ಪುತ್ತೂರು: ಸರಕಾರದ ಸೌಲಭ್ಯದ ಸದವಕಾಶವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿಯುವ ವಧು- ವರರಿಗೆ ಮಾಹಿತಿ ಕೊಡುವ ನಿಟ್ಟಿನಲ್ಲಿ ರಥಯಾತ್ರೆ ನಡೆಯಲಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿ ಎ ಗ್ರೇಡ್ ದೇವಸ್ಥಾನಗಳಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುವ ಸಾಮೂಹಿಕ ವಿವಾಹದ ಪ್ರಚಾರಾರ್ಥ ನಡೆಯುವ ರಥಯಾತ್ರೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ರಥಕ್ಕೆ ಪುಷ್ಪಾರ್ಚನೆ ಮಾಡಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ಎ. 26ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ 25ಕ್ಕೂ ಅಧಿಕ ಜೋಡಿಗಳ ವಿವಾಹ ನಡೆಯಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಪ್ರಚಾರಾರ್ಥ ರಥ ಎಲ್ಲೆಲ್ಲಿ ಹೋಗು ವುದೋ ಅಲ್ಲಿರುವ ಸಾರ್ವಜನಿಕರು ಈ ವಿಚಾರ ತಿಳಿದುಕೊಂಡು ಕಾನೂನಿನ ನಿಯಮಗಳಿಗೆ ಒಳಪಟ್ಟು ವಿವಾಹವಾಗಿ ಸರಕಾರದಿಂದ ಸಿಗುವ 50 ಸಾವಿರ ರೂ. ಮೊತ್ತದ ಸವಲತ್ತನ್ನು ಪಡೆಯುವಂತೆ ವಿನಂತಿಸಿದರು.
ದೇವಾಲಯದ ಆಡಳಿತಾಧಿಕಾರಿ ಸಿ. ಲೋಕೇಶ್, ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ದೇಗುಲದ ಮಾಜಿ ಆಡಳಿತಾಧಿಕಾರಿ ವಿಷ್ಣುಪ್ರಸಾದ್, ವಿಶ್ವನಾಥ ಕುಲಾಲ್, ದೇಗುಲದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯೆ ನಯನಾ ರೈ, ಕಚೇರಿ ವ್ಯವಸ್ಥಾಪಕ ಹರೀಶ್, ಸಿಬಂದಿ ರವೀಂದ್ರ, ರೇಖಾ, ವಿಶ್ವನಾಥ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್., ನಿತ್ಯ ಕರಸೇವಕ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.
ಸೀಮೆಯಲ್ಲಿ ಸಂಚಾರ
ಉದ್ಘಾಟನೆಯ ಬಳಿಕ ರಥಯಾತ್ರೆ ಮಹಾಲಿಂಗೇಶ್ವರ ದೇವರ ಪುತ್ತೂರು ಸೀಮೆಯಲ್ಲಿ ಚಲಿಸಲಿದೆ ಎಂದು ದೇಗುಲದ ಕಾರ್ಯ ನಿರ್ವಹಣಾಧಿಕಾರಿ, ತಾಲೂಕು ಪಂಚಾಯತ್ ಇಒ ನವೀನ್ ಭಂಡಾರಿ ಹೇಳಿದರು.