Advertisement

ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸಾ.ರಾ.ಮಹೇಶ್‌

12:24 PM Mar 25, 2017 | Team Udayavani |

ಕೆ.ಆರ್‌.ನಗರ: ಶಾಸಕ ಸಾ.ರಾ.ಮಹೇಶ್‌ ತಾಲೂಕಿನಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು ಇತರ ಚುನಾಯಿತ ಸದಸ್ಯರ ಅಧಿಕಾರ ಮೊಟಕು ಮಾಡುತ್ತಿರುವುದರ ಜತೆಗೆ ಆಶ್ರಯ ಮನೆಗಳ ವಿತರಣೆ ಮಾಡಲು ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರಿಗೆ ಮುಕ್ತ ಅವಕಾಶ ನೀಡದೆ ಶೇ 50ರಷ್ಟು ಮನೆಗಳನ್ನು ತಾವು ಹೇಳಿದವರಿಗೆ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದು ಜಿಪಂ ಸದಸ್ಯ ಅಚ್ಯುತಾನಂದ ಆರೋಪಿಸಿದರು.

Advertisement

ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲಾ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ತತ್ವ, ಸಿದ್ಧಾಂತ ಹಾಗೂ ಪ್ರಾಮಾಣಿಕತೆ ಭಾಷಣ ಮಾಡುವ ಶಾಸಕರು ಪುರಸಭೆ ಮತ್ತು ಎಪಿಎಂಸಿ ಆಡಳಿತ ಮಂಡಳಿಗಳ ಅಧ್ಯಕ್ಷರ ಚುನಾವಣೆಗಳಲ್ಲಿ ಕಾಂಗ್ರೆಸ್‌ ಬೆಂಬಲಿತ  ಸದಸ್ಯರನ್ನು ಸೆಳೆದು ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿದಿದ್ದು ಇವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

ಪಟ್ಟಣದ ಪುರಸಭೆಯ ಆಶ್ರಯ ನಿವೇಶನಗಳ ದಾಖಲಾತಿಗಳು ಇರುವ ಕಪಾಟಿಗೆ ಬೀಗ ಜಡಿದಿರುವ ಸಾ.ರಾ.ಮಹೇಶ್‌ ಹಿಟ್ಲರ್‌ ಸಂಸ್ಕೃತಿ ಅನುಸರಿಸುತ್ತಿದ್ದು ಇವರಿಗೆ ಬೀಗ ಜಡಿಯುವ ಅಧಿಕಾರ ನೀಡಿದವರು ಯಾರು? ಅಧಿಕಾರಿಗಳು ತಪ್ಪು ಮಾಡಿದರೆ ಚುನಾಯಿತ ಸದಸ್ಯರು ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬಹುದು, ಆದರೆ ಸರ್ಕಾರಿ ಕಚೇರಿಗಳ ಕಡತಗಳನ್ನು ಬೀಗ ಹಾಕಿ ತಮ್ಮ ಸುಪರ್ದಿನಲ್ಲಿ ಇಟ್ಟುಕೊಳ್ಳುವ ಪರಮಾಧಿಕಾರ ವಿದೆಯೆ ಎಂದರು.

ತಾಲೂಕಿನ ಕೆಗ್ಗೆರೆ ಗ್ರಾಮದ ಬಳಿ ಶಾಸಕರು ನಿರ್ಮಾಣ ಮಾಡುತ್ತಿರುವ ಗಾರ್ಮೆಂಟ್ಸ್‌ ಕಾರ್ಖಾನೆಗೆ ನಾಲಾ ಆಧುನೀಕರಣ ಕಾಮಗಾರಿಯನ್ನು ಗುತ್ತಿಗೆಗೆ ಪಡೆದಿರುವ ಗುತ್ತಿಗೆದಾರ ನಾಗಪ್ಪವಡ್ಡಾರ್‌ ಹಣ ನೀಡುತ್ತಿದ್ದಾರೆ. ಜಲ ಸಂಪನ್ಮೂಲ ಇಲಾಖೆಯ ಕೆಲ ಎಂಜಿನಿಯರ್‌ಗಳು ನಿಂತು ಕಾಮಗಾರಿಯ ನಿರ್ವಹಣೆ ಮಾಡಿಸುತ್ತಿದ್ದು ಕಟ್ಟಡದ ಗುತ್ತಿಗೆಯನ್ನು ನಾಗಪ್ಪ ವಡ್ಡಾರ್‌ ಅವರಿಗೆ ನೀಡಲಾಗಿದೆಯೋ ಅಥವಾ ಅವರು ಪಾಲುದಾರರೊ ಎಂಬುದನ್ನು ಶಾಸಕರು ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ತಾಲೂಕು ಪ.ಜಾತಿ ಮತ್ತು ಪಂಗಡಗಳ ಜಾಗೃತಿ ಸಮಿತಿಗೆ ಸದಸ್ಯರನ್ನು ನೇಮಕ ಮಾಡುವಾಗ ಶಾಸಕರು ದಲಿತರ ಪರವಾದ ಕಾಳಜಿ ಇಲ್ಲದವರನ್ನು ಶಿಫಾರಸ್ಸು ಮಾಡಿ ಜೆಡಿಎಸ್‌ ಬೆಂಬಲಿತರಿಗೆ ಆದ್ಯತೆ ನೀಡಿದ್ದು ಇದು ಅವರ ದಲಿತರ ಪರವಾದ ಕಾಳಜಿಗೆ ಸಾಕ್ಷಿ.  ಜಿಪಂ ಸದಸ್ಯರು ಸರ್ಕಾರಿ ಕಾರ್ಯ ಕ್ರಮಗಳಿಗೆ ಸಮಯಕ್ಕೆ ಸರಿಯಾಗಿ ಬಾರದೆ ಇತರ ಪಕ್ಷಗಳ ಚುನಾಯಿತರನ್ನು ಗಂಟೆಗಟ್ಟಲೆ ಕಾಯಿಸುವ ಪರಿಪಾಠ ಬೆಳೆಸಿಕೊಂಡಿರುವ ಸಾ.ರಾ.ಮಹೇಶ್‌ ಮೊದಲು ಸಮಯ ಪ್ರಜ್ಞೆ ಕಲಿಯಲಿ ಎಂದು ಸಲಹೆ ನೀಡಿದರು.

Advertisement

ಜಿಪಂ ಸದಸ್ಯ ಡಿ.ರವಿಶಂಕರ್‌, ಮಾಜಿ ಸದಸ್ಯ ಜಿ.ಆರ್‌.ರಾಮೇಗೌಡ, ತಾ.ಪಂ.ಅಧ್ಯಕ್ಷ ಹೆಚ್‌.ಟಿ.ಮಂಜುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌. ಮಹದೇವ್‌, ಉದಯಕುಮಾರ್‌, ವಕ್ತಾರ ಜಾಬೀರ್‌, ಕಾಂಗ್ರೆಸ್‌ ಪಶುಬಾಗ್ಯ ನಾಮ ನಿರ್ದೇಶನ ಸದಸ್ಯ ಸಾ.ಮಾ.ಯೋಗೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next