ಕೋಟ: ಫಾಸ್ಟ್ಯಾಗ್ ಡಿ.1ರಿಂದ ಕಡ್ಡಾಯವಾಗಿ ಜಾರಿಯಾದರೂ ಇದರಿಂದ ಸ್ಥಳೀಯರಿಗೆ ಯಾವುದೇ ತೊಂದರೆ ಇಲ್ಲ. ಸಾಸ್ತಾನ ಟೋಲ್‌ನಲ್ಲಿ ಈ ಹಿಂದಿನಂತೆ ಕೋಟ ಜಿ.ಪಂ. ವ್ಯಾಪ್ತಿಯವರಿಗೆ ರಿಯಾಯಿತಿ ಮುಂದುವರಿಯಲಿದೆ ಎಂದು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ನಿತ್ಯಾನಂದ ಗೌಡ ತಿಳಿಸಿದರು.
ಅವರು ಸಾಸ್ತಾನದ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾ.ಹೆ. ಪ್ರಾಧಿಕಾರ, ಉಡುಪಿ ಜಿಲ್ಲಾ ಧಿಕಾರಿ ಮತ್ತು ಎಸ್‌ಪಿ ನಿರ್ದೇಶನದಲ್ಲಿ ನಡೆದ ಫಾಸ್ಟ್ಯಾಗ್ ಕುರಿತ ಸಾರ್ವಜನಿಕ ಮಾಹಿತಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಉಚಿತ ಪ್ರವೇಶವಿದ್ದರೂ ಪ್ರತಿಯೊಬ್ಬರೂ ಕಡ್ಡಾಯವಾಗಿ ಫಾಸ್ಟ್ಯಾಗ್ ಅಳವಡಿಸಿಕೊಂಡು ನಗದು ವ್ಯವಹಾರದ ಸಾಮಾನ್ಯ ಗೇಟ್‌ನಲ್ಲೇ ಸಂಚರಿಸಬೇಕು. ಸ್ಥಳೀಯರಿಗೆ ಮತ್ತು ಫಾಸ್ಟ್ಯಾಗ್ ರಹಿತ ವಾಹನಗಳ ಟೋಲ್ ವಸೂಲಿಗೆ ಹೆಚ್ಚುವರಿ ಸಿಬಂದಿ ಹಾಗೂ ಸ್ಪೈಪ್ ಮಶಿನ್ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಗೊಂದಲ ಬೇಡ ಎಂದರು.
ಉದ್ವೇಗಕ್ಕೊಳಗಾಗಬೇಡಿ
ಬ್ರಹ್ಮಾವರದ ವೃತ್ತನಿರೀಕ್ಷಕ ಅನಂತ ಪದ್ಮನಾಭ ಮಾತನಾಡಿ, ಹೊಸತನಕ್ಕೆ ಬದಲಾಗಲೇಬೇಕು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ರಾ.ಹೆ. ಜಾಗೃತಿ ಸಮಿತಿಯ ಪ್ರತಾಪ್ ಶೆಟ್ಟಿ ಮಾತನಾಡಿ, ಸ್ಥಳೀಯರಿಗೆ ಮತ್ತು ಫಾಸ್ಟ್ಯಾಗ್ ರಹಿತ ವಾಹನಗಳಿಗೆ ಒಂದೇ ಗೇಟ್ ನೀಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಆದ್ದರಿಂದ ಈ ಕುರಿತು ಪರಿಹಾರ ಕಂಡುಕೊಳ್ಳಬೇಕು ಎಂದರು.
ಎಲ್ಲರೂ ಫಾಸ್ಟ್ಯಾಗ್ ಅಳವಡಿಸಿಕೊಳ್ಳು ವಂತೆ ಹೆ.ಪ್ರಾ . ಎಂಜಿನಿಯರ್ ನವೀನ್ ವಿನಂತಿಸಿದರು.
ಸಾಸ್ತಾನ ಟೋಲ್‌ನ ವ್ಯವಸ್ಥಾಪಕ ಕೇಶವಮೂರ್ತಿ, ಹೋರಾಟ ಸಮಿತಿಯ ಪ್ರತಾಪ್ ಶೆಟ್ಟಿ ಸಾಸ್ತಾನ, ವಿಠಲ್ ಪೂಜಾರಿ, ಅಲ್ವಿನ್ ಅಂದ್ರಾದೆ, ಶ್ಯಾಮಸುಂದರ ನಾೖರಿ, ನಾಗರಾಜ ಗಾಣಿಗ ಉಪಸ್ಥಿತರಿದ್ದರು.