Advertisement

ಬ್ಯಾಸಗ್ಯಾಗ ಪ್ರವಾಹ ಬಂದೈತಂದ್ರ, ಪೊಲಿಟಿಕ್ಸ್‌ ನ್ಯಾಗೂ ಸೈಕ್ಲೋನ್‌ ಬರತೈತಿ!

01:16 PM May 22, 2022 | Team Udayavani |

ಅಕ್ಕನ ಮಗಳ ಮದುವ್ಯಾಗ ಯಾ ಸೀರಿ ಉಟ್ಕೊಳ್ಳಿ ಅಂತ ಯಜಮಾನ್ತಿ ಇರೊ ಬರೊ ಟ್ರಂಕು, ಸೂಟ್ಕೇಸು, ಟೆಜೂರಿ ಎಲ್ಲಾನೂ ತಗದು ನೋಡಿದ್ಲು ಎಲ್ಲಾದ್ರಾಗೂ ಸೀರಿನ ತುಂಬ್ಯಾವು. ಹೊಸಾ ಸೀರಿ ಅಕ್ಕಿಕಾಳ ದಿನಾ ಆದ್ರ, ಇಳೆಕೊಂದು, ಅರಿಷ್ಣಕ್ಕೊಂದು ಬೇಕಲ್ಲಾ, ಯಾ ಟೈಮಿಗಿ ಯಾ ಸೀರಿ ಉಟ್ಕೊಳ್ಳಲಿ ಅನ್ನೂದ ತಿಳಿದಂಗಾಗಿ, ನಮ್ಮಿಬ್ರದ ಕೋರ್‌ ಕಮಿಟಿ ಸಭೆ ಕರದ್ಲು, ನಾನೂ ಸೀರಿ ಅಂಗಡ್ಯಾರಂಗ ಒಂದಿಪ್ಪತ್ತು ಸೀರಿ ತೋರಿಸಿದ್ನಿ.

Advertisement

ಬಿಜೆಪಿ ಕೋರ್‌ ಕಮಿಟ್ಯಾಗ ಬ್ಯಾರೆ ಯಾರದರ ಹೆಸರು ಕಳಿಸಿದ್ರು ಅದ್ರಾಗ ತಮ್ಮ ಮಗ ವಿಜಯೇಂದ್ರಂದು ಒಂದು ಹೆಸರು ಇರಬೇಕು ಅಂತ ಯಡಿಯೂರಪ್ಪ ಪ್ಲ್ರಾನ್‌ ಮಾಡಿದಂಗ ಮದುವಿ ದಿನ ಉಟ್ಕೊಳ್ಳೂದು ಒಂದು ಸೀರಿ ಫಿಕ್ಸ್‌ ಮಾಡಿ ಉಳಿದಿದ್ದು ಯಾವುದರ ಉಟ್ಕೊ ಅಂತೇಳಿ ಎಂಟತ್ತು ಸೀರಿನ ಪ್ಯಾಕ್‌ ಮಾಡಿ, ಬಿಜೆಪ್ಯಾರು ಪರಿಷತ್‌ ಎಲೆಕ್ಷನ್‌ ಗೆ ಇಪ್ಪತ್ತು ಮಂದಿ ಹೆಸರು ಕಳಿಸಿದಂಗ ಕಳಿಸಿದ್ನಿ.

ಯಡಿಯೂರಪ್ಪ ಸಾಹೇಬ್ರು ತಮ್ಮ ಮಗನ ಪರಿಷತ್‌ ಮೇಂಬರ್‌ ಮಾಡಬೇಕು ಅನ್ನುದ್ಕಿಂತ ತಮ್ಮ ಬಗ್ಗೆ ಹೈಕಮಾಂಡ್‌ ಮೈಂಡನ್ಯಾಗ ಏನೈತಿ ಅನ್ನೂದ್ನ ತಿಳಕೊಳ್ಳಾಕ ಈ ದಾಳಾ ಉರುಳಿಸ್ಯಾರು ಅನಸ್ತೈತಿ. ಕೋರ್‌ ಕಮಿಟ್ಯಾರು ನಾಕ್‌ ಸೀಟಿಗೆ ಇಪ್ಪತ್ತು ಮಂದಿ ಹೆಸರು ಕಳಿಸ್ಯಾರಂತ. ಬಿಜೆಪ್ಯಾಗ ಯಡಿಯೂರಪ್ಪ ಮತ್‌ ಹೈಕಮಾಂಡ್‌ ನಡಕ ಒಂದ್‌ ರೀತಿ ಕೋಲ್ಡ್ ವಾರ್‌ ನಡ್ಯಾಕತ್ತೇತಿ ಅಂತ ಅನಸ್ತೈತಿ. ಮೇ ತಿಂಗಳ ಬ್ಯಾಸಿಗ್ಯಾಗನ ಪ್ರವಾಹ ಬರುವಂಗ ಮಳಿ ಸುರ್ಯಾಕತ್ತೇತಿ ಅಂದ್ರ, ಬಿಜೆಪಿ ಎಂಎಲ್‌ಸಿ ಕ್ಯಾಂಡಿಡೇಟ್ಸ್‌ ಪಟ್ಟಿ ರಿಲೀಸ್‌ ಆದ್ರ, ಬಿಜೆಪ್ಯಾಗೂ ಸೈಕ್ಲೋನ್‌ ಏಳೂವಂಗ ಕಾಣತೈತಿ.

ಬಿಜೆಪಿ ಹೈಕಮಾಂಡ್‌ ವಿಜಯೇಂದ್ರಗ ಈ ಸಾರಿ ಪಕ್ಷದ ಕೆಲಸಾ ಮಾಡ್ರಿ ಅಂತ ಹೇಳ್ತಾರಂತ, ವಿಜಯೇಂದ್ರನೂ ಅದಕ್ಕ ಒಪ್ಕೊಂಡು ಕೆಲಸಾ ಮಾಡಾಕತ್ತಾರು ಅನಸ್ತೈತಿ. ಆದ್ರ ಯಡಿಯೂರಪ್ಪ ಸಾಹೇಬ್ರು ಇದ ಅವಧ್ಯಾಗ ಮಗನ ಎಂಎಲ್‌ಸಿ ಮಾಡಿ, ಮಂತ್ರಿನೂ ಮಾಡಬೇಕು ಅಂದ್ಕೊಂಡಗೈತಿ. ಅವರು ಮಾಡಾಕತ್ತಿದ್ದು ನೋಡಿದ್ರ ರಾಜ್ಯದಾಗ ಬಿಜೆಪಿ ಪರಿಸ್ಥಿತಿ ಏನೈತಿ ಅಂತ ಅವರಿಗೆ ಭವಿಷ್ಯ ಗೊತ್ತಾದಂಗ ಕಾಣತೈತಿ.

ಹಂಗ ನೋಡಿದ್ರ ವಿಜಯೇಂದ್ರಗ ಭವಿಷ್ಯದಾಗ ಲೀಡರ್‌ ಆಗಾಕ್‌ ಎಲ್ಲಾ ರೀತಿ ಅವಕಾಶ ಆದಾವು, ಅವಸರಕ ಬಿದ್ದು ಎಂಎಲ್‌ಸಿ ಆಗಗೋಡ, ಎಂಎಲ್‌ಎ ಎಲೆಕ್ಷ್ಯನ್‌ ನ್ಯಾಗ ಟಿಕೆಟ್‌ ಕೊಡುದಿಲ್ಲ ಅಂದ್ರ ಹೈಕಮಾಂಡ್‌ ಜೋಡಿ ಜಗಳಾ ಮಾಡೂದು ಕಷ್ಟ ಅಕ್ಕೇತಿ.

Advertisement

ಈಗ ವಿಜಯೇಂದ್ರನ ಹೆಸರು ಹೈಕಮಾಂಡ್‌ಗೂ ಬಿಸಿ ತುಪ್ಪ ಆದಂಗ ಅಗೈತಿ. ಟಿಕೆಟ್‌ ಕೊಟ್ರ ಮತ್‌ ಫ್ಯಾಮಿಲಿ ಪೊಲಿಟಿಕ್ಸ್‌ಗೆ ಅವಕಾಶ ಇಲ್ಲ ಅನಕೋಂತನ ಸಪೋರ್ಟ್‌ ಮಾಡಿದಂಗ ಅಕ್ಕೇತಿ. ಈಗಿನ ಪರಿಸ್ಥಿತ್ಯಾಗ ಬಿಜೆಪ್ಯಾಗ ಭಾಳ ಮಂದಿ ಅಪ್ಪಗೋಳು ಮಕ್ಕಳಿಗೂ ಒಂದು ಟಿಕೆಟ್‌ ಕೊಡಸ್ಬೇಕಂತ ಕಾಯಾಕತ್ತಾರು.

ಕುಟುಂಬ ರಾಜಕಾರಣನ ಮಾಡ್ಕೊಂಡು ಬಂದಿರೊ ಕಾಂಗ್ರೆಸ್‌ ಪಾರ್ಟಿನ ಒಂದು ಕುಟುಂಬಕ್ಕ ಒಂದ ಟಿಕೆಟ್‌ ಅಂತ ಹೇಳಾಕತ್ತಾರು. ಅಂತಾದ್ರಾಗ ಫ್ಯಾಮಿಲಿ ಪೊಲಿಟಿಕ್ಸ್‌ ಮಾಡೊ ಕಾಂಗ್ರೆಸ್‌ನ ಬೈಕೋಂತ ಬಂದಿರೊ, ಬಿಜೆಪ್ಯಾರು ತಾವಾದ್ರು ಹೇಳಿದಂಗ ನಡಕೋಬೇಕಲ್ಲಾ.

ಈ ಸಾರಿ ಗಟ್ಟಿ ನಿರ್ಧಾರ ಮಾಡೂದ್ಕ ಬಿಜೆಪಿ ಹೈಕಮಾಂಡ್‌ ಎಲ್ಲಾ ರೀತಿ ಕಸರತ್ತು ನಡೆಸ್ಯಾರು ಅಂತ ಅನಸ್ತೆತಿ. ಅದ್ಕ ಸಿಎಂ ಬೊಮ್ಮಾಯಿ ದಿಲ್ಲಿ ಪ್ಲೈಟ್‌ ಹತ್ತಗೋಡ ಹೋಮ್‌ ಮಿನಿಸ್ಟರ್‌ ಆರಗ ಜ್ಞಾನೇಂದ್ರ ರಾತ್ರೊ ರಾತ್ರಿ ದಿಲ್ಲಿ ಫ್ಲೈಟ್‌ ಹತ್ತಿ ಬೆಳಕಾಗೂದ್ರಾಗ ವಾಪಸ್‌ ಬೆಂಗಳೂರಿಗಿ ಬಂದಾರು ಅಂದ್ರ, ಅವರೇನು ಯಾರದರ ಜೋಡಿ ಬಾಜಿ ಕಟ್ಟಿ ದಿಲ್ಲಿಗಿ ಹೋಗಿ ವಿಮಾನ ನಿಲ್ದಾಣದಾಗ ಚಾ ಕುಡುದು ಬರಾಕ್‌ ಹೋಗಿದ್ರ? ಅಷ್ಟ ಅಲ್ಲಾ, ಅವರದ ಪಕ್ಷದಾಗಿರೊ ಎಸ್‌. ಎಂ.ಕೃಷ್ಣಾ ಹುಟ್ಟಿದ ಹಬ್ಬಕ ವಿಶ್‌ ಮಾಡಾಕ ಹೋಗದಿರೊ ಹೋಮ್‌ ಮಿನಿಸ್ಟರ್‌ ಪದ್ಮನಾಭನಗರಕ್ಕ ಹೋಗಿ ಬೊಕ್ಕೆ ಕೊಟ್ಟು ದೊಡ್‌ ಗೌಡ್ರಿಗಿ ಬರ್ಥ್ ಡೆ ವಿಶ್‌ ಮಾಡ್ಯಾರಂದ್ರ ಅವರಾಗೇ ಏನು ಹೋಗಿರಂಗಿಲ್ಲ.

ಬಿಜೆಪಿ ಹೈಕಮಾಂಡ್‌ ಮುಂದಿನ ಸಾರಿನೂ ಕಾಂಗ್ರೆಸ್‌ನ್ಯಾರಿಗೆ ಅಧಿಕಾರ ಸಿಗದಂಗ ನೋಡ್ಕೊಬೇಕು ಅನ್ನು ಲೆಕ್ಕಾಚಾರ ಇದ್ದಂಗ ಐತಿ ಅನಸ್ತೈತಿ. ಈಗಿನ ಪರಿಸ್ತಿತ್ಯಾಗ ರಾಜ್ಯದಾಗ ಕಾಂಗ್ರೆಸ್‌ಗೆ ಚೊಲೊ ವಾತಾವರಣ ಐತಿ ಅಂತಾರು, ಆದ್ರ, ಇಲೆಕ್ಷನ್‌ ಬರೂಮಟಾ ಕೆಪಿಸಿಸಿ ಅಧ್ಯಕ್ಷರು ಹೆಂಗೆಂಗ್‌ ನಡ್ಕೊತಾರೊ ಅನ್ನುದ್ರ ಮ್ಯಾಲ್‌ ಕಾಂಗ್ರೆಸ್‌ ಭವಿಷ್ಯ ನಿಂತೈತಿ ಅಂತ ಅನಸ್ತೆತಿ. ಯಾಕಂದ್ರ ಅಧ್ಯಕ್ಷರು ಅಶ್ವತ್ಥನಾರಾಯಣ ವಿಚಾರದಾಗ ಸುಮ್ನ ಟಾಂಗ್‌ ಕೊಡಾಕ್‌ ಹೋಗಿ, ಊರಾಗ ಹೋಗೊ ಮಾರಿನ ಮನಿಗಿ ಕರಕೊಂಡಂಗ ಮಾಡಿದ್ರು ಅನಸ್ತೈತಿ.

ಕಾಂಗ್ರೆಸ್‌ ನ್ಯಾರು ಹುಡಕಿದ್ರು ಎಲ್ಯದೆನಿ ಅಂತ ಅಡ್ರೆಸ್‌ ಇಲ್ಲದಂಗ ತಪ್ಪಿಸಿ ಅಡ್ಯಾಡ್ತಿದ್ದ ರಮ್ಯಾ, ಏಕಾಏಕಿ ಊರ ಜಾತ್ರಿಗಿ ಉದ್ಭವಿಸಿದ ದೇವಿಯಂಗ ಜನ್ಮ ತಾಳಿ ಇರೊ ಬರೊ ಮಾನ ಹರಾಜ್‌ ಹಾಕಿ ಹವಾ ಮಾಡ್ಕೊಂಡು ಬಿಟ್ಲು. ರಮ್ಯಾ ಬಾಯಿ ತಗಿದಷ್ಟ ಬೇಕಾಗಿತ್ತು, ಡಿಕೆಶಿ ವಿರುದ್ಧ ಸಿದ್ದು ಗ್ಯಾಂಗ್‌ ಒಂದ ಸಿಕ್ಕಿರೊ ಚಿರತಿ ಮ್ಯಾಲ್‌ ನಾಯಿಗೋಳು ಗ್ಯಾಂಗ್‌ ಕಟ್ಕೊಂಡು ದಾಳಿ ಮಾಡಿದಂಗ ಎಲ್ಲಾರೂ ಸೇರೆ ಮುಗಿ ಬಿದ್ದು, ಡಿಕೆಶಿ ರಾಜಸ್ತಾನದಾಗ ಹೋಗಿ ಎಂ.ಬಿ.ಪಾಟಿಲರ್ನ ಹುಡುಕಿ ಅಪ್ಕೊಂಡು ಸಮಾಧಾನ ಮಾಡ್ಕೊಳ್ಳುವಂಗಾತು.

ಈ ವಿಚಾರದಾಗ ಸಿದ್ರಾಮಯ್ಯ ಸೈಲೆಂಟ್‌ ಆಗೇ ನೋಡ್ಕೊಂತ ನೆಕ್ಟ್ ಸಿಎಂ ತಾನ ಅನ್ನೂದ್ನ ಮತ್ತಷ್ಟು ಗಟ್ಟಿ ಮಾಡ್ಕೊಳ್ಳಾತಾನು. ಆದ್ರ, ದೊಡ್ಡ ಗೌಡ್ರು ಅಷ್ಟು ಸರಳಾಗಿ ಸಿದ್ರಾಮಯ್ಯಗ ಅಧಿಕಾರ ಸಿಗಾಕ್‌ ಬಿಡ್ತಾರಂತೇನ ಅನಸುದಿಲ್ಲ. ಹೆಂಗರ ಮಾಡಿ ಇನ್ನೊಂದು ಸಾರಿ ಮಗನ್ನ ಸಿಎಂ ಕುರ್ಚಿ ಮ್ಯಾಲ ಕುಂದ್ರಿಸಿ ತೀರತೇನಿ ಅಂತ ಹಠ ಹಿಡದಂಗೈತಿ. ಪ್ರಧಾನಿ ಅಂತ ಹುದ್ದೆ ಏರಿದ ಮ್ಯಾಲ ನನಗ್ಯಾಕ್‌ ಬೇಕು ಪಕ್ಷಾ ಕಟ್ಟೂದು ಅಂತ ಆರಾಮ್‌ ಇರಬೌದಿತ್ತು. ಆದ್ರ, ದೊಡ್‌ಗೌಡ್ರು ಈ ವಯಸ್ಸುನ್ಯಾಗೂ ಸಣ್ಣ ಕಾರ್ಯಕರ್ತರಂಗ ಊರುರು ತಿರುಗ್ಯಾಡಿ ಪಕ್ಷ ಕಟ್ಟತಾರಂದ್ರ ತಮ್ಮ ಪಕ್ಷದ ಬಗ್ಗೆ ಅವರಿಗಿ ಇರೊ ಕಾಳಜಿ ತೋರಸ್ತೆತಿ.

ಆದ್ರ, ಇಲೆಕ್ಷನ್‌ ನಡದ್ರ ಪ್ರಾದೇಶಿಕ ಪಕ್ಷಗೋಳ ಬಾಗಲದಾಗ ಹೋಗಿ ನಿಲ್ಲೊ ಕಾಂಗ್ರೆಸ್‌ ಪಕ್ಷದ ಯುವರಾಜರು ಪ್ರಾದೇಶಿಕ ಪಕ್ಷಗೋಳಿಗೆ ಬದ್ಧತೆ ಇಲ್ಲಾ ಅಂತೇಳಿ ಎಲ್ಲಾರ ಕೆಂಗಣ್ಣಿಗಿ ಗುರಿ ಆಗ್ಯಾರು ಅಂತ ಅನಸ್ತೈತಿ ಸಾಲಾ ಇಲ್ಲದ ಸಂಸಾರ ನಡಸದಂತಾ ಧನ್ಯಾರ ಬಾಳೆ ಆದಂಗ ಆಗಿರೊ ಕಾಂಗ್ರೆಸ್ಸು, ಯಾವುದರ ರಾಜ್ಯದಾಗ ಪ್ರಾದೇಶಿಕ ಪಕ್ಷಗೋಳ ಬೆಂಬಲ ಇಲ್ಲದ ಅಧಿಕಾರ ನಡಸ್ತೇನಿ ಅನ್ನೊ ಧೈರ್ಯ ಇದ್ದಿದ್ರ, ರಾಹುಲ್‌ ಗಾಂಧಿ ಹಂಗ್‌ ಮಾತ್ಯಾಡಿದ್ಕೂ ಒಂದು ಅರ್ಥ ಇತ್ತು. ಸ್ವಂತ ಪಕ್ಷಕ್ಕೆ ಕಾಯಂ ಅಧ್ಯಕ್ಷರ್ನ ಮಾಡಾಕ ಒದ್ಯಾಡಾಕತ್ತಾಗ ಇನ್ನೊಬ್ಬರ ಬಗ್ಗೆ ಮಾತ್ಯಾಡಿ ಯಾಕ್‌ ಇರೊ ಸಂಬಂಧಾನು ಕೆಡಿಸ್ಕೊಬೇಕು. ಪ್ರಾದೇಶಿಕ ಪಕ್ಷಗೋಳು ದೂರ್‌ ಆದುವಂದ್ರ ಕಾಂಗ್ರೆಸ್‌ ಧ್ವಜಾ ಹಾಕಾಕೂ ಮಂದಿ ಸಿಗದಂಗ ಆಗಬಾರದು.

ಮೊದ್ಲ ಬಿಜೆಪ್ಯಾರು ಇತಿಹಾಸದಾಗಿಂದು ಎಲ್ಲಾ ಕೆದರಿ ಒಂದೊಂದ ಹೊರಗ ತಗ್ಯಾಕತ್ತಾರು. ಕಾಂಗ್ರೆಸದು ಏನರ ಇತಿಹಾಸ ಕೆದಕಿ, ಅದರದೂ ಮೂಲ ಬ್ಯಾರೆನ ಇತ್ತು ಅಂದ್ರ ಕಾಂಗ್ರೆಸ್‌ ನೂ ಉಳಿದಂಗ ಆಗಬಾರದು. ಯಾಕಂದ್ರ ದೇಶದಾಗ ಒಂದಿಲ್ಲಾ ಒಂದು ಸ್ಟ್ರಾಂಗ್‌ ಅಪೊಜಿಶನ್‌ ಇರಬೇಕು. ಇಲ್ಲಾಂದ್ರ ಮನಿತುಂಬ ಸೀರಿ ಇದ್ರು ಉಡಾಕ್‌ ಒಂದೂ ಚೊಲೊ ಇಲ್ಲ ಅನ್ನುವಂಗ ಅಕ್ಕೇತಿ. ಅದ್ಕ ನಾವು ಮನ್ಯಾಗ ಪ್ರಬಲ ಪ್ರತಿಪಕ್ಷದ ಕೆಲಸಾ ತಪ್ಪದ ಮಾಡತೇವಿ.

ಶಂಕರ ಪಾಗೋಜಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next