“ನಾನು ಅಭಿಮಾನಿಗಳ ಪ್ರೀತಿಯ ಬುಲ್ ಬುಲ್ ಆಗಿರಲು ಇಷ್ಟಪಡುತ್ತೇನೆ…’ – ಹೀಗೆ ಹೇಳಿ ನಕ್ಕರು ರಚಿತಾ ರಾಮ್. ಅವರ ಮಾತು, ನಗುವಿಗೆ ಕಾರಣವಾಗಿದ್ದು “ಅಯೋಗ್ಯ’.
ಯಾವ ಅಯೋಗ್ಯ ಎಂದು ನೀವು ಕೇಳಬಹುದು. ಆರು ವರ್ಷಗಳ ಹಿಂದೆ “ಆಯೋಗ್ಯ’ ಎಂಬ ಚಿತ್ರ ಬಂದಿದ್ದು ನಿಮಗೆ ಗೊತ್ತಿರಬಹುದು. ಈಗ ಅದೇ ತಂಡ ಸೇರಿಕೊಂಡು “ಅಯೋಗ್ಯ-2′ ಮಾಡುತ್ತಿದೆ. ಈ ತಂಡ ರಚಿತಾ ಅವರಿಗೆ ಲೇಡಿ ಸೂಪರ್ಸ್ಟಾರ್ ಎಂದು ಬಿರುದು ಕೊಟ್ಟಿದೆ.
ಇತ್ತೀಚೆಗೆ ನಡೆದ ಚಿತ್ರದ ಮುಹೂರ್ತದ ವೇಳೆ ತಂಡ “ಲೇಡಿ ಸೂಪರ್ ಸ್ಟಾರ್’ ಎಂದಾಗ ರಚಿತಾ, “ನಾನು ಅಭಿಮಾನಿಗಳ ಪ್ರೀತಿಯ ಬುಲ್ ಬುಲ್ ಆಗಿರಲು ಇಷ್ಟಪಡುತ್ತೇನೆ..’ ಎಂದರು.
“ಅಯೋಗ್ಯ-2′ ಚಿತ್ರದ ಮೂಲಕ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಮತ್ತೂಂದು ಗೆಲುವಿನ ಕನಸು ಕಾಣುತ್ತಿದ್ದಾರೆ. ಮಹೇಶ್ ನಿರ್ದೇಶನದ ಈ ಚಿತ್ರವನ್ನು ಎಂ ಮುನೇಗೌಡ ನಿರ್ಮಿಸುತ್ತಿದ್ದಾರೆ. ಮುಹೂರ್ತ ವೇಳೆ ಮಾತನಾಡಿದ ನಿರ್ದೇಶಕ ಮಹೇಶ್, “ಅಯೋಗ್ಯ -2 ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ ಮಾಡುತ್ತಿದ್ದೇವೆ. ರಚಿತಾ ಮತ್ತು ಸತೀಶ್ ಅವರನ್ನು ತೆರೆಮೇಲೆ ನೋಡೋಕೆ ತುಂಬಾ ಖುಷಿ ಆಗುತ್ತೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಫ್ಯಾನ್ ಇಂಡಿಯಾ ಸಿನಿಮಾ. ಮೊದಲ ಭಾಗ ಹಿಟ್ ಆದಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ವಿ. ಆದರೀಗ ತಮಿಳು ಹಾಗೂ ತೆಲುಗಿನಲ್ಲಿ ಮಾಡು ¤ದ್ದೇವೆ’ ಎಂದು ಹೇಳಿದರು.
ನಾಯಕ ನೀನಾಸಂ ಸತೀಶ್ ಮಾತನಾಡಿ, “ಅಯೋಗ್ಯ -2 ಸಿನಿಮಾಗೆ ನಿರ್ಮಾಪಕರ ದೊಡ್ಡ ಲಿಸ್ಟ್ ಇತ್ತು. ಅದರೆ ಕೊನೆಯದಾಗಿ ಮುನೇಗೌಡ ಅವರು ಫೈನಲ್ ಆಗಿದ್ದಾರೆ. ಅವರು ಉತ್ತಮ ನಿರ್ಮಾಪಕರು. ಅಯೋಗ್ಯ -2 ಸಿನಿಮಾ ಕನ್ನಡ ಸಿನಿಮಾರಂಗಕ್ಕೆ ದೊಡ್ಡ ಸಿನಿಮಾವಾಗಲಿದೆ’ ಎಂದು ಹೇಳಿದರು.
ಕಳೆದ 6 ವರ್ಷದ ಹಿಂದೆ ಅಯೋಗ್ಯ ಸಿನಿಮಾ ಇದೇ ಜಾಗದಲ್ಲಿ ಮುಹೂರ್ತ ಆಗಿತ್ತು. ತುಂಬಾ ಖುಷಿ ಆಗುತ್ತಿದೆ. ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಯೋಗ್ಯ-2 ಮಾಡಬೇಕು ಅಂದಾಗ ಮೊದಲು ತಲೆಗೆ ಬಂದಿದ್ದು ಏನಮ್ಮಿ ಏನಮ್ಮಿ…ಹಾಡಿಗೆ ರಿಪ್ಲೇಸ್ ಯಾವುದು ಅಂತ.. ಆದರೆ ಆ ಹಾಡಿಗೆ ಯಾವುದೇ ರಿಪ್ಲೇಸ್ ಇಲ್ಲ. ನಾನು ಸತೀಶ್ ಟಾಮ್ ಅಂಡ್ ಜೆರ್ರಿ ಹಾಗೆ ಕಿತ್ತಾಡುತ್ತಿರುತ್ತೇವೆ’ ಎನ್ನುವುದು ರಚಿತಾ ರಾಮ್ ಮಾತು.