Advertisement

ಯಕ್ಷಗಾನ ಸಮ್ಮೇಳನದಲ್ಲಿ ಗಮನ ಸೆಳೆದ ”ಶಶಿಪ್ರಭೆ-ವೃಷಸೇನ-ರುಕ್ಮಾವತಿ”

10:16 PM Feb 15, 2023 | ವಿಷ್ಣುದಾಸ್ ಪಾಟೀಲ್ |

ಉಡುಪಿಯಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ತೆಂಕು ,ಬಡಗು ತಿಟ್ಟು ಪ್ರಸಂಗಗಳ ಪ್ರದರ್ಶನಗಳು, ಗೋಷ್ಠಿಗಳು ಯಕ್ಷಗಾನ ಪ್ರೇಮಿಗಳ ಗಮನ ಸೆಳೆದವು. ಬಡಗುತಿಟ್ಟಿನ ಬಯಲಾಟ ಮೇಳಗಳ ಪ್ರತಿಭಾ ಸಂಪನ್ನ ಕಲಾವಿದರು ಪ್ರದರ್ಶಿಸಿದ ಶಶಿಪ್ರಭಾ ಪರಿಣಯ, ವೃಷಸೇನ ಕಾಳಗ ಮತ್ತು ರುಕ್ಮಾವತಿ ಕಲ್ಯಾಣ ಆಖ್ಯಾನಗಳು ಬಯಲಾಟದ ವಾತಾವರಣವನ್ನು ಸೃಷ್ಟಿ ಮಾಡಿತು.

Advertisement

ಶಶಿಪ್ರಭಾ ಪರಿಣಯದಲ್ಲಿ ಹಿರಿಯ ಅನುಭವಿ ಭಾಗವತ ಹೆರಂಜಾಲು ಗೋಪಾಲ ಗಾಣಿಗರು ಭಾಗವತರಾಗಿ, ದಿಗ್ಗಜ ಚಂಡೆ ವಾದಕ ಮಂದಾರ್ತಿ ರಾಮಕೃಷ್ಣ ಅವರು ಅತ್ಯುತ್ತಮ ಸಾಥ್ ನೀಡಿದರು. ಮುಮ್ಮೇಳದಲ್ಲಿ ಪದ್ಮಾಖ್ಯ ಪುರದರಸು ಪದ್ಮ ಶೇಖರನಾಗಿ ಹಿರಿಯ ಕಲಾವಿದ ಕೊಡಿ ವಿಶ್ವನಾಥ ಗಾಣಿಗ ಅವರು ಸಣ್ಣ ಪಾತ್ರಕ್ಕೂ ಜೀವ ತುಂಬಿದರು. ಮಾರ್ತಾಂಡ ತೇಜನಾಗಿ ಹಿರಿಯ ಅನುಭವಿ ಕಲಾವಿದ ಉಪ್ಪುಂದ ನಾಗೇಂದ್ರ ಅವರು ಕಟ್ಟು ಮೀಸೆ ಮತ್ತು ನಡು ಬಡಗು ತಿಟ್ಟಿನ ಕ್ರಮದಲ್ಲಿ ಪಾತ್ರಕ್ಕೆ ಮೆರುಗು ತಂದರೆ, ಕಮಲಧ್ವಜನಾಗಿ ಆಜ್ರಿ ಅರುಣ್ ಶೆಟ್ಟಿ ಅವರು ಸಮದಂಡಿಯಾಗಿ ಜೀವ ತುಂಬಿದರು. ಕಿರಾತನಾಗಿ ಶ್ಯಾಮ್ ನಾಯ್ಕ್ ಪೇತ್ರಿ, ದೂತಿಯಾಗಿ ಶೇಖರ್ ಶೆಟ್ಟಿ ಏಳಬೇರು ಅವರು ಹಿತಮಿತವಾದ ಹಾಸ್ಯದ ಮೂಲಕ ರಂಜಿಸಿದರು. ಶಶಿಪ್ರಭೆಯಾಗಿ ಹಿರಿಯ ಸ್ತ್ರೀಪಾತ್ರಧಾರಿ ಹೊಸಂಗಡಿ ರಾಜೀವ್ ಶೆಟ್ಟಿ, ಭ್ರಮರಕುಂತಳೆಯಾಗಿ ವಿಷ್ಣುಮೂರ್ತಿ ಬಾಸ್ರಿ ಗಮನ ಸೆಳೆದರು.

ವೃಷಸೇನ ಕಾಳಗ ಪ್ರಸಂಗದಲ್ಲಿ ಯುವಕಲಾವಿದ ಪ್ರಶಾಂತ್ ಗಾಣಿಗ ನೈಲಾಡಿ ಅರ್ಜುನನಾಗಿ ನಡು ಬಡಗುತಿಟ್ಟಿನ ಪರಂಪರೆಯ ಆಹಾರ್ಯದಲ್ಲಿ ಭರವಸೆ ಮೂಡಿಸಿದರು. ವೃಷಸೇನ ನಾಗಿ ಯುವ ಪುಂಡು ವೇಷಧಾರಿ ಪ್ರಸನ್ನ ದೇವಂಗಿ ರಂಗದ ಬಿಸಿಯೇರಿಸಿದರು. ಆಕರ್ಷಕ ರಂಗ ಸಂಚಾರದ ಮೂಲಕ ಕೃಷ್ಣನಾಗಿ ಮಾಧವ ನಾಗೂರು ಅವರು ಪಾತ್ರೋಚಿತ ನ್ಯಾಯ ಒದಗಿಸಿದರು.

ನಾಗೇಶ್ ಕುಲಾಲ್ ನಾಗರಕೋಡಿಗೆ, ಹೊಸಾಳ ಉದಯ್ ಕುಮಾರ್ ಅವರು ಏರು ಶ್ರುತಿಯ ಭಾಗವತಿಕೆ ಪ್ರಸಂಗದ ಕೊನೆಯವರೆಗೂ ಕರ್ಣಾನಂದಕರವಾಗಿತ್ತು. ಬಯಲಾಟದ ಬಹುಬೇಡಿಕೆಯ ಪ್ರಸಂಗ ರುಕ್ಮಾವತಿ ಕಲ್ಯಾಣ ಪ್ರಸಂಗದಲ್ಲಿ ಪ್ರಸಿದ್ಧ ಕಲಾವಿದ ಆಜ್ರಿ ಗೋಪಾಲ ಗಾಣಿಗರು ರುಕ್ಮನ ಪಾತ್ರದಲ್ಲಿ ತನ್ನತನ, ಗತ್ತು ಗೈರತ್ತು ತೋರಿದರು. ರುಕ್ಮಿಣಿಯ ಪಾತ್ರದಲ್ಲಿ ಹಾರಾಡಿ ರಮೇಶ್ ಗಾಣಿಗ, ಕೃಷ್ಣನಾಗಿ ಪ್ರಸಿದ್ಧ ಸ್ತ್ರೀ ವೇಷಧಾರಿ ಉಪ್ಪುಂದ ಶ್ರೀಧರ ಗಾಣಿಗ ಹಿರಿತನವನ್ನು ತೋರಿದರು. ಹಾಸ್ಯ ಪಾತ್ರಗಳಲ್ಲಿ ಹಿರಿಯ ಕಲಾವಿದ ಮಾಹಾಬಲ ದೇವಾಡಿಗರು ಯಕ್ಷಗಾನೀಯ ಚೌಕಟ್ಟಿನ ಹಾಸ್ಯವೆಷ್ಟು ಎನ್ನುವುದನ್ನು ತೋರಿಸಿ ಮಾದರಿಯಾದರು. ಯುವ ಕಲಾವಿದರಾದ ಪ್ರಭಾಕರ್ ಶೆಟ್ಟಿ ಬೇಳಂಜೆ, ಮುಂದಾದಿ ಕೃಷ್ಣ ನಾಯ್ಕ್, ಪ್ರವೀಣ್ ಆಚಾರ್ ಸೇರಿ ಮೈಂದ-ದ್ವಿವಿದ, ಗರುಡ , ಮನ್ಮಥ, ರುಕ್ಮಾವತಿ ಪಾತ್ರಗಳಿಗೆ ಜೀವ ತುಂಬಿದರು.

ಸದಾನಂದ್ ಪಾಟೀಲ್ ಸರ್ಪು ಮತ್ತು ಎಸ್. ವಿ.ಉದಯ್ ಕುಮಾರ್ ಶೆಟ್ಟಿ ಅವರು ಸಂಯೋಜಿಸಿದ ಪ್ರಸಂಗಗಳಿಗೆ ಜೀವ ತುಂಬಲು ಹಿರಿಯ ಮತ್ತು ಕಿರಿಯ ಕಲಾವಿದರೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸಿ ಮೆಚ್ಚುಗೆಗೆ ಭಾಜನರಾದರು.

Advertisement

ಬೆಳಗಿನ ಜಾವದವರೆಗೂ ಪ್ರೇಕ್ಷಕರ ಕೊರತೆ ಇದ್ದರೂ ಹಿರಿಯ ಮತ್ತು ಯುವ ಕಲಾವಿದರೆಲ್ಲರೂ ಉತ್ಸಾಹ ಕಳೆದುಕೊಳ್ಳದೆ ವೇದಿಕೆಗೆ ಪರಿಪೂರ್ಣ ನ್ಯಾಯ ಒದಗಿಸಿಕೊಡುವಲ್ಲಿ ಶ್ರಮಿಸಿದರು. ನೇರ ಪ್ರಸಾರದಲ್ಲಿ ಸಾವಿರಾರು ಮಂದಿ ವೀಕ್ಷಿಸಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಕ್ಷಗಾನ ಸಮ್ಮೇಳನದಲ್ಲಿ ಪ್ರದರ್ಶನಗೊಂಡ ತೆಂಕು ಮತ್ತು ಬಡಗಿನ ಎಲ್ಲಾ ಪ್ರಸಂಗಗಳು ದೊಡ್ಡ ವೇದಿಕೆಯಲ್ಲಿ ಪ್ರೇಕ್ಷಕರಿಗೆ ಮೆಚ್ಚುಗೆಯಾದವು. ಸಮ್ಮೇಳನಕ್ಕೆ ಕಳೆ ನೀಡಿದವು ಎನ್ನುವುದು ಯಕ್ಷಾಭಿಮಾನಿಗಳು ಮತ್ತು ವಿಮರ್ಶಕರ ಅಭಿಪ್ರಾಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next