ನವದೆಹಲಿ:2001ರ ತಮ್ಮ ಉದ್ಯೋಗಿಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಇತ್ತೀಚೆಗಷ್ಟೇ ಪೊಲೀಸರಿಗೆ ಶರಣಾಗಿದ್ದ ಶರವಣ ಭವನ ಗ್ರೂಫ್ ಆಫ್ ಹೋಟೆಲ್ ಮಾಲೀಕ ಪಿ.ರಾಜಗೋಪಾಲ್(72ವರ್ಷ) ಗುರುವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಅನಾರೋಗ್ಯದ ಕಾರಣದಿಂದ ತನಗೆ ಶರಣಾಗಲು ಇನ್ನಷ್ಟು ಕಾಲಾವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್ ನಲ್ಲಿ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ರಾಜಗೋಪಾಲ್ ಜುಲೈ 10ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾದ ನಂತರ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 2009ರಂದು ದೋಸಾ ಕಿಂಗ್ ಎಂದೇ ಹೆಸರಾಗಿದ್ದ ರಾಜಗೋಪಾಲ್ ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೆ ರಾಜಗೋಪಾಲ್ ಪೊಲೀಸರಿಗೆ ಶರಣಾಗಿದ್ದು, 2019ರ ಜುಲೈ 9ರಂದು.
ಏನಿದು ಪ್ರಕರಣ:
2001ರಂದು ತನ್ನ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಿನ್ಸ್ ಶಾಂತಕುಮಾರ್ ಎಂಬಾತನ ಹೆಂಡತಿಯನ್ನು ಮದುವೆಯಾಗುವ ದುರುದ್ದೇಶದಿಂದ ಆತನನ್ನು ಅಪಹರಿಸಿ, ಕೊಲೆ ಮಾಡಿಸಿದ್ದ. ಶಾಂತಕುಮಾರ್ ಪತ್ನಿ ಜೀವಜ್ಯೋತಿಯನ್ನು ಮೂರನೇ ಪತ್ನಿಯನ್ನಾಗಿ ಮದುವೆಯಾಗಲು ರಾಜಗೋಪಾಲ್ ಬಯಸಿರುವುದಾಗಿ ವರದಿ ತಿಳಿಸಿದೆ.
2004ರಲ್ಲಿ ಕೊಲೆ ಪ್ರಕರಣದಲ್ಲಿ ರಾಜಗೋಪಾಲ್ ಹಾಗೂ ಇತರ ಎಂಟು ಮಂದಿಗೆ ಸ್ಥಳೀಯ ಕೋರ್ಟ್ 10 ವರ್ಷಗಳ ಶಿಕ್ಷೆ ವಿಧಿಸಿತ್ತು. ಬಳಿಕ ಐದು ವರ್ಷಗಳ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಿತ್ತು. ತದನಂತರ ಮದ್ರಾಸ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ಕೂಡಾ ತೀರ್ಪನ್ನು ಎತ್ತಿಹಿಡಿದಿತ್ತು.