Advertisement
ಇದೊಂದೇ ಪ್ರಶ್ನೆಯ ಮೇಲೇನೂ ಚಿತ್ರ ನಿಂತಿಲ್ಲ. ಚಿತ್ರವನ್ನು ನೋಡುವುದಕ್ಕೆ, ಮೆಚ್ಚಿಕೊಳ್ಳುವುದಕ್ಕೆ ಇನ್ನೂ ಹಲವಾರು ಕಾರಣಗಳಿವೆ. “ಬಾಹುಬಲಿ 2′ ಚಿತ್ರವನ್ನು “ಬಾಹುಬಲಿ’ಯ ಮುಂದುವರೆದ ಭಾಗ ಎನ್ನುವುದಕ್ಕಿಂತ ಹೆಚ್ಚಾಗಿ, ಆ ಚಿತ್ರದ ಫ್ಲಾಶ್‌ಬ್ಯಾಕ್ ಎಂದರೆ ತಪ್ಪಿಲ್ಲ. ಏಕೆಂದರೆ, ಈ ಚಿತ್ರದಲ್ಲಿ ಮುಕ್ಕಾಲು ಭಾಗದಷ್ಟು ಫ್ಲಾಶ್‌ಬ್ಯಾಕ್ ತುಂಬಿದೆ. ಆ ಕಥೆಯೆಲ್ಲಾ ಮುಗಿದ ನಂತರ ಈ ಚಿತ್ರ ಪ್ರಾರಂಭವಾಗುತ್ತದೆ ಮತ್ತು ಬೇಗ ಮುಗಿಯುತ್ತದೆ.
Related Articles
Advertisement
ಒಟ್ಟಾರೆ ಪ್ರೇಕ್ಷಕರು ಕದಲದಂತೆ ಚಿತ್ರದುದ್ದಕ್ಕೂ ನೋಡಿಕೊಳ್ಳುತ್ತಾರೆ ರಾಜಮೌಳಿ. ಚಿತ್ರ ನೋಡಿದ ಕೆಲವು ಪ್ರೇಕ್ಷಕರು ಮೊದಲಾರ್ಧ ಚೆನ್ನಾಗಿತ್ತು ಎಂದರೆ, ಇನ್ನೂ ಕೆಲವರು ದ್ವಿತೀಯಾರ್ಧ ಚೆನ್ನಾಗಿತ್ತು ಎಂದು ತೀರ್ಪು ನೀಡುತ್ತಾರೆ. ಇನ್ನೂ ಕೆಲವರು ಮೊದಲ ಭಾಗಕ್ಕೆ ಹೋಲಿಸಿದರೆ, ಈ ಭಾಗ ಕೊಂಚ ಡಲ್ಲು ಎಂಬ ಅಭಿಪ್ರಾಯವನ್ನೂ ನೀಡುತ್ತಾರೆ. ಹಾಗೆ ನೋಡಿದರೆ, “ಬಾಹುಬಲಿ’ ಒಂದೇ ಏಟಿಗೆ ತೀರ್ಪು ಕೊಟ್ಟು ಮುಗಿಸುವಂತಹ ಸಿನಿಮಾ ಅಲ್ಲ.
ಇಲ್ಲಿ ತೀರ್ಪಿಗಿಂತಲೂ, ಚಿತ್ರವನ್ನು ಎಂಜಾಯ್ ಮಾಡಿಕೊಂಡು ನೋಡುವುದು ಬಹಳ ಮುಖ್ಯ. ಚಿತ್ರದಲ್ಲಿ ಹಲವು ಅದ್ಭುತ ಎನಿಸುವಂತಹ ದೃಶ್ಯಗಳಿವೆ, ಮೈನವಿರೇಳಿಸುವ ಸಾಹಸಗಳಿವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇದುವರೆಗೂ ಭಾರತೀಯ ಚಿತ್ರಗಳಲ್ಲಿ ನೋಡದಂತಹ ಕಂಪ್ಯೂಟರ್ ಗ್ರಾಫಿಕ್ಸ್ ಇವೆ. ಅವೆಲ್ಲವನ್ನೂ, ಬಾಹುಬಲಿನ ಕಟ್ಟಪ್ಪ ಯಾಕೆ ಕೊಂದ ಎಂಬ ಪ್ರಶ್ನೆ ಮತ್ತು ಅದರ ಉತ್ತರದಿಂದ ಅಳಿಯುವುದಕ್ಕೆ ಸಾಧ್ಯವೇ ಇಲ್ಲ.
ಉತ್ತರ ಸಿಕ್ಕಿತು ಎಂಬ ಮಾತ್ರಕ್ಕೆ ಇಷ್ಟೇನಾ ಎನ್ನುವಂತೆಯೂ ಇಲ್ಲ. ಇಡೀ ಚಿತ್ರ ಒಂದು ಅನುಭವ. ಹಾಗಾಗಿ ಚಿತ್ರ ಅದ್ಭುತವಾಗಿದೆಯಾ ಅಥವಾ ಚೆನ್ನಾಗಿದೆಯಾ ಅಥವಾ ಕೆಟ್ಟದಾಗಿದೆಯಾ ಎಂಬ ವಿಷಯಗಳನ್ನು ಪಕ್ಕಕ್ಕಿಟ್ಟು, ಅನುಭವಕ್ಕಾಗಿಯೇ ನೋಡಬೇಕು. ಆ ಮಟ್ಟದ ಅನುಭವವನ್ನು ರಾಜಮೌಳಿ ಎರಡೂ ಚಿತ್ರಗಳ ಮೂಲಕ ಕೊಟ್ಟಿದ್ದಾರೆ. ಬಹುಶಃ ಹಾಲಿವುಡ್‌ನ “ದಿ ಟೆನ್ ಕಮಾಂಡ್‌ಮೆಂಟ್ಸ್’ ಮತ್ತು “ಬೆನ್‌ಹರ್’ ತರಹದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಬರುವುದಕ್ಕೆ ಸಾಧ್ಯವಿಲ್ಲ ಎಂಬ ಕೊರಗಿಗೆ ಉತ್ತರವಾಗಿ ಚಿತ್ರ ಮೂಡಿಬಂದಿದೆ ಎಂದರೆ ತಪ್ಪಿಲ್ಲ.
“ಬಾಹುಬಲಿ 2’ನಲ್ಲಿ ಏನು ಚೆನ್ನಾಗಿದೆ ಎಂದು ಹೇಳುವುದು ಕಷ್ಟವೇ. ಅಭಿನಯದ ಜೊತೆಗೆ ಪೀಟರ್ ಹೇನ್ ಸಂಯೋಜಿಸಿರುವ ಸಾಹಸ ದೃಶ್ಯಗಳು, ಕೀರವಾಣಿ ಸಂಗೀತ, ಸೆಂಧಿಲ್ ಕುಮಾರ್ ಛಾಯಾಗ್ರಹಣ, ಮಕುಟ ಗ್ರಾಫಿಕ್ಸ್ ಮಾಡಿಕೊಟ್ಟಿರುವ ಗ್ರಾಫಿಕ್ಸ್ ಎಲ್ಲವೂ ಚೆನ್ನಾಗಿಯೇ ಇದೆ. ಅದರಲ್ಲೂ ಅಭಿನಯದ ವಿಷಯವಾಗಿ ಹೇಳಬೇಕಾದರೆ, ಮೊದಲ ಭಾಗ ಹೆಚ್ಚಾಗಿ ಪ್ರಭಾಸ್, ತಮನ್ನಾ ಮತ್ತು ಸತ್ಯರಾಜ್ ಅವರ ಮೇಲೆ ನಿಂತಿತ್ತು.
ಆದರೆ, ಇಲ್ಲಿ ರಮ್ಯಾ ಕೃಷ್ಣ, ಅನೂಷ್ಕಾ ಶೆಟ್ಟಿ, ನಾಜರ್, ರಾಣ ಎಲ್ಲರಿಗೂ ಗಟ್ಟಿ ಪಾತ್ರಗಳೇ ಇವೆ. ಎಲ್ಲರೂ ತಮ¤ಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪ್ರಭಾಸ್ ಮತ್ತು ಸತ್ಯರಾಜ್ ಅವರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಚಿತ್ರದ ಆರಂಭದಿಂದ ಕೊನೆಯವರೆಗೂ ಇಬ್ಬರೂ ಮತ್ತು ಪ್ರಭಾಸ್ ಎರಡೂ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಒಟ್ಟಾರೆ “ಬಾಹುಬಲಿ’ ಚಿತ್ರಗಳನ್ನು ಯಾಕೆ ನೋಡಬೇಕು, ಚಿತ್ರ ಎಷ್ಟು ಚೆನ್ನಾಗಿದೆ ಎನ್ನುವುದಕ್ಕಿಂತ ರಾಜಮೌಳಿ ಎಂಬ ದೊಡ್ಡ ಕನಸುಗಾರನ ಬೃಹತ್ ಕನಸೊಂದನ್ನು ಕಣ್ತುಂಬಿಕೊಳ್ಳುವುದಕ್ಕಾದರೂ ನೋಡಲಡ್ಡಿಯಿಲ್ಲ.
ಚಿತ್ರ: ಬಾಹುಬಲಿನಿರ್ಮಾಣ: ಆರ್ಕಮೀಡಿಯಾ
ನಿರ್ದೇಶನ: ಎಸ್.ಎಸ್. ರಾಜಮೌಳಿ
ತಾರಾಗಣ: ಪ್ರಭಾಸ್, ರಾಣಾ ದಗ್ಗುಬಟ್ಟಿ, ಅನೂಷ್ಕಾ ಶೆಟ್ಟಿ, ರಮ್ಯಾ ಕೃಷ್ಣ, ಸತ್ಯರಾಜ್ ಮುಂತಾದವರು * ಚೇತನ್ ನಾಡಿಗೇರ್