Advertisement

ಸ್ಯಾಂಟ್ರೋ ರವಿ ಕೇಸ್‌: ಕಾಟನ್‌ಪೇಟೆ ಠಾಣೆ ಈ ಹಿಂದಿನ ಪೊಲೀಸ್ ಇನ್ಸ್ ಪೆಕ್ಟರ್ ತಲೆದಂಡ?

12:09 PM Jan 10, 2023 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಯಾಂಟ್ರೋ ರವಿ ಅಲಿಯಾಸ್‌ ಮಂಜುನಾಥ್‌ ಗೆ ಸಹಕಾರ ನೀಡಿದ್ದ ಕಾಟನ್‌ಪೇಟೆ ಪೊಲೀಸ್‌ ಠಾಣೆಯ ಇನ್‌ ಸ್ಪೆಕ್ಟರ್‌ ಪ್ರವೀಣ್‌ ವಿರುದ್ಧ ಇಲಾಖಾ ತನಿಖೆ ನಡೆಸಿದ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ, ವರದಿಯನ್ನು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಪತಿ ಸ್ಯಾಂಟ್ರೋ ರವಿ ಸಹಕಾರದಿಂದ ತನ್ನ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ರವಿ ಪತ್ನಿ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಕಾಟನ್‌ಪೇಟೆ ಠಾಣೆಯ ಈ ಹಿಂದಿನ ಠಾಣಾಧಿಕಾರಿ ಪ್ರವೀಣ್‌ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಡಿಸಿಪಿ ಲಕ್ಷ್ಮಣ್‌ ನಿಂಬರಗಿಗೆ ಸೂಚಿಸಲಾಗಿತ್ತು.

ಈ ಸಂಬಂಧ ಖುದ್ದು ತನಿಖೆ ನಡೆಸಿರುವ ಪಶ್ಚಿಮ ವಿಭಾಗದ ಡಿಸಿಪಿ, ಕೃತ್ಯ ನಡೆದ ಸ್ಥಳದಲ್ಲಿ ರಶ್ಮಿ ಹಾಗೂ ನಯನ ಇರಲಿಲ್ಲ. ಆದರೆ, ಇರುವಂತೆ ಸಾಬೀತುಪಡಿಸಲು ಸ್ಯಾಂಟ್ರೋ ರವಿಯೇ ತನ್ನ ಕೆಲಸಗಾರ ಶೇಕ್‌ ಜತೆಯಲ್ಲಿ ರಶ್ಮಿ ಹಾಗೂ ನಯನಾಳ ಮೊಬೈಲ್‌ ಕೊಟ್ಟು ಕಳುಹಿಸಿದ್ದ. ಸೂಕ್ತ ತನಿಖೆ ನಡೆಸದೇ ಕಾಟನ್‌ ಪೇಟೆ ಠಾಣಾಧಿಕಾರಿ ಪ್ರವೀಣ್‌ ಸುಳ್ಳು ಎಫ್ಐಆರ್‌ ದಾಖಲಿಸಿದ್ದಾರೆ.

ಈ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ ಎಂದು ವರದಿ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇನ್‌ಸ್ಪೆಕ್ಟರ್‌ ಪ್ರವೀಣ್‌ ತಲೆದಂಡ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

2022ರ ನವೆಂಬರ್‌ 24ರಂದು ಪ್ರಕಾಶ್‌ ಎಂಬುವರು ನೀಡಿದ್ದ ದೂರಿನನ್ವಯ ಕಾಟನ್‌ ಪೇಟೆ ಠಾಣೆಯಲ್ಲಿ ರಶ್ಮಿ, ನಯನ ಹಾಗೂ ಶೇಕ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. “ನನ್ನಿಂದ ಮೂರು ತಿಂಗಳ ಅವಧಿಗೆ ಐದು ಲಕ್ಷ ರೂಪಾಯಿ ಪಡೆದಿದ್ದ ರಶ್ಮಿ, ನ. 23 ರಂದು ಸಂಜೆ 6 ಗಂಟೆಗೆ ಹಿಂತಿರುಗಿಸುವುದಾಗಿ ಕಾಟನ್‌ ಪೇಟೆಯ ಖೋಡೆ ಸರ್ಕಲ್‌ ಬಳಿ ಕರೆಸಿಕೊಂಡಿದ್ದರು.

Advertisement

ಈ ವೇಳೆ ರಶ್ಮಿ ಜತೆಗಿದ್ದ ಶೇಕ್‌ ತನ್ನನ್ನು ಹಿಡಿದುಕೊಂಡಿದ್ದ. ಆಗ ರಶ್ಮಿ ತನ್ನ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದಳು. ಆಕೆ ಜತೆಗಿದ್ದ ನಯನಾ ತನ್ನ ಕತ್ತಿನಲ್ಲಿದ್ದ ಚಿನ್ನದ ಸರ, ಪ್ಯಾಂಟ್‌ನಲ್ಲಿದ್ದ 9 ಸಾವಿರ ರೂ. ನಗದು ಕಸಿದುಕೊಂಡು ಪರಾರಿಯಾಗಿದ್ದ’ ಎಂದು ಪ್ರಕಾಶ್‌ ದೂರು ನೀಡಿದ್ದರು. ಈ ಸಂಬಂಧ ಪಿಐ ಪ್ರವೀಣ್‌ ಸುಳ್ಳು ಎಫ್ಐಆರ್‌ ದಾಖಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಫ್ಲ್ಯಾಟ್‌ಗಳ ಮೇಲೆ ದಾಳಿ: ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ಪೊಲೀಸರು ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಸ್ಯಾಂಟ್ರೋ ರವಿ ವಾಸ ಮತ್ತು ವ್ಯವಹಾರ ನಡೆಸಿದ್ದ ಮೂರು ಫ್ಲ್ಯಾಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಶೇಷಾದ್ರಿಪುರಂ, ಟ್ರಿನಿಟಿ ಮತ್ತು ಬಸವನಗುಡಿಯಲ್ಲಿ ರುವ ಮೂರು ಫ್ಲ್ಯಾಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ, ಮೂರು ಫ್ಲ್ಯಾಟ್‌ಗಳನ್ನು ಆರೋಪಿ 2-3 ತಿಂಗಳ ಹಿಂದೆಯೇ ಖಾಲಿ ಮಾಡಿಕೊಂಡು ಹೋಗಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next