ಮೈಸೂರು: ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಜ.25 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪೊಲೀಸ್ ಬಿಗಿ ಭದ್ರತೆಯಲ್ಲಿ ಸೋಮವಾರ ಬೆಳಗ್ಗೆ ಮೈಸೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದರು. ಈ ವೇಳೆ ಆರೋಪಿ ಪರ ವಕೀಲರು, ಹಲವು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದ್ದು, ಜೀವ ಭಯವಿದೆ. ಅಲ್ಲದೆ ಆರೋಪಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅನುಮತಿ ನೀಡಿದರೆ ಜಾಮೀನಿಗೆ ಅರ್ಜಿ ಸಲ್ಲಿಸಲಾಗುವುದು ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು, ಆರೋಪಿ ಹಲವಾರು ಕೃತ್ಯಗಳಲ್ಲಿ ಭಾಗಿಯಾದ ಆರೋಪವಿದೆ. ಎಲ್ಲವನ್ನೂ ಒಗ್ಗೂಡಿಸಿ ಸಿಐಡಿ ತನಿಖೆಗೆ ಒಳಪಡಿಸಲು ಸರ್ಕಾರ ಮುಂದಾಗಿದೆ.
ಬಂಧನದ ಸಂದರ್ಭದಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಪೊಲೀಸ್ ತನಿಖೆಗೆ ಅಗತ್ಯವಾಗಿರುವುದರಿಂದ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.
Related Articles
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿ, ಜಾಮೀನು ಮತ್ತು ಇತರ ಆಕ್ಷೇಪಣೆಗಳಿಗೆ ಜ.18ರಂದು ಮನವಿ ಸಲ್ಲಿಸಬಹುದು, ಸಿಐಡಿಗೆ ಪ್ರಕರಣ ಒಪ್ಪಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದರು.
ಸ್ಯಾಂಟ್ರೋಗೆ ಚೆಸ್ಟ್ ನಂಬರ್: ಕಳೆದ ಶನಿವಾರದಿಂದ ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸ್ಯಾಂಟ್ರೋ ರವಿಗೆ 18894 ಚೆಸ್ಟ್ ನಂಬರ್ ನೀಡಲಾಗಿದೆ. ಇದರೊಂದಿಗೆ ಸಹಚರ ಸತೀಶ್‌ಗೆ 18895, ರಾಮ್‌ಜೀಗೆ 18896 ಸಂಖ್ಯೆಯನ್ನು ಜೈಲಾಧಿಕಾರಿಗಳು ನೀಡಿದ್ದಾರೆ.
ಪ್ರಕರಣ ಸಿಐಡಿಗೆ ವರ್ಗಾವಣೆ: ಆರೋಪಿ ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ದೂರು ಹಾಗೂ ಆರೋ ಪ ಗಳ ಬಗ್ಗೆ ತನಿಖೆ ನಡೆಸಲು ಸಿಐಡಿ ಪೊಲೀಸರಿಗೆ ವಹಿಸಲಾಗಿದೆ ಎಂದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದರೆ ಅದರ ವಿರುದ್ಧ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಆರೋಪಿ ಪರ ವಕೀಲ ಹರೀಶ್ ಪ್ರಭು ತಿಳಿಸಿದ್ದಾರೆ.
ಮೈಸೂರು ಕಾರಾಗೃಹ ಜೈಲರ್ ವರ್ಗಾವಣೆ
ಮೈಸೂರು: ಮೈಸೂರು ಕೇಂದ್ರ ಕಾರಾಗೃಹದ ಅಧೀಕ್ಷಕ ಮಹೇಶ್‌ಕುಮಾರ್ ಎಸ್. ಜಿಗಣಿ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಸ್ಯಾಂಟ್ರೋ ರವಿಯನ್ನು ಶನಿವಾರ ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಈ ಮೊದಲು ಶಿವಮೊಗ್ಗದ ಕಾರಾಗೃಹದಲ್ಲಿ ಅಧೀಕ್ಷಕರಾಗಿದ್ದ ಮಹೇಶ್‌ಕುಮಾರ್ ಅವರನ್ನು ಬೆಂಗಳೂರಿನ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಮೈಸೂರಿನ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಆದೇಶವನ್ನು ಸ್ಯಾಂಟ್ರೋ ರವಿ ತನ್ನ ಸ್ಟೇಟಸ್‌ನಲ್ಲಿ ಹಾಕಿಕೊಂಡು ಗೆಲುವಿನ ಚಿಹ್ನೆಗಳನ್ನು ಹಾಕಿದ್ದ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.