ಬೆಂಗಳೂರು: ಆರೆಸ್ಸೆಸ್ ರದ್ದು ಮಾಡಿದ್ದೇ ವಲ್ಲಭಬಾಯಿ ಪಟೇಲ್. ಈಗ ವಲ್ಲಭಬಾಯಿ ಪಟೇಲ್ ಅವರ ಹೆಸರು ಹೇಳಿಕೊಂಡು ದೇಶ ಭಕ್ತರಾಗಲು ಹೊರಟಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು. ಇತಿಹಾಸವನ್ನು ತಿರುಚುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಪಟೇಲ್ ಪ್ರತಿಮೆಗೆ ನಮ್ಮ ವಿರೋಧ ಇಲ್ಲ. ಆದರೆ, ನೆಹರು ಹಾಗೂ ಪಟೇಲ್ ಸಂಬಂಧದ ಬಗ್ಗೆ ಇತಿಹಾಸ ತಿರುಚಿ, ಬಿಂಬಿಸುತ್ತಿರುವ ರೀತಿ ಬಗ್ಗೆ ಆಕ್ಷೇಪ ಇದೆ ಎಂದರು.
ವಲ್ಲಭ ಬಾಯಿ ಪಟೇಲ್ ಬಿಜೆಪಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ದೇಶಕ್ಕಾಗಿ ಬಿಜೆಪಿಯವರು ಒಬ್ಬರೂ ಪ್ರಾಣತ್ಯಾಗ ಮಾಡಿಲ್ಲ. ದೇಶದ ಏಕತೆಗಾಗಿ ಇಂದಿರಾಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ. ಬಿಜೆಪಿಯದ್ದು ಮಹಾತ್ಮ ಗಾಂಧೀಜಿಯನ್ನು ಕೊಂದ ವಂಶ. ಆದರೆ, ತಾವು ದೇಶ ಭಕ್ತರು ಎಂದು ಈಗ ಹೇಳುತ್ತಾರೆ. ಮೋದಿ ಮಹಾನ್ ದೇಶಭಕ್ತ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಜಯಚಂದ್ರ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅಂತಹವರನ್ನು ಗೆಲ್ಲಿಸಬೇಕು. ಶಿರಾದಲ್ಲಿ ಕಾಂಗ್ರೆಸ್‌ಜಯ ಸಾಧಿಸಲಿದೆ. ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾತ್ಮರ ಮಾರ್ಗದರ್ಶನ ಅಗತ್ಯ; ಡಿಕೆಶಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ದೇಶ ಕಂಡ ಅಪ್ರತಿಮ ಪ್ರಧಾನಿ ಎಂದರೆ ಇಂದಿರಾ ಗಾಂಧಿ ಎಂದು ಜನ ಹೇಳುತ್ತಾರೆ. ಅವರನ್ನು ದುರ್ಗಾದೇವಿ ಎಂದು ಅಟಲ್ ಬಿಹಾರಿ ವಾಜಪೇಯಿ ಅವರೇ ಹೇಳಿದ್ದಾರೆ ಎಂದು ಮೆಲುಕು ಹಾಕಿದರು.
ಹೆಣಗಳ ರಾಶಿ ಮೇಲೆ ಹಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು ಶಿರಾ ಉಪಚುನಾವಣೆಯಲ್ಲಿಯೂ ಅಡ್ಡದಾರಿ ಹಿಡಿದಿದ್ದಾರೆ. ವಾಮಮಾರ್ಗದ ಮೂಲಕ ಗೆಲ್ಲಲು ಹೊರಟಿದ್ದಾರೆಂದರು. ಪ್ರವಾಹದಿಂದ ನಲುಗಿದವರಿಗೆ ನೆರವಿಲ್ಲ, ಕೋವಿಡ್ ನಿರ್ವಹಣೆಯಲ್ಲೂ ಸರ್ಕಾರ ವಿಫಲವಾಗಿದೆ. ಬಿಜೆಪಿ ನಾಯಕರು ಹೆಣಗಳ ರಾಶಿ ಮೇಲೆ ದುಡ್ಡು ಹೊಡೆದಿದ್ದಾರೆಂದು ಟೀಕಿಸಿದರು.
ಇದೇ ವೇಳೆ ಸರ್ದಾರ್ ವಲ್ಲಭ ಬಾಯಿ ಪಟೇಲ್, ಇಂದಿರಾ ಗಾಂಧಿ ಅವರ ಭಾವಚಿತ್ರಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್.ಶಂಕರ್ ಮತ್ತಿತರರು ಪುಷ್ಪನಮನ ಸಲ್ಲಿಸಿದರು.