Advertisement

ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ

06:15 PM Jun 15, 2019 | mahesh |

ಉದಯವಾಣಿ ಪತ್ರಿಕೆಯ 2019 ಜೂ. 2ರ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನದ ಬಗ್ಗೆ ನನಗೆ ಅಚ್ಚರಿ ಎನಿಸುವಷ್ಟು ಓದುಗರು ಸ್ಪಂದಿಸಿದ್ದಾರೆ. ಫೋನ್‌, ಎಸ್‌ಎಂಎಸ್‌, ಫೇಸ್‌ಬುಕ್‌, ಇ-ಮೇಲ್‌ ಹಾಗೂ ಪರಸ್ಪರ ಭೇಟಿಯಲ್ಲಿ ಸುಮಾರು ಒಂದು ತಲೆಮಾರಿಗಿಂತಲೂ ಹಿಂದೆ ಇದ್ದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಪಡೆದ ಶಿಕ್ಷಣದ ಕುರಿತಾದ ಹೆಮ್ಮೆಯೇ ನನ್ನ ಈ ಬರೆಹಕ್ಕೆ ಸ್ಫೂರ್ತಿ. ಹೆಚ್ಚಿನೆಲ್ಲರೂ ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ, ನನ್ನ ಇಂಗ್ಲಿಷ್‌ ವಿರೋಧಿ ಪೂರ್ವಾಗ್ರಹವೇ ಈ ಲೇಖನವನ್ನು ನಾನು ಬರೆಯುವಂತಾಯಿತು ಎಂದು ಕುಟುಕಿದವರೂ ಒಂದಿಬ್ಬರು ಇದ್ದರೆನ್ನಿ.

Advertisement

ನಾನು ಇಂಗ್ಲಿಷ್‌ ವಿರೋಧಿಯಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ವೈಜ್ಞಾನಿಕ ಸಂಶೋಧನೆಗಳಿಗೆ ಮನ್ನಣೆ ಪಡೆದ, ಕನ್ನಡ ಮಾಧ್ಯಮದಲ್ಲಿ ಕಲಿತ, ಇಂದೂ ಪಂಪ, ರನ್ನ, ಜನ್ನ, ಕುಮಾರವ್ಯಾಸ, ರತ್ನಾಕರವರ್ಣಿ ಮುಂತಾದವರನ್ನು ಮತ್ತೆ ಮತ್ತೆ ಓದಲು ಹಪಹಪಿಸುವ, ಎಂಬತ್ತಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನಾ ಲೇಖನಗಳನ್ನು ಇಂಗ್ಲಿಷ್‌ನಲ್ಲೇ ಬರೆದು ಪ್ರಕಟಿಸಿದ ಹಳ್ಳಿಗ ನಾನು.

ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಲ್ಲ ಎನ್ನುವ ನೆಪವೊಡ್ಡಿ , ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳನ್ನು ಮುಚ್ಚಲು ನಮ್ಮ ಘನ ಸರ್ಕಾರ ತೋರುವ ಆತುರ ನಮ್ಮಂಥವರನ್ನು ಬೆಚ್ಚಿ ಬೀಳಿಸುತ್ತಿದೆ. ಸರಕಾರಿ ಕನ್ನಡ ಶಾಲೆಗಳನ್ನು ಆಕರ್ಷಣೀಯವಾಗಿಸಲು ಮಾರ್ಗವಿಲ್ಲವೆ? ಇದೆ. ಆದರೆ ಆ ಬಗ್ಗೆ ಆಸಕ್ತಿ ಇಲ್ಲದಿರುವುದೇ ಸಮಸ್ಯೆ. ನಮ್ಮ ಉಭಯ ಜಿಲ್ಲೆಗಳಲ್ಲಿನ ಕೆಲವು ಕನ್ನಡ ಶಾಲೆಗಳು ಸ್ಥಳೀಯರ ಹಾಗೂ ಶಿಕ್ಷಕರುಗಳ ಪ್ರಯತ್ನದಿಂದ ಮಾದರಿ ಶಾಲೆಗಳಾಗಿರುವುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. “ಕನ್ನಡ, ಕನ್ನಡ’ ಎಂದು ಕೂಗುವ ಬದಲು ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು, ಬೆಳೆಸಲು ನಾವು ಕಟಿಬದ್ಧರಾಗಬೇಕು. ಕನ್ನಡದಲ್ಲಿ ಕಲಿತವರೂ, ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೆ ಕಡಿಮೆ ಏನಲ್ಲ ಎಂಬುದನ್ನು ಭ್ರಮಾಧೀನರಾದ ನಮ್ಮ ಜನಗಳಿಗೆ ಉದಾಹರಣೆಗಳ ಮೂಲಕ ಸಾಬೀತು ಪಡಿಸಬೇಕು.

ಪುಣ್ಯಾವಶಾತ್‌ ಮುಂಬಯಿಯಲ್ಲಿ ಕನ್ನಡದ ಬಗೆಗಿನ ಕಾಳಜಿ ದಿನೇದಿನೇ ವೃದ್ಧಿಸುತ್ತಿದೆ. ನೂರಾರು ಸಂಖ್ಯೆಯಲ್ಲಿದ್ದ ಕನ್ನಡ ರಾತ್ರಿ ಶಾಲೆಗಳಲ್ಲಿ ಹೆಚ್ಚಿನವು ಮುಚ್ಚಿದರೂ, ಕೆಲವು ಇನ್ನೂ ಕಾರ್ಯಪ್ರವೃತ್ತವಾಗಿವೆ. ಬೃಹನ್ಮುಂಬಯಿ ನಗರಪಾಲಿಕೆ ಸಾಕಷ್ಟು ಸಂಖ್ಯೆಯ ಕನ್ನಡ ಶಾಲೆಗಳನ್ನು ನಡೆಸುತ್ತಿದೆ. ಕನ್ನಡಿಗರೇ ನಡೆಸುವ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಪ್ರೌಢಶಿಕ್ಷಣವನ್ನು ಕನ್ನಡದಲ್ಲಿ ಪಡೆಯುವ ಅವಕಾಶ ಲಭ್ಯವಿರುವುದಲ್ಲದೆ, ಇಲ್ಲಿನ ಎಸ್‌.ಎಸ್‌.ಸಿ. ಫ‌ಲಿತಾಂಶ ಹೆಚ್ಚು ಕಡಿಮೆ ನೂರರಷ್ಟಿದೆ. ತುಳು, ಕೊಂಕಣಿ ಮಾತೃಭಾಷೆಯಾಗುಳ್ಳ ಕೆಲವು ಸಿರಿವಂತರು ಕೂಡ ತಮ್ಮ ಮಕ್ಕಳು ಪ್ರಾಥಮಿಕ ಅಭ್ಯಾಸವನ್ನು ಕನ್ನಡದಲ್ಲೇ ಮಾಡಿಸುವ ಆಸಕ್ತಿ ಹೊಂದಿರುತ್ತಾರೆ. ವಿವಿಧ ಕನ್ನಡ ಸಂಸ್ಥೆಗಳು ಕನ್ನಡ ಕಲಿಸುವ ಕಾರ್ಯಕ್ರಮ ಹೊಂದಿವೆ. “ಚಿಣ್ಣರ ಬಿಂಬ’ದಂತಹ ಸಂಸ್ಥೆ ಮಕ್ಕಳಿಗೆ ಕನ್ನಡದ ಜೊತೆ ನಮ್ಮ ಸಂಸ್ಕೃತಿ, ಜನಪದಗಳ ಬಗ್ಗೆ ಶಿಕ್ಷಣ ನೀಡುತ್ತಿದೆ. ಕನ್ನಡ ಸರ್ಟಿಫಿಕೇಟ್‌ ಕೋರ್ಸ್‌ನಿಂದ ಹಿಡಿದು ಪಿ.ಎಚ್‌ಡಿವರೆಗೆ ಅಧ್ಯಯನ ನಡೆಸುವ ಅವಕಾಶವನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಕನ್ನಡಾಸಕ್ತರಿಗೆ ನೀಡುತ್ತಲಿದೆ.

ವ್ಯಾಸರಾವ್‌ ನಿಂಜೂರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next