ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಮಾಧಿಗೆ ಶನಿವಾರ ಭೇಟಿ ನೀಡಿದ ಆಪ್ತ ಗೆಳತಿ ವಿ.ಕೆ. ಶಶಿಕಲಾ, ಜಯಾರಿಗೆ ಪುಷ್ಪನಮನ ಸಲ್ಲಿಸಿ, ಗಮನ ಸೆಳೆದಿದ್ದಾರೆ.
ಅ. 17ರಂದು ನಡೆಯಲಿರುವ ಎಐಎಡಿಎಂಕೆ ಸಂಸ್ಥಾಪನೆಯ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ, ಶನಿವಾರ ಚೆನ್ನೈನ ಮರೀನಾ ಬೀಚ್‌ಗೆ ತೆರಳಿದ ಶಶಿಕಲಾ, ಅಲ್ಲಿ ಪಕ್ಷದ ಸಂಸ್ಥಾಪಕರಾದ ಎಂ.ಜಿ. ರಾಮಚಂದ್ರನ್, ನಾಯಕ ಸಿಎನ್ ಅಣ್ಣಾದುರೈ ಹಾಗೂ ಜಯಲಲಿತಾ ಅವರ ಸಮಾಧಿಗಳಿಗೆ ಪುಷ್ಪನಮನ ಸಲ್ಲಿಸಿದ್ದಾರೆ.
ಅವರ ಈ ನಡೆ, ರಾಜಕೀಯ ಊಹಾಪೋಹಗಳಿಗೆ ನಾಂದಿ ಹಾಡಿದೆ. ಇದೇ ಮಾರ್ಚ್‌ನಲ್ಲಿ ರಾಜಕೀಯ ನಿವೃತ್ತಿ ಪಡೆದಿದ್ದ ಅವರು, ಈಗ ಜಯಾ ಸಮಾಧಿಗೆ ಭೇಟಿ ನೀಡುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ:ಸಮ್ಮಿಶ್ರ ಸರ್ಕಾರ ರಚಿಸಿದರೆ ಪುಣ್ಯಾತ್ಮ ಎಚ್‌ಡಿಕೆ ಉಳಿಸಿಕೊಳ್ಳಲಿಲ್ಲ: ಸಿದ್ದರಾಮಯ್ಯ
ಇದಕ್ಕೆ ಪ್ರತಿಕ್ರಿಯಿಸಿರುವ ಎಐಎಡಿಎಂಕೆ, “ಕಣ್ಣೀರು ಹಾಕಿದ್ದಕ್ಕಾಗಿ ಶಶಿಕಲಾರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು. ಅವರಿಗೆ, ಪಕ್ಷಕ್ಕೆ ಮರುಸೇರ್ಪಡೆಯಾಗುವ ಇರಾದೆ ಇರಬಹುದು, ಆದರೆ, ನಮ್ಮ ಪಕ್ಷದಲ್ಲಿ ಅವರಿಗೆ ಸ್ಥಾನವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದೆ!