‘ಪರಂವ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಶೂಟಿಂಗ್ ಮುಗಿಸಿ, ಬಿಡುಗಡೆ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಟೀಸರ್ ಅನ್ನು ನಟ ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಈ ಚಿತ್ರವನ್ನು ಸಂತೋಷ್ ಕೈದಾಳ ನಿರ್ದೇಶಿಸಿದ್ದಾರೆ. ಪ್ರೇಮ್ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಸಂತೋಷ್, “ನಾಟಕ, ಸಿನಿಮಾ ನೋಡುತ್ತಾ ಬೆಳೆದವನು ನಾನು. “ಆರ್ಯನ್’ ಸಿನಿಮಾ ಮೂಲಕ ತಂತ್ರಜ್ಞನಾಗಿ ಚಿತ್ರರಂಗ ಪ್ರವೇಶ ಮಾಡಿದೆ. ನಾನು ಹಾಗೂ ಗೆಳೆಯ ಪ್ರೇಮ್ ಸಿನಿಮಾ ಮಾಡುವ ಎಂದು ಪ್ಲ್ರಾನ್ ಮಾಡಿಕೊಂಡಾಗ ಒಳ್ಳೆಯ ಕಥೆ ಮಾಡಿಕೊಂಡು ಗೆಳೆಯರ ಸಹಕಾರದಿಂದ ಈ ಸಿನಿಮಾ ಮಾಡಿದ್ದೇವೆ. ಈ ಚಿತ್ರಕ್ಕೆ ಸುಮಾರು 200 ಜನ ಹಣ ಹಾಕಿದ್ದಾರೆ. ತುಮಕೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದ್ದು ಇದು ಚಿಕ್ಕ ಪ್ರಯತ್ನ ಅಷ್ಟೇ. ಇದರಲ್ಲಿ ವೀರಗಾಸೆಯನ್ನೇ ವೃತ್ತಿಯಾಗಿ ಬಳಸಿಕೊಂಡ ಕುಟುಂಬದ ಕಥೆಯ ಜತೆಗೆ ಇಂದಿನ ಯುವ ಜನಾಂಗದ ಜೀವನ ಶೈಲಿಯ ಬಗ್ಗೆ ತೋರಿಸಲಾಗಿದೆ. ಇದು ಕ್ರೌಡ್ ಫಂಡಿಂಗ್ ಸಿನಿಮಾ. ನಮ್ಮ ಪ್ರಯತ್ನಕ್ಕೆ ನಿರ್ಮಾಪಕ, ನಿರ್ದೇಶಕ ಗುರು ದೇಶಪಾಂಡೆ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದು ಹೇಳಿದರು.
ನಾಯಕ ಪ್ರೇಮ್ ಮಾತನಾಡಿ, “ನಾನು ಕೂಡ ಸಹ, ಸಹಾಯಕ ನಿರ್ದೇಶಕನಾಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ಈಗ ನಟನಾಗಿದ್ದೇನೆ. ಸದ್ಯ ನಮ್ಮ ಈ “ಪರಂವ’ ಸಿನಿಮಾ ಸೆನ್ಸಾರ್ ಹಂತದಲ್ಲಿ ಇದೆ. ಇದರಲ್ಲಿ ನಾನು ಹೀರೋ ಅಲ್ಲ ಕಂಟೆಂಟ್ ಹೀರೋ. ಚಿತ್ರದಲ್ಲಿ ನನಗೆ 4-5 ಗೆಟಪ್ ಇರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿದ್ದೇನೆ. ಚಿತ್ರದಲ್ಲಿ ಮೈಸೂರು ದಸರಾದಿಂದ ಕಥೆ ಶುರುವಾಗುತ್ತದೆ. ವೀರಗಾಸೆ ಕುಟುಂಬದಿಂದ ಬಂದಂತ ಹುಡುಗ ಏನೆಲ್ಲಾ ಆಗುತ್ತಾನೆ ಎಂಬುದು ಸಿನಿಮಾದ ಒಂದು ಲೈನ್ ಕಥೆ’ ಎಂದರು.