Advertisement

ಸ್ಯಾಂಟ್ರೋ ರವಿ ಪತ್ನಿ ವಿಚಾರಣೆಗೆ ಹಾಜರು

10:23 PM Jan 21, 2023 | Team Udayavani |

ಬೆಂಗಳೂರು: ಸರಕಾರಿ ಅಧಿಕಾರಿಗಳ ವರ್ಗಾವಣೆ, ವೇಶ್ಯಾವಾಟಿಕೆ ದಂಧೆ ಹಾಗೂ ಪತ್ನಿಗೆ ಗರ್ಭಪಾತ ಮಾಡಿಸಿದ್ದು ಮುಂತಾದ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿರುವ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಪತ್ನಿ ರಶ್ಮಿ ಶನಿವಾರ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು.

Advertisement

ಮತ್ತೊಂದೆಡೆ ರವಿಯನ್ನು ಬೌರಿಂಗ್‌ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳೆದೊಯ್ಯಲಾಗಿತ್ತು. ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಬೆಳಗ್ಗೆ 11 ಗಂಟೆಗೆ ಪರಿಚಯಸ್ಥರ ಜತೆ ಆಗಮಿಸಿದ ರಶ್ಮಿಯನ್ನು ಡಿವೈಎಸ್ಪಿ ಅಂಜುಮಾಲಾ ನಾಯಕ್‌ ವಿಚಾರಣೆಗೆ ನಡೆಸಿದರು. ಅಪರಾಹ್ನ 12.30ರ ಸುಮಾರಿಗೆ ಶೇಷಾದ್ರಿಪುರಂನಲ್ಲಿರುವ ರವಿ ಜತೆ ವಾಸವಾಗಿದ್ದ ಫ್ಲ್ಯಾಟ್‌ನಲ್ಲಿ ಸ್ಥಳ ಮಹಜರು ಮಾಡಲಾಯಿತು. ಅನಂತರ ಗರ್ಭಪಾತ ಮಾಡಿಸಿದ ಆಸ್ಪತ್ರೆಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಲಾಯಿತು. ಬಳಿಕ ಸಿಐಡಿ ಕಚೇರಿಯಲ್ಲಿ ಸಂಜೆ 6 ಗಂಟೆವರೆಗೂ ವಿಚಾರಣೆ ನಡೆಸಲಾಗಿದೆ.

ರವಿ ತನ್ನ ಮೇಲೆ ಎಸಗಿರುವ ದೌರ್ಜನ್ಯಗಳ ಬಗ್ಗೆ ರಶ್ಮಿ ವಿವರವಾದ ಮಾಹಿತಿ ನೀಡಿದ್ದಾರೆಂದು ಹೇಳಲಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ವಾಸವಿದ್ದ ಸಂದರ್ಭದಲ್ಲಿ ಯಾವ ರೀತಿ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗಿದ್ದಾನೆ. ಯಾವ ಕಾರಣಕ್ಕೆ ಗರ್ಭಪಾತ ಮಾಡಿಸಿದ್ದಾನೆ. ಬೇರೆ ಯುವತಿಯರ ಸಂಪರ್ಕ ಇರುವುದು ನಿಜವೇ? ವೇಶ್ಯಾವಾಟಿಕೆ ಅಡ್ಡೆ ನಡೆಸಲು ಯಾವ ರಾಜ್ಯಗಳಿಂದ ಯುವತಿಯರನ್ನು ಕರೆಸುತ್ತಿದ್ದ ಎಂಬೆಲ್ಲ ಮಾಹಿತಿ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪತಿ ರವಿ ವಿರುದ್ಧ ಮೈಸೂರಿನ ವಿಜಯನಗರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ, ಗರ್ಭಪಾತ, ವೇಶ್ಯಾವಾಟಿಕೆ ಆರೋಪದ ಮೇಲೆ ರಶ್ಮಿ ದೂರು ನೀಡಿದ್ದರು.

ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ
ಸಿಐಡಿ ವಶದಲ್ಲಿರುವ ರವಿಗೆ ಶನಿವಾರ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಮಧುಮೇಹ ಹಾಗೂ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರವಿಗೆ ಆಗಾಗ್ಗೆ ವೈದ್ಯಕೀಯ ತಪಾಸಣೆ ಅಗತ್ಯವಿದೆ ಎಂದು ಸಿಐಡಿ ಪೊಲೀಸರು ಮಾಹಿತಿ ನೀಡಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next