ಸಮಾಜದಲ್ಲಿ ಸೌಹಾರ್ದ, ಮನುಷ್ಯ ಪ್ರೀತಿಯಿಂದ ಬದುಕಬೇಕು ಎಂಬುದನ್ನು ಸಾಹಿತಿಯಾಗಿ ಬರವಣಿಗೆ ಮೂಲಕ ತೋರಿಸಿದ್ದಲ್ಲದೆ, ತುಳುನಾಡಿನ ಸಂಸ್ಕೃತಿಯ ಜೀವಾಳವಾದ ಸೌಹಾರ್ದದ ಬಾಳನ್ನು ಬದುಕಿ ತೋರಿಸಿದವರು ನಾಡೋಜ ಡಾ| ಸಾರಾ ಅಬೂಬಕರ್. ಅವರ ಮಾನವ ಪ್ರೀತಿ, ಅನ್ಯಾಯದ ವಿರುದ್ಧ ಧ್ವನಿಯಾಗುವ ಅವರ ನಡೆಯಿಂದ ಅವರ ವ್ಯಕ್ತಿತ್ವ ಮಹಾನ್ ಅನ್ನಿಸಿಕೊಳ್ಳುತ್ತದೆ.
ತಳ ಮಟ್ಟದ ಮಹಿಳೆಯರ ಜತೆ ಒಡನಾಟ ಹೊಂದಿದ್ದ ಡಾ| ಸಾರಾ ಅಬೂಬಕರ್, ತಮ್ಮನ್ನು ಯಾರೇ ಆಹ್ವಾನಿಸಿದರೂ ಬಿಗುಮಾನವಿಲ್ಲದೆ ತೆರಳುತ್ತಿದ್ದರು. ಅವರ ಜತೆ ಬೆರೆಯುತ್ತಿದ್ದರು. ಜತೆಗೆ ಅರಿವು ಹಂಚುವ ಕಾರ್ಯ ಮಾಡುತ್ತಿದ್ದರು. ಬರಹಗಾರರು ಕೋಣೆಯಲ್ಲಿ, ಎಸಿ ರೂಮಿನಲ್ಲಿ ಕುಳಿತು ಬರೆಯುವ ಬದಲು, ಯಾವುದೇ ಧರ್ಮ, ಮತ ಭೇದಗಳ ಅಂತರವಿಲ್ಲದೆ ಜತೆಯಾಗಿ ಬೆರೆತು ಅವರ ಜತೆ ಚರ್ಚಿಸುವುದು, ಅವರನ್ನು ಅರಿಯುವುದು, ಅವರಿಗೆ ಅರಿವು ಮೂಡಿಸುವ ಕಾರ್ಯ ಒಬ್ಬ ಬರಹಗಾರನ ಹೃದಯ ಶ್ರೀಮಂತಿಕೆ. ಅದು ಡಾ. ಸಾರಾ ಅಬೂಬಕರ್ ಅವರಲ್ಲಿತ್ತು. ಅದಕ್ಕಾಗಿ ಅವರು ನನಗೆ ಅತ್ಯಂತ ಪ್ರಬುದ್ಧ, ಮೇಲ್ಪಂಕ್ತಿಯ ಬರಹಗಾರರೆನಿಸಿದ್ದಾರೆ.
ದ.ಕ. ಜಿಲ್ಲೆಯ ಮಹಿಳಾ ಹೋರಾಟಗಳೂ ಸೇರಿದಂತೆ ಹಲವು ಪ್ರತಿಭಟನೆಗಳಲ್ಲಿ ಅವರು ಪಾಲ್ಗೊಂಡಿದ್ದರು. ಆ ಮೂಲಕ ನಮ್ಮಲ್ಲೂ ಧೈರ್ಯ ತುಂಬಿದವರು. ತನಗೆ ಹೇಳಬೇಕೆನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದವರು. ಕರಾವಳಿ ವಾಚಕಿಯರ, ಲೇಖಕಿಯರ ಸಂಘದ ಹುಟ್ಟಿನಿಂದ ಹಿಡಿದು ಅದರ ಬೆಳವಣಿಗೆಗೆ ಶ್ರಮಿಸಿದವರಲ್ಲಿ ಸಾರಾ ಕೂಡಾ ಒಬ್ಬರು. ಅವರು ಸಂಘಕ್ಕೆ ಒಂದು ದೊಡ್ಡ ನಿಧಿಯಾಗಿದ್ದರು.
ಸುಮಾರು 40ರಿಂದ 45 ವರ್ಷಗಳಿಂದ ಅವರನ್ನು ಬಲ್ಲೆ. ಸಂಘದ ಅಧ್ಯಕ್ಷರಾಗಿದ್ದಾಗ ಜತೆಗೆ ಕೆಲಸ ಮಾಡುವ ಅವಕಾಶವೂ ದೊರಕಿತ್ತು. ಸಾಹಿತ್ಯ ಎಂಬುದು ಸಮಾಜದ ಪ್ರತಿಬಿಂಬವಾಗಬೇಕು ಎಂಬುದು ಅವರ ಅನಿಸಿಕೆಯಾಗಿತ್ತು.
ಯಾರು ಅನ್ಯಾಯಕ್ಕೆ ಒಳಗಾಗುತ್ತಾರೆಯೋ ಅವರ ಜತೆ ನಾವು ಇರಬೇಕು. ಅದನ್ನು ಸಮಾಜಕ್ಕೆ ತಿಳಿಸಬೇಕು. ಪ್ರಭುತ್ವಕ್ಕೆ ಮನವರಿಕೆ ಮಾಡಬೇಕು. ವಿರೋಧ ಮಾಡುವವರಿಗೆ ವಾಸ್ತವವನ್ನು ತಿಳಿಸುವ ಕೆಲಸವಾಗಬೇಕು ಎಂಬ ಧ್ವನಿಯೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದವರು ಸಾರಾ ಅಬೂಬಕರ್. ಕೇವಲ ಬರಹದಲ್ಲಿ ಅವರು ಸಮಾಜದ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದವರಲ್ಲ.
ಲೇಖಕರು, ಸಾಹಿತಿಗಳು ಕೇವಲ ಭಾವನಾತ್ಮಕವಾಗಿ ಬೆಳೆದರೆ ಸಾಲದು. ಬೌದ್ಧಿಕವಾಗಿಯೂ ಬೆಳೆಯಬೇಕು ಎಂಬ ದಿಸೆಯಲ್ಲಿ ಡಾ| ಸಾರಾ ನಮ್ಮ ಜತೆಗಿದ್ದ ಜ್ವಲಂತ ನಿದರ್ಶನ.
∙ಬಿ.ಎಂ. ರೋಹಿಣಿ, ಹಿರಿಯ ಸಾಹಿತಿ.