Advertisement

ಸಂತೋಷ್‌ ಕೊಲೆ ತನಿಖೆ ಸಿಸಿಬಿಗೆ

11:18 AM Feb 02, 2018 | |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲು ಮೂರುದಿನ ಬಾಕಿ ಇರುವಾಗಲೇ ನಡೆದಿರುವ ಬಿಜೆಪಿ ಕಾರ್ಯಕರ್ತ ಸಂತೋಷ್‌ ಕೊಲೆ ಪ್ರಕರಣದ ತನಿಖೆ ಸಿಸಿಬಿ ಪೊಲೀಸರಿಗೆ  ಹಸ್ತಾಂತರಗೊಂಡಿದೆ.

Advertisement

ಸಂತೋಷ್‌ ಕೊಲೆ ನಡೆದ ಕೆಲವೇ ನಿಮಿಷಗಳಲ್ಲಿ ಜೆ.ಸಿ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಖಾದರ್‌ ಷರೀಫ್‌ ಪುತ್ರ ವಾಸೀಂ ಹಾಗೂ ಫಿಲಿಪ್ಸ್‌ರನ್ನು ಬಂಧಿಸಿದ್ದ ಪೊಲೀಸರು, ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳಾದ ಉಮರ್‌ ಹಾಗೂ  ಇರ್ಫಾನ್‌ರನ್ನು ಗುರುವಾರ ಬಂಧಿಸಿದ್ದಾರೆ.

ಬಂಧಿತರಿಗೆ ಗಾಂಜಾ ಸೇದಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಸಂತೋಷ್‌ ಕೊಲೆ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದರೂ, ಮೋದಿ ರ್ಯಾಲಿ ಹಿನ್ನೆಲೆಯಲ್ಲಿ ಬ್ಯಾನರ್‌ ಕಟ್ಟುವ ವಿಚಾರಕ್ಕೆ ಉಂಟಾದ ಜಗಳದಲ್ಲಿ ಸಂತೋಷ್‌ ಕೊಲೆಗೈಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. 

ಮೃತ ಸಂತೋಷ್‌ ನಿವಾಸಕ್ಕೆ ಬಿಜೆಪಿ ಹಿರಿಯ ಮುಖಂಡರಾದ ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು,ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ರವಿಕುಮಾರ್‌, ಶಾಸಕ ನಾರಾಯಣಸ್ವಾಮಿ  ಸೇರಿದಂತೆ ಹಲವು ಬಿಜೆಪಿ ಮುಖಂಡರು ಭೇಟಿ ನೀಡಿ, ಸಂತೋಷ್‌ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ರವಿಕುಮಾರ್‌, ಸಂತೋಷ್‌ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ರಾಜ್ಯಸರ್ಕಾರಕ್ಕೆ ಒತ್ತಾಯಿಸಿದರು. ಅಲ್ಲದೆ, ಸಂತೋಷ್‌ ಹತ್ಯೆ ಖಂಡಿಸಿ ಶುಕ್ರವಾರ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

Advertisement

ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿದ್ದರೂ ಅವುಗಳನ್ನು ತಡೆಯುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫ‌ಲವಾಗಿದೆ. ರಾಜ್ಯಸರ್ಕಾರದ ಪಾಪದ ಕೊಡ ತುಂಬಿದ್ದು, ಮುಂದಿನ ದಿನಗಳಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದು ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು. 

ಸಂತೋಷ್‌ ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಗುರುವಾರ ಚಿನ್ನಪ್ಪ ಗಾರ್ಡ್‌ನಲ್ಲಿರುವ ಸಂತೋಷ್‌ ನಿವಾಸ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಗುರುವಾರ ಸಂಜೆ ಸುಮಾರು ನಾಲ್ಕೂವರೆ ಗಂಟೆಯವರೆಗೂ ಸಂತೋಷ್‌ ಪಾರ್ಥಿವ ಶರೀರದ  ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಬಿಜೆಪಿ ಕಾರ್ಯಕರ್ತರು, ಸ್ನೇಹಿತರು ಅಂತಿಮ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಂತೋಷ್‌ ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 

ಬಳಿಕ ಪೊಲೀಸ್‌ ಭದ್ರತೆಯೊಂದಿಗೆ ಸಂತೋಷ್‌ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ಮೆರವಣಿಗೆ ಮೂಲಕ ಕೊಂಡೊಯ್ದು ಜೀವನಹಳ್ಳಿಯ ಕಲ್ಪಳ್ಳಿ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. 

ದಲಿತ ಯುವಕ ಸಂತೋಷ್‌ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಎಲ್ಲವೂ ಸರಿಯಾಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ. 

ವೈಯಕ್ತಿಕ ಗಲಾಟೆಯಲ್ಲಿ ಸತ್ತ ಹಿಂದು ಯುವಕರನ್ನೆಲ್ಲಾ ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ವಾಸಿಂ ಮತ್ತು ಸಂತೋಷ್‌ ಗೆಳೆಯರಾಗಿದ್ದು, ವೈಯಕ್ತಿಕ ಕಾರಣಕ್ಕೆ ಇಬ್ಬರ ನಡುವೆ ಜಗಳವುಂಟಾಗಿ ವಾಸೀಂ ಸ್ಕ್ರೂಡ್ರೈವ್‌ ನಿಂದ ಸಂತೋಷ್‌ ಕಾಲಿಗೆ ಚುಚ್ಚಿದ್ದಾನೆ. ಇಲ್ಲಿ ಕೋಮು ದ್ವೇಷದ ಕಾರಣಕ್ಕೆ ಕೊಲೆ ನಡೆದಿಲ್ಲ. ವಾಸೀಂ ಲಾಂಗ್‌, ಮಚ್ಚು ಬಳಕೆ ಮಾಡಿ ಕೊಲೆ ಮಾಡಿಲ್ಲ. ಹಿಂದೂ ಮುಸ್ಲಿàಮರ ನಡುವೆ ಗಲಾಟೆ ನಡೆದರೆ ಬಿಜೆಪಿಯವರು ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ. 
-ರಾಮಲಿಂಗಾರೆಡ್ಡಿ, ಗೃಹ ಸಚಿವ 

ಸಂತೋಷ್‌ ಹತ್ಯೆ ಪ್ರಕರಣ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳನ್ನು  ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ.
-ಟಿ.ಸುನೀಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next