Advertisement

Belagavi: ಚನ್ನಮ್ಮನ‌ ವಿಜಯೋತ್ಸವಕ್ಕೆ ಸಚಿವ ಜಾರಕಿಹೊಳಿ ಚಾಲನೆ

03:05 PM Oct 23, 2023 | Team Udayavani |

ಬೆಳಗಾವಿ: ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಚನ್ನಮ್ಮನ ಕಿತ್ತೂರಿನಲ್ಲಿ ವಿಜಯಜ್ಯೋತಿಯನ್ನು ಸಡಗರ-ಸಂಭ್ರಮದಿಂದ ಬರಮಾಡಿಕೊಂಡು ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಮೂರು ದಿನಗಳ ಕಿತ್ತೂರು ಉತ್ಸವ ಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

Advertisement

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ರಾಜ್ಯದಾದ್ಯಂತ ಸಂಚರಿಸಿ ಸೋಮವಾರ ಬೆಳಿಗ್ಗೆ ಚನ್ನಮ್ಮನ ಕಿತ್ತೂರಿಗೆ ಆಗಮಿಸಿದ “ವಿಜಯಜ್ಯೋತಿ”ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ಬಳಿಕ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ಬಾಬಾಸಾಹೇಬ್ ಪಾಟೀಲ, ಬೈಲಹೊಂಗಲ ಶಾಸಕ‌ ಮಹಾಂತೇಶ ಕೌಜಲಗಿ, ಬೆಳಗಾವಿ ಉತ್ತರ ಶಾಸಕ ಆಸಿಫ್(ರಾಜು) ಸೇಠ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಗಣ್ಯರು ಚನ್ಮಮ್ಮಳ ಪುತ್ಥಳಿ, ಅಮಟೂರು ಬಾಳಪ್ಪ ಹಾಗೂ ಸಂಗೊಳ್ಳಿ ರಾಯಣ್ಣನ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.

ಗಮನಸೆಳೆದ ಕಲಾವಾಹಿನಿ ಮೆರವಣಿಗೆ:

ಕನ್ನಡ ನಾಡಿನ ಕಲಾ ವೈಭವವನ್ನು ಪ್ರತಿಬಿಂಬಿಸುವ ವಿವಿಧ ಕಲಾತಂಡಗಳ ಕಲಾವಾಹಿನಿ ಮೆರವಣಿಗೆಗೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಚಾಲನೆ ನೀಡಿದರು.

Advertisement

ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ಡೊಳ್ಳುಕುಣಿತ, ಗೊಂಬೆಕುಣಿತ, ಕುದುರೆಕುಣಿತ, ಲಂಬಾಣಿ ನೃತ್ಯ, ಝಾಂಜ್ ಪಥಕ್, ಜನಪದವಾದ್ಯಗಳಾದ ಚಂಡಿಮೇಳ, ನಗಾರಿ, ಕಥಕ್ಕಳಿ ತಂಡಗಳು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ‌ ಓಬವ್ವ ವೇಷಧಾರಿ ಮಕ್ಕಳು ಜನಪದ ಕಲಾವಾಹಿನಿ ಮೆರವಣಿಗೆಯ ಸೊಬಗು ಹೆಚ್ಚಿಸಿದರು.

ಗೃಹಲಕ್ಷ್ಮೀ, ಗೃಹಜ್ಯೋತಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ರೂಪಕಗಳು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೊದಲಾದ ಇಲಾಖೆಗಳ ರೂಪಕಗಳ ಮೆರವಣಿಗೆಯಲ್ಲಿ ಗಮನಸೆಳೆದವು.

ಕೋಟೆ ಆವರಣದೊಳಗೆ ಸ್ಥಾಪಿಸಲಾಗಿರುವ ವಸ್ತುಪ್ರದರ್ಶನ ಮೇಳವನ್ನು ಶಾಸಕ ಬಾಬಾಸಾಹೇಬ್ ಪಾಟೀಲ ಅವರು ಉದ್ಘಾಟಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಸ್ಥಾಪಿಸಲಾಗಿರುವ 128 ಮಳಿಗೆಗಳಿಗೆ ಜನರು ತಂಡೋಪತಂಡವಾಗಿ ಭೇಟಿ ನೀಡಿದರು.
ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನವನ್ನು ಸಂಸದರಾದ ಮಂಗಲ ಅಂಗಡಿ ಅವರು ಉದ್ಘಾಟಿಸಿದರು.

ಕಿತ್ತೂರು, ಬೈಲಹೊಂಗಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಸಚಿವ ಸತೀಶ ಜಾರಕಿಹೊಳಿ-ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next