Advertisement

ನಿರ್ಮಲಾ ಅಲಿಯಾಸ್ ಸರೋಜ್ ಖಾನ್;13ನೇ ವಯಸ್ಸಿಗೆ ಮದುವೆ…ನೃತ್ಯ ಸಂಯೋಜಕಿ ಬಣ್ಣದ ಬದುಕು!

10:58 AM Jul 03, 2020 | Nagendra Trasi |

ಮಣಿಪಾಲ್: ಬಾಲಿವುಡ್ ಲೋಕದಲ್ಲಿ “ದ ಮದರ್ ಆಫ್ ಡ್ಯಾನ್ಸ್”…ಮಾಸ್ಟರ್ ಜೀ ಎಂದೇ ಕರೆಯಿಸಿಕೊಂಡಿದ್ದ ನಿರ್ಮಲಾ ನಾಗ್ ಪಾಲ್ ಅಲಿಯಾಸ್ ಸರೋಜ್ ಖಾನ್ ಖ್ಯಾತ ನೃತ್ಯ ಸಂಯೋಜಕಿಯಾಗಿದ್ದರು. ಸತತ ನಾಲ್ಕು ದಶಕಕ್ಕಿಂತಲೂ ಹೆಚ್ಚು ಕಾಲ ಬರೋಬ್ಬರಿ 2000 ಸಾವಿರಕ್ಕೂ ಅಧಿಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಕೀರ್ತಿ ಸರೋಜ್ ಅವರದ್ದಾಗಿದೆ.

Advertisement

3ವರ್ಷಕ್ಕೆ ಬಣ್ಣ ಹಚ್ಚಿದ್ದ ಸರೋಜ್ 13ನೇ ವಯಸ್ಸಿಗೆ ವಿವಾಹ!
ಸ್ವಾತಂತ್ರ್ಯ ನಂತರ ಭಾರತ ಇಬ್ಭಾಗಗೊಂಡಾಗ ಪೋಷಕರು ಬಾಂಬೆಗೆ ವಲಸೆ ಬಂದಿದ್ದರು. ನಿರ್ಮಲಾ 1948ರ ನವೆಂಬರ್ 22ರಂದು ಜನಿಸಿದ್ದರು. 1950ರಲ್ಲಿ ತೆರೆಕಂಡಿದ್ದ ನಜರಾನಾ ಸಿನಿಮಾದಲ್ಲಿ ನಿರ್ಮಲಾ ಬಾಲನಟಿಯಾಗಿ ನಟಿಸಿದ್ದರು…ಆಗ ಅವರ ವಯಸ್ಸು ಬರೇ 3 ವರ್ಷ!

ನಂತರ ನೃತ್ಯ ಸಂಯೋಜಕ ಬಿ.ಸೋಹನ್ ಲಾಲ್ ಅವರ ಬಳಿ ನಿರ್ಮಲಾ ಕಾರ್ಯನಿರ್ವಹಿಸುತ್ತ ನೃತ್ಯವನ್ನು ಕಲಿತುಬಿಟ್ಟಿದ್ದರು. ಹೀಗೆ ನೃತ್ಯ ಕಲಿಸುತ್ತಿದ್ದ ಗುರು ಸೋಹನ್ ಲಾಲ್ ಅವರ ಜತೆ ವಿವಾಹವಾಗಿದ್ದರು. ಆಗ ಈಕೆ ವಯಸ್ಸು 13. ಅದಾಗಲೇ ವಿವಾಹಿತ ಸೋಹನ್ ಲಾಲ್ ಗೆ(43ವರ್ಷ) ನಾಲ್ವರು ಮಕ್ಕಳಿದ್ದರು. 14ನೇ ವಯಸ್ಸಿಗೆ ಸರೋಜ್ ಮೊದಲ ಮಗುವಿಗೆ ತಾಯಿಯಾಗಿದ್ದರು.

ಸಂದರ್ಶನವೊಂದರಲ್ಲಿ ಸರೋಜ್ ಹೇಳಿದ್ದು “ನಾನಾಗ ಶಾಲೆಗೆ ಹೋಗುತ್ತಿದ್ದೆ. ಒಂದು ದಿನ ನಮ್ಮ ನೃತ್ಯ ಗುರು ಸೋಹನ್ ಲಾಲ್ ನನ್ನ ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಬಿಟ್ಟಿದ್ದರು..ಹೀಗೆ ನಮ್ಮ ಮದುವೆ ನಡೆದುಬಿಟ್ಟಿತ್ತು” ಎಂದು ನೆನಪಿಸಿಕೊಂಡಿದ್ದರು.

Advertisement

ಕೆಲವು ವರ್ಷಗಳಲ್ಲಿ ಇವರಿಬ್ಬರೂ ಪ್ರತ್ಯೇಕವಾಗಿದ್ದು. ಆದರೂ ಸರೋಜ್ ಸೋಹನ್ ಲಾಲ್ ಜತೆ ಸಹಾಯಕಿಯಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದ್ದರು. ನಂತರ ಸೋಹನ್ ಲಾಲ್ ಗೆ ಹೃದಯಾಘಾತವಾದಾಗ ಇಬ್ಬರೂ ಮತ್ತೆ ಒಂದಾಗಿದ್ದರು. ಹೀಗೆ ಸರೋಜ್, ಸೋಹನ್ ದಂಪತಿಗೆ ಮಗಳು ಹೀನಾ ಖಾನ್ ಜನಿಸಿದ್ದಳು.1975ರಲ್ಲಿ ಸರೋಜ್ ಮುಂಬೈ ತೊರೆದು ಮಕ್ಕಳೊಂದಿಗೆ ಚೆನ್ನೈಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಉದ್ಯಮಿ ರೋಶನ್ ಖಾನ್ ಅವರನ್ನು ಸರೋಜ್ ವಿವಾಹವಾಗಿದ್ದು, ದಂಪತಿಗೆ ಸುಕೈನಾ ಖಾನ್ ಎಂಬ ಮಗಳು ಜನಿಸಿದ್ದಳು.

ಖ್ಯಾತಿ ತಂದುಕೊಟ್ಟಿದ್ದು ಮಿಸ್ಟರ್ ಇಂಡಿಯಾ ಹಾಡು!

1974ರಲ್ಲಿ ತೆರೆಕಂಡಿದ್ದ ಗೀತಾ ಮೇರಾ ನಾಮ್ ಸಿನಿಮಾದಲ್ಲಿ ಸ್ವತಂತ್ರ ನೃತ್ಯ ಸಂಯೋಜಕಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ಆದರೆ ಹಲವು ವರ್ಷಗಳವರೆಗೆ ಸರೋಜ್ ಅವರಿಗೆ ಯಶಸ್ಸು ಸಿಕ್ಕಿರಲಿಲ್ಲವಾಗಿತ್ತು. ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ತಂದುಕೊಟ್ಟಿದ್ದು 1987ರ ಮಿಸ್ಟರ್ ಇಂಡಿಯಾ
ಸಿನಿಮಾದಲ ಹವಾ ಹವಾಯೀ. ಇದರಲ್ಲಿ ನಟಿ ಶ್ರೀದೇವಿಗೆ ನೃತ್ಯ ಸಂಯೋಜಿಸಿದ್ದು ಸರೋಜ್ ಖಾನ್!. ಬಳಿಕ ನಗೀನಾ, ಚಾಂದ್ನಿ ಸಿನಿಮಾಕ್ಕೆ ನೃತ್ಯ ಸಂಯೋಜಿಸಿದ್ದ ಸರೋಜ್ ಬಾಲಿವುಡ್ ಮತ್ತೊಬ್ಬ ಚೆಲುವೆ ಮಾಧುರಿ ದೀಕ್ಷಿತ್ ಅವರ ತೇಜಾಬ್ ಚಿತ್ರದ ಏಕ್ ದೋ ತೀನ್ ಹಾಡಿಗೆ ನೃತ್ಯ ಸಂಯೋಜಿಸುವ ಮೂಲಕ ಬಾಲಿವುಡ್ ನ ಯಶಸ್ವಿ ಕೋರಿಯೋಗ್ರಾಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ತಮ್ಮ ಅದ್ಭುತ ಪ್ರತಿಭೆಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ
ಪಡೆದಿದ್ದರು. 71ರ ಹರೆಯದಲ್ಲಿ ಹೃದಯ ಸ್ತಂಭನಕ್ಕೊಳಗಾಗಿ ಇಂದು ಇಹಲೋಕ ತ್ಯಜಿಸಿರುವ ಸರೋಜ್ ಖಾನ್ ಅವರಿಗೆ ಬಾಲಿವುಡ್ ನ ಖ್ಯಾತ ನಟ, ನಟಿಯರು ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next