Advertisement

ಬಸವನಾಡಲ್ಲಿ ಸರ್ವಂ ಯೋಗ ಮಯಂ

07:42 PM Jun 22, 2021 | Nagendra Trasi |

ವಿಜಯಪುರ: ಕೋವಿಡ್ ಹಾವಳಿ ಇದ್ದರೂ ಸಹ ಯೋಗದ ಮಹೋತ್ಸವಕ್ಕೆ ಮಾತ್ರ ನಗರದಲ್ಲಿ ಕೊರತೆ ಇರಲಿಲ್ಲ. ನೇಸರ ಮೂಡುವ ಹೊತ್ತಿನಲ್ಲಿ ಅನೇಕರು ತಮ್ಮ ತಮ್ಮ ಮನೆ ಛಾವಣಿ ಮೇಲೆ ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಚಿಕ್ಕಮಕ್ಕಳಾದಿಯಾಗಿ ಯುವಕರು, ವೃದ್ಧರು ಯೋಗಾಭ್ಯಾಸದಲ್ಲಿ ತೊಡಗಿದರು.

Advertisement

ಮನೆ-ಮನೆಯಲ್ಲಿ ಸೂರ್ಯ ನಮಸ್ಕಾರದ ದೃಶ್ಯಾವಳಿಗಳು ಗೋಚರಿಸಿದವು. ಪ್ರತಿ ದಿನ ಯೋಗಾಭ್ಯಾಸ ಮಾಡುವವರು ವಿಶ್ವ ಯೋಗದ ದಿನದ ಅಂಗವಾಗಿ ಪದ್ಮಾಸನ, ಚಕ್ರಾಸನ, ಭುಜಂಗಾಸನ ಹೀಗೆ ನಾನಾ ರೀತಿಯ ಆಸನಗಳನ್ನು ಪ್ರದರ್ಶಿಸಿದರು.

ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಮಕ್ಕಳು ಸಹ ಅತ್ಯುತ್ಸಾಹದಿಂದ ಯೋಗಾಭ್ಯಾಸದಲ್ಲಿ ತೊಡಗಿದರು. ಅನುಶ್ರೀ- ಶ್ರೀನಿಧಿ, ಸಾತ್ವಿಕ, ದೀಪಾ, ಸಾಕ್ಷಿ, ಪವಿತ್ರಾ, ಶಾಂತಮ್ಮ, ದುಂಡಮ್ಮ ಮೊದಲಾದ ಮಕ್ಕಳು ಮನಮುಟ್ಟುವ ರೀತಿಯಲ್ಲಿ ಯೋಗಗಳ ಆಸನಗಳನ್ನು ಪ್ರದರ್ಶಿಸಿ ಯೋಗದ ಸಂಭ್ರಮಕ್ಕೆ ಮೆರುಗು ತಂದರು.

ವಿಜಯಪುರ ಸೈಕ್ಲಿಂಗ್‌ ಗ್ರೂಪ್‌ ವತಿಯಿಂದ ವಿಶ್ವಯೋಗ ದಿನವನ್ನು ಭೂತನಾಳ ಕೆರೆ ಆವರಣದ ಕರಾಡ ದೊಡ್ಡಿ ಅರಣ್ಯ ಪ್ರದೇಶದಲ್ಲಿ ಆಚರಿಸಲಾಯಿತು. ಹಸಿರು ವನಸಿರಿಯ ಮಡಿಲಲ್ಲಿ ಹವ್ಯಾಸಿ ಸೈಕ್ಲಿಸ್ಟ್‌ ಬಸವರಾಜದೇವರ ಯೋಗದ ವಿವಿಧ ಆಸನಗಳನ್ನು ತಿಳಿಸಿಕೊಟ್ಟರು. ಉದ್ಯಮಿ ಶಾಂತೇಶ ಕಳಸಕೊಂಡ ಮಾತನಾಡಿದರು. ಶಿವನಗೌಡ ಪಾಟೀಲ, ಮ್ಯಾನೇಜರ್‌ ಸೋಮಶೇಖರ ಸ್ವಾಮಿ, ಗುರುಶಾಂತ ಕಾಪ್ಸೆ, ಗಜಾನನ ಮಂದಾಲಿ, ಸಂತೋಷ ಅವರಸಂಗ, ಮುರುಗೇಶ ಪಟ್ಟಣಶೆಟ್ಟಿ, ಸೋಮು ಮಠ, ಸಮೀರ ಬಳಗಾರ, ರಾಮು ಅಂಕಲಗಿ, ಶಿವರಾಜ್‌ ಪಾಟೀಲ, ರಮೇಶ ನಾಯ್ಕರ, ಪ್ರಭು ಪಂಡಿತ ಇದ್ದರು.

ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆನ್‌ ಲೈನ್‌ ಮೂಲಕ ಆಚರಿಸಲಾಯಿತು. ಈ ವೇಳೆ ಆಯ್ದ ವಿದ್ಯಾರ್ಥಿಗಳಿಂದ ಗಜಾಸನ, ಕುಕ್ಕುಟಾಸನ, ಮಯೂರಾಸನ, ವೃಷಭಾಸನ, ಮತ್ಸಾಸನ, ಮುಂತಾದ ಯೋಗಾಸನಗಳನ್ನು ನೇರ ಪ್ರಸಾರದ ಮೂಲಕ ಪ್ರದರ್ಶಿಸಲಾಯಿತು.

Advertisement

ಪ್ರಾಚಾರ್ಯ ಶ್ರೀಧರ ಕುರಬೇಟ ಮಾತನಾಡಿದರು. ಶಿಕ್ಷಕರಾದ ಎ.ಎಚ್‌. ಸಗರ, ಪ್ರವೀಣ ಗೆಣ್ಣೂರ, ಸಿದ್ದು ತೊರವಿ, ಸೀಮಾ ಸದಲಗ, ದೀಪಾ, ಸರೋಜಾ, ಶ್ರೀದೇವಿ, ಸವಿತಾ, ಮೀನಾಕ್ಷಿ ಇದ್ದರು. ಒತ್ತಡದ ಬದುಕಿನಲ್ಲಿ ಮಾನವನು ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ನಾವುಗಳು ಇಂದು ನಮ್ಮ ಬದುಕನ್ನು ಅನೇಕ ಸಮಸ್ಯೆಗಳಿಗೆ ಒಡ್ಡುತ್ತಿದ್ದೇವೆ.

ಇದಿರಂದಾಗಿ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗದೆ ಕಷ್ಟ ಅನುಭವಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಆಗೋಗ್ಯ ಸಮಸ್ಯೆಗಳನ್ನು ಹಾಗೂ ಒತ್ತಡವನ್ನು ನಿವಾರಿಸಲು ಯೋಗ ಒಂದು ಅಸ್ತ್ರವಾಗಿದೆ ಎಂದು ಮಹಾರಾಷ್ಟ್ರದ ಔರಂಗಾಬಾದನ ಯೋಗ ಗುರು ಗಾಯತ್ರಿ ಕುಲಕರ್ಣಿ ಹೇಳಿದರು.ನಗರದ ವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದಲ್ಲಿ ಐಕ್ಯುಎಸ್‌ಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಯೋಗ ತರಬೇತಿ ನೀಡಿ ಮಾತನಾಡಿದರು. ಪ್ರಾಚಾರ್ಯ ಗಿರೀಶ ಮಣ್ಣೂರ, ರಾಜು ಕಪಾಲಿ, ಸೀಮಾ ಪಾಟೀಲ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next