ಹುಣಸೂರು: ಪ್ರಾದೇಶಿಕ ಅರಣ್ಯ ವಿಭಾಗದ ಕಚೇರಿ ಆವರಣದ ಸಸ್ಯ ಕಾಶಿಯಲ್ಲಿ 3.5 ಲಕ್ಷ ವಿವಿಧ ಜಾತಿಯ ಸಸಿಗಳನ್ನು ಇಲಾಖೆಯು ಬೆಳೆಸಿದೆ. ಆದರೆ, ಹೆಚ್ಚಿನ ದರ ನಿಗದಿಯಿಂದ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.
ನರ್ಸರಿಯಲ್ಲಿ 23 ವಿವಿಧ ಜಾತಿಯ 3.5 ಲಕ್ಷ ಸಸಿ ಬೆಳೆಸಲಾಗಿದೆ. ಈ ಹಿಂದೆ ಒಮ್ಮೆ ಮಳೆ ಬೀಳುತ್ತಿದ್ದಂತೆ ಸಸಿ ಖರೀದಿಸಲು ರೈತರು ಮುಂದಾಗುತ್ತಿದ್ದರು. ಆದರೆ, ಈ ವರ್ಷ ಮುಂಗಾರು ಪೂರ್ವ ಮಳೆ ಸುರಿದರೂ, ಅವೈಜ್ಞಾನಿಕ ಬೆಲೆ ನಿಗದಿ ಮಾಡಿರುವುದರಿಂದ ಸಸಿ ಖರೀದಿಗೆ ರೈತರು ಮುಂದಾಗುತ್ತಿಲ್ಲ. ಸಸಿ ಬೆಳೆಸಲು ಉತ್ಪಾದನಾ ವೆಚ್ಚದ ನೆಪದಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಶಿಫಾರಸ್ಸಿನಂತೆ 22ರ ನವೆಂಬರ್ 10ರಂದು ವಿವಿಧ ಬ್ಯಾಗ್‌ನ ಸಸಿ ಮಡಿಗೆ ಬೆಲೆ ಹೆಚ್ಚಳ ಮಾಡಿದ್ದು, ದರ ಕಡಿಮೆ ಮಾಡದಿದ್ದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಅರಣ್ಯ ವಿಸ್ತರಿಸುವ ಯೋಜನೆಗೆ ಈ ಬಾರಿ ದೊಡ್ಡ ಹೊಡೆತ ಬೀಳಲಿದೆ.
ಯಾವುದಕ್ಕೆ ಎಷ್ಟು ದರ: ಅದರಂತೆ 5×8 ಅಳತೆ ಪಾಲಿಥಿನ್ ಬ್ಯಾಗ್‌ನಲ್ಲಿ ಬೆಳೆಸಿರುವ ಸಸಿಗೆ ಈ ಮೊದಲಿದ್ದ ದರ ಒಂದು ರೂ., ಈಗ 5 ರೂ., 6×9 ಅಳತೆಯ ಬ್ಯಾಗ್‌ನ ಸಸಿಗೆ ಒಂದು ರೂ.ನಿಂದ 6 ರೂ., 8×12ರ ಅಳತೆಯ ಬ್ಯಾಗ್‌ನ ಸಸಿಗೆ 3 ರೂ.ನಿಂದ 23 ರೂ.ಗೆ ಬೆಲೆ ಹೆಚ್ಚಿಸಲಾಗಿದೆ. ಅರಣ್ಯ ಇಲಾಖೆಯು ರಸ್ತೆ ಬದಿ ನೆಡಲು ಉಪಯೋಗಿಸುವ ಸಸಿ ಬೇಕಾದಲ್ಲಿ 10×16 ಅಳತೆ ಬ್ಯಾಗ್‌ನ ಸಸಿಗೆ 72 ರೂ. ಹಾಗೂ 14×20 ಅಳತೆಯ ಬ್ಯಾಗ್‌ನ ಸಸಿಗೆ 111 ರೂ. ನಿಗದಿಪಡಿಸಲಾಗಿದೆ. ಹೀಗೆ ಅವೈಜ್ಞಾನಿಕವಾಗಿ ಬೇಕಾಬಿಟ್ಟಿ ಸಸಿ ಬೆಲೆ ಹೆಚ್ಚಿಸಿರುವುದರಿಂದ ಯಾವ ರೈತರೂ ದುಬಾರಿ ಬೆಲೆ ತೆತ್ತು ಸಸಿ ಖರೀದಿಸಲು ಮುಂದಾಗುತ್ತಿಲ್ಲ.
ಕೃಷಿ ಅರಣ್ಯ ಪ್ರೋತ್ಸಾಹಕ್ಕೆ ದೊಡ್ಡ ಹೊಡೆತ: ರೈತರಲ್ಲಿ ಪರಿಸರ ಕಾಳಜಿ ಬೆಳೆಸುವ ಸರ್ಕಾರದ ಮಹತ್ವಾಕಾಂಕ್ಷೆಯ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಬಹುತೇಕ ಸಸಿ ಬೆಳೆಸಿದ್ದು, ರೈತರು ದುಬಾರಿ ಹಣ ತೆತ್ತು ಸಸಿ ಖರೀದಿಸಿ ನೆಟ್ಟು ಬೆಳೆಸಿ ಪ್ರೋತ್ಸಾಹ ಧನ ಪಡೆಯುವುದು ದುಸ್ತರವಾಗಿದೆ. ಹೀಗಾಗಿ, ಸರ್ಕಾರದ ಉದ್ದೇಶಿತ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ಹಿನ್ನಡೆಯಾಗಲಿದೆ. ಈ ಯೋಜನೆಯಡಿ ಮೊದಲ ವರ್ಷ 35 ರೂ., ಎರಡನೇ ವರ್ಷ 40 ರೂ., ಮೂರನೇ ವರ್ಷ 50 ರೂ. ಸೇರಿ ಒಟ್ಟು 125 ರೂ. ಪ್ರೋತ್ಸಾಹ ಧನ ನೀಡುತ್ತಿರುವುದನ್ನು ಸ್ಮರಿಸಬಹುದು.
Related Articles
ಶ್ರೀಗಂಧ, ರಕ್ತ ಚಂದನಕ್ಕೆ ಬೇಡಿಕೆ: ಈ ಭಾಗದಲ್ಲಿ ಶ್ರೀಗಂಧ, ರಕ್ತ ಚಂದನ, ಮಹಾಘನಿ, ತೇಗ, ಹೆಬ್ಬೇವು ಸೇರಿ ವಿವಿಧ ಹಣ್ಣಿನ ಜಾತಿಯ ಮರಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಂತೆ ಹುಣಸೂರು ಸಸ್ಯ ಕ್ಷೇತ್ರದಲ್ಲಿ ಈ ಬಾರಿಯ ಬಿಸಿಲಿನ ಬೇಗೆಯ ನಡುವೆಯೂ ಜತನದಿಂದ ಬೆಳೆಸಲಾಗಿದೆ. ಆದರೆ, ಖರೀದಿಸುವ ರೈತರು ಹೆಚ್ಚಿನ ಬೆಲೆಯಿಂದ ವಿಮುಖರಾಗಿದ್ದಾರೆ.
3.5 ಲಕ್ಷ ಸಸಿಗಳು ಮಾರಾಟಕ್ಕೆ ಲಭ್ಯ: ಹುಣಸೂರಿನ ಸಸಿ ಮಡಿಯಲ್ಲಿ ಶ್ರೀಗಂಧ ಸೇರಿ ತೇಗ, ಹೊನ್ನೆ, ಬೀಟೆ, ಹೆಬ್ಬೇವು, ಹಣ್ಣು ಸೇರಿ 3.5 ಲಕ್ಷ ಸಸಿಗಳು ಬೆಳೆಸಲಾಗಿದ್ದು, ಎಲ್ಲವೂ ಮಾರಾಟಕ್ಕೆ ಇಡಲಾಗಿದೆ. ಆದರೆ, ರೈತರು ಈವರೆಗೂ ಒಂದು ಸಸಿ ಖರೀದಿ ಮಾಡಿಲ್ಲ ಅರಣ್ಯ ಇಲಾಖೆ ಬೆಳೆಸಿರುವ ಸಸಿಗಳಿಗೆ ಹಿಂದಿನ ಸರ್ಕಾರ ನಿಗದಿ ಮಾಡಿರುವ ದರ ಹಿಂಪಡೆಯಲು ಅಧಿಕಾರಿಗಳ ಮೂಲಕ ಮನವಿ ಮಾಡಲಾಗಿದೆ.
ಮಳೆ ಆರಂಭವಾಗಿ ತಿಂಗಳು ಕಳೆಯುತ್ತಿದೆ. ಸಸಿ ನೆಡಲು ಸಕಾಲ. ತಕ್ಷಣವೇ ಹೆಚ್ಚಿಸಿರುವ ದರ ಹಿಂಪಡೆಯದಿದ್ದಲ್ಲಿ ಹೋರಾಟ ಅನಿವಾರ್ಯ. -ಹೊಸೂರು ಕುಮಾರ್, ಜಿಲ್ಲಾಧ್ಯಕ್ಷ, ರೈತ ಸಂಘ.
ಹುಣಸೂರು ಸಸಿ ಮಡಿಯಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ, ವಿವಿಧ ಯೋಜನೆಯಡಿ 3.5 ಲಕ್ಷ ಸಸಿ ಬೆಳೆಸಲಾಗಿದೆ. ಆದರೆ, ಬೆಲೆ ಹೆಚ್ಚಳದ ಕಾರಣವೊಡ್ಡಿ ರೈತರು ಖರೀದಿಸಲು ಮುಂದೆ ಬರುತ್ತಿಲ್ಲ. ರೈತ ಮುಖಂಡರೂ ಬೆಲೆ ಹೆಚ್ಚಳ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. – ಪಿ.ಎ.ಸೀಮಾ, ಡಿಸಿಎಫ್, ಹುಣಸೂರು.
ಪ್ರತಿವರ್ಷ ಸಾವಿರಾರು ರೈತರು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಏಪ್ರಿಲ್, ಮೇನಲ್ಲಿ ನೋಂದಾಯಿಸಿಕೊಳ್ಳು ತ್ತಿದ್ದರು. ಆದರೆ, ಈ ಬಾರಿ ದರ ಹೆಚ್ಚಿಸಿದ್ದರಿಂದಾಗಿ ಯಾರೂ ಮುಂದೆ ಬರುತ್ತಿಲ್ಲ. -ಬಸವರಾಜು, ಸ್ಫೂರ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ. ಹುಣಸೂರು.
– ಸಂಪತ್‌ಕುಮಾರ್