ಚಿಕ್ಕಮಗಳೂರು/ಶಿರಸಿ: ರಾಜ್ಯದಲ್ಲಿ ಸ್ಯಾಟ್‌ಲೈಟ್ ಫೋನ್ ಮತ್ತೆ ಸಕ್ರಿಯವಾಗಿರುವ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ.
ಚಿಕ್ಕಮಗಳೂರು ಹಾಗೂ ಶಿರಸಿ ಭಾಗದ ದಟ್ಟ ಅರಣ್ಯದಲ್ಲಿ ಈ ಬೆಳವಣಿಗೆ ನಡೆದಿದ್ದು, ಕೇಂದ್ರ ತನಿಖಾಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.
ಮೇ 23ರಿಂದ 29ರ ನಡುವೆ ಸ್ಯಾಟ್‌ಲೈಟ್ ಫೋನ್ ಬಳಕೆಯಾಗಿದೆ ಎನ್ನಲಾಗಿದ್ದು, ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಈ ಫೋನ್‌ಗಳ ಬಳಕೆ ಮಾಡಲಾಗಿದೆ. ಇದರ ಜಾಡು ಹಿಡಿದು ಬಂದ ಕೇಂದ್ರ ತನಿಖಾಧಿಕಾರಿಗಳ ತಂಡ ಮಹತ್ವದ ಮಾಹಿತಿ ಕಲೆ ಹಾಕಿದೆ. ಅಲ್ಲದೆ, ಸ್ಥಳೀಯ ಪೊಲೀಸರು ಈ ನಿಟ್ಟಿನಲ್ಲಿ ಸಮಗ್ರ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲೆಲ್ಲಿ ಬಳಕೆ?
ಚಿಕ್ಕಮಗಳೂರು ಜಿಲ್ಲೆಯ ಕಡೂರು-ಬೀರೂರು ದಟ್ಟ ಅರಣ್ಯ ಭಾಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಯಲ್ಲಾಪುರ ಭಾಗದ ಕಾಡಿನಲ್ಲಿ ಸ್ಯಾಟ್‌ಲೈಟ್ ಫೋನ್ ಬಳಕೆ ಮಾಡಲಾಗಿದೆ. ಕಡೂರು-ಬೀರೂರು ಅರಣ್ಯ ಭಾಗದ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲಿ ಮೇ 23ರಿಂದ 29ರ ಅಂತರದಲ್ಲಿ ಸ್ಯಾಟ್‌ಲೈಟ್ ಫೋನ್ ಸಂಪರ್ಕ ಸಾ ಧಿಸಲಾಗಿದೆ ಎಂದು ತಿಳಿದುಬಂದಿದೆ.
Related Articles
ಶಿರಸಿ ತಾಲೂಕಿನ ಹುಲೇಕಲ್ ರಸ್ತೆಯ ಕಲಗಾರು ಬಳಿಯೂ ಬಳಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮೇ 25ರಂದು ಕೇಂದ್ರದ ತನಿಖಾ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದೆ. ಕಲಗಾರು ಸುತ್ತಮುತ್ತಲಿನ ಕಾಡಿನಲ್ಲಿ ಅಧಿಕಾರಿಗಳ ತಂಡ ಸಂಚರಿಸಿದ್ದು, ಫೋನ್ ಬಳಕೆಯಾಗಿರುವ ಸ್ಥಳ ತೋರಿಸಿದ ಕಡೆಗಳಲ್ಲಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.
ಕಲಗಾರಿನ ಗುಡ್ಡಗಾಡು ಪ್ರದೇಶದ ಕೆಳಭಾಗದಲ್ಲಿ ರೈತರ ಮನೆಗಳಿದ್ದು ಆತಂಕ ಮೂಡಿಸಿದೆ.
ಕಳೆದ ವರ್ಷ ಜನವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಭಾಗದಲ್ಲಿ 10 ದಿನಗಳಲ್ಲಿ ಮೂರು ಬಾರಿ ಸ್ಯಾಟ್‌ಲೈಟ್ ಫೋನ್ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳ ತಂಡ ಕೊಪ್ಪ ಸುತ್ತಮುತ್ತ ಪರಿಶೀಲನೆ ನಡೆಸಿತ್ತು.