ಪುತ್ತೂರು: ಬಿಗ್ ಬಾಸ್ ಸೀಸನ್-9 ಸ್ಪರ್ಧಿಯಾಗಿದ್ದ ಸಾನ್ಯ ಅಯ್ಯರ್ ಅವರಿಗೆ ತುಂಬಿದ ಸಭೆಯಲ್ಲಿ ಯುವಕನೊಬ್ಬ ಕಪಾಳಮೋಕ್ಷ ಮಾಡಿದ ಘಟನೆ ನಡೆದಿರುವ ವಿಡಿಯೋ ವೈರಲ್ ಆಗಿದೆ.
ಜ.28 ರಂದು ಪುತ್ತೂರಿನಲ್ಲಿ ನಡೆದ ಕೋಟಿ-ಚೆನ್ನಯ್ಯ ಜೋಡುಕೆರೆ ಕಂಬಳಕ್ಕೆ ಅತಿಥಿಯಾಗಿ ಆಗಮಿಸಿದ್ದು ಅಂದು ಮಧ್ಯರಾತ್ರಿ ತಮ್ಮ ಸ್ನೇಹಿತೆಯರೊಂದಿಗೆ ಕಂಬಳ ವೀಕ್ಷಣೆಗೆ ಅವರು ಬಂದಿದ್ದರು.
ಸಾನ್ಯ ಅಯ್ಯರ್ ಅವರನ್ನು ನೋಡಿದ ಯುವಕನೊಬ್ಬ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಆತ ಸಾನ್ಯ ಹಾಗೂ ಅವರ ಸ್ನೇಹಿತೆಯ ಕೈ ಹಿಡಿದು ಎಳೆದಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಕೋಪಗೊಂಡ ಸಾನ್ಯ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಪೆಟ್ಟು ತಿಂದ ಯುವಕ ಕೂಡ ಪ್ರತಿಯಾಗಿ ಸಾನ್ಯ ಅಯ್ಯರ್ ಗೆ ಕಪಾಳ ಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.
ಇದರಿಂದ ಬೇಸರಗೊಂಡ ಸಾನ್ಯ ಅಯ್ಯರ್ ಹಾಗೂ ಅವರ ಸ್ನೇಹಿತೆಯರು ಕಂಬಳ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲಕಾಲ ವೇದಿಕೆಯಲ್ಲಿ ಈ ಘಟನೆ ಗದ್ದಲಕ್ಕೆ ಕಾರಣವಾಯಿತು. ಬಳಿಕ ಮಧ್ಯಪ್ರವೇಶಿಸಿದ ಸ್ಥಳೀಯರು ಸಾನ್ಯ ಹಾಗೂ ಅವರ ಸ್ನೇಹಿತರನ್ನು ಸಮಾಧಾನಗೊಳಿಸಿದರು.ಇನ್ನು ಯುವಕನಿಗೆ ಸ್ಥಳೀಯ ಆಟೋ ಚಾಲಕರು ಧರ್ಮದೇಟು ನೀಡಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.