವಿಗೆ ಹುರಿದುಂಬಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಪ್ರಯತ್ನ ಎಂದರು.

ಮನೆಯಲ್ಲಿ ಓದಿಗೆ ಅನುಕೂಲಕರ ವಾತಾವರಣ ಇಲ್ಲದಿರುವುದು, ಪೋಷಕರ ಪ್ರೋತ್ಸಾಹ ಸಿಗದಿರುವುದೂ ಕೂಡ ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳಲು ಕಾರಣವಾಗಿದೆ. ಜೊತೆಗೆ ವಿದ್ಯಾರ್ಥಿಗಳ ಸಹವಾಸ ದೋಷದಿಂದ ಏಕಾಗ್ರತೆ ಕೊರತೆ ಸೇರಿದಂತೆ ಹಲವು ಕಾರಣಗಳಿವೆ. ವಿದ್ಯಾರ್ಥಿಗಳು ಇವುಗಳನ್ನೆಲ್ಲ ಮೆಟ್ಟಿನಿಂತು ಓದಿನಲ್ಲಿ ಗೆಲುವು ಸಾಧಿಸಿದಾಗ, ಜೀವನವನ್ನು ಗೆಲ್ಲಲು ಸಾಧ್ಯ ಎಂದು ಹೇಳಿದರು.

Advertisement

ಹದಿಹರೆಯದ ವಿದ್ಯಾರ್ಥಿಗಳ ಮನಸ್ಸು ಚಂಚಲ. ಮನೆಯಲ್ಲಿ ಹಿರಿಯರು ಮಾದರಿ ಬದುಕು ನಡೆಸುತ್ತಿದ್ದಲ್ಲಿ ಮಕ್ಕಳು ಕೂಡ ಅವರನ್ನು ಅನುಸರಿಸುತ್ತಾರೆ. ಮನೆಯಲ್ಲಿ ಮಕ್ಕಳ ಓದಿಗೆ ಪ್ರತ್ಯೇಕ ಕೊಠಡಿಯಿಲ್ಲದೆ ಟಿವಿ ಇರುವ ಹಾಲ್‌ನಲ್ಲೇ ಓದುವುದು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ತರದು. ಹೆಣ್ಣು ಮಕ್ಕಳು ಧಾರಾವಾಹಿ, ಬಿಗ್‌ಬಾಸ್‌ ನೋಡದೆ ಪುಸ್ತಕಗಳಿಗೆ ಮೊರೆ ಹೋದರೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸೋಲಿನ ಅನುಭವದಿಂದ ಬಿಡುಗಡೆಯಾದಂತೆ ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ದಯಾನಂದ, ಕಾಲೇಜಿನ ಪ್ರಾಂಶುಪಾಲ ಎಚ್‌.ಎನ್‌.ಸತೀಶ್‌ ಕುಮಾರ್‌, ಸಂಘದ ರಾಜ್ಯಾಧ್ಯಕ್ಷ ಕಾಟ್ನೂರು ಶಿವೇಗೌಡ, ಮೈಸೂರು ಜಿಲ್ಲಾ ಪಿಯು ಒಕ್ಕೂಟದ ಗೌರವಾಧ್ಯಕ್ಷ ಬಾಲಸುಬ್ರಹ್ಮಣ್ಯಂ, ಹುಣಸೂರು ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಪ್ರಾಂಶುಪಾಲ ಚಲುವಯ್ಯ,ರತ್ನ, ಎಚ್‌.ಎಂ.ನಂಜುಂಡಸ್ವಾಮಿ, ಪರಿಮಳ, ಜನಾರ್ದನ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next