Advertisement

​ಸರ್ಪದೋಷ ಎನ್ನುವುದು ಸಂತಾನದೋಷ ತರಬಲ್ಲದೇ?

07:13 AM Feb 13, 2016 | |

ಜನ್ಮ ಕುಂಡಲಿಯಲ್ಲಿ ಐದನೇ ಮನೆಯು ಬಹಳ ಮಹತ್ವದ ಸ್ಥಳವಾಗಿದೆ. ಸಹಜವಾಗಿಯೇ ಇದು ತ್ರಿಕೋಣ ಸ್ಥಾನವಾದುದರಿಂದ ಮಾನವ ಸಂಬಂಧವಾದ ಯಶಸ್ಸಿನ ಏರಿತಗಳಲ್ಲಿ ಈ ಸ್ಥಳವು ನಿರ್ಣಾಯಕವಾದ ಪಾತ್ರವನ್ನು ವಹಿಸುತ್ತದೆ. ಮುಖ್ಯವಾಗಿ ಸಂತಾನ ಅಂದರೆ ಮಕ್ಕಳ ಪ್ರಾಪ್ತಿಯ ಬಗೆಗೆ ಈ ಮನೆಯನ್ನು ವಿವರವಾಗಿ ವಿಶ್ಲೇಷಿಸಬೇಕಾಗುತ್ತದೆ. ಕೇವಲ ಮಕ್ಕಳ ಪ್ರಾಪ್ತಿ ಅಪ್ರಾಪ್ತಿಯ ವಿಷಯವೊಂದೇ ಅಲ್ಲ, ಈ ಮನೆಯ ಶಕ್ತಿ ಹಾಗೂ ದೌರ್ಬಲ್ಯಗಳ ಮೇಲಿಂದ ಮಕ್ಕಳ ಸಾವು ಮಕ್ಕಳಿಂದ ಎದುರಾಗುವ ಪೀಡೆ ಮನೋಲ್ಲಾಸ ಇತ್ಯಾದಿ ಇತ್ಯಾದಿಗಳನ್ನು ಈ ಪಚಮ ಭಾವದಿಂದ ನಿರ್ಣಯಿಸಬಹುದು. ಕುಟುಂಬಸ್ಥಾನ ಭಾಗ್ಯ ಹಾಗೂ ಸುಖಸ್ಥಾನಗಳು ತಂತಮ್ಮ ಶಕ್ತಿ ಹಾಗೂ ಮಿತಿಗಳೊಡನೆ ಈ ಪಂಚಮ ಭಾವವನ್ನು ನಿಯಂತ್ರಿಸಬಲ್ಲವು. ಮನುಷ್ಯನ ಅದೃಷ್ಟ ದೈವಬಲ ಒಟ್ಟಾರೆಯಾಗಿ ಪಂಚಮದಿಂದಲೇ ಹೆಚ್ಚು ಸ್ಪಷ್ಟ ಎಂಬುದರ ಮೇಲಿಂದ ಪಂಚಮ ಸ್ಥಳ ಮಹತ್ವದ ಆಯ ಕಟ್ಟಿನ ಸ್ಥಳವಾಗಿದೆ. 

Advertisement

ಸರ್ಪದೋಷ ಸಂತಾನದೋಷ ತರಬಲ್ಲದೇ?

ಸಂತಾನ ದೋಷಕ್ಕೆ ಸರ್ಪ ದೋಷವೂ ಕಾರಣವಾಗಬಲ್ಲದೇ ವಿನಃ ಆ ಸಂತಾನ ದೋಷಕ್ಕೆ ಸರ್ಪದೋಷವೇ ಮುಖ್ಯ ಕಾರಣವಲ್ಲ. ಪಂಚಮ ಸ್ಥಾನದ ಅಧಿಪತಿಗಿರುವ ದೋಷವು ಪಂಚಮ ಭಾವದಲ್ಲಿರುವ ಗ್ರಹಗಳು ಈ ಗ್ರಹಗಳಿಗೆ ಒದಗಿದ ನೀಚತನ ಅಥವಾ ಅಸ್ತಂಗತ ದೋಷಗಳು ಸಂತಾನಹೀನತೆಯನ್ನು ಅಥವಾ ಸಂತಾನ ವಿಳಂಬದ ಕೊಂಡಿ ಕೂಡಿಸಬಲ್ಲದು.

ಹಾಗೆಯೇ ಈ ಪಂಚಮಭಾವ ರಾಗಾ-ಭಾವಗಳನ್ನು ಉದ್ವಿಗ್ನತೆ ನಿರುದ್ವಿಗ್ನತೆಗಳನ್ನು ಕೂಡಾ ನಿರ್ಧರಿಸುವುದರಿಂದ ಬಹುತೇಕವಾಗಿ ನಿರ್ವೀಯತೆ ಅಥವಾ ಬಂಜೆತನ ದೋಷ ಅಲ್ಲದಿದ್ದರೂ ಹೆಣ್ಣು ಗಂಡಿನ ಮಿಲನಕ್ರಿಯೆಯನ್ನೇ ದೋಷಪೂರ್ಣವಾಗಿ ಮಾಡಿಬಿಡಬಲ್ಲದು. ಹೀಗಾಗಿ ಗಂಡು ಹಾಗೂ ಹೆಣ್ಣಿನ ಜಾತಕಗಳ ಜೋಡಣೆಯ ಸಂದರ್ಭದಲ್ಲೇ ಈ ಅಂಶವನ್ನು ಸರಿಯಾಗಿ ಪರಿಶೀಲಿಸಿಯೇ ಜಾತಕ ಹೊಂದಾಣಿಕೆ ಸಾಧ್ಯವಾಗಬೇಕು. ಗಂಡು ಹಾಗೂ ಹೆಣ್ಣು ಇಬ್ಬರೂ ಉದ್ವಿಗ್ನ ಸ್ಥಿತಿಯವರಾದರೆ ಪೂರ್ವಪುಣ್ಯಸ್ಥಾನದ ಚಿಕ್ಕ ದೋಷವೂ ಕೂಡಾ ಸಂತಾನ ಹೀನತೆಗೆ ಕಾರಣವಾಗಬಹುದು. ಉದ್ವಿಗ್ನತೆ ನಿರುದ್ವಿಗ್ನತೆಗಳು ಒಂದು ಹೆಣ್ಣಿನಲ್ಲಿದ್ದರೆ ಇದಕ್ಕೆ ವಿವುರುದ್ಧ ಭಾವದ ಗಂಡು ಆ ಹೆಣ್ಣಿಗೆ ಜೊತೆಗಾರನಾಗಬಲ್ಲ. ಪೂರ್ವ ಪುಣ್ಯದ ತೀವ್ರತರ ದೌರ್ಬಲ್ಯಗಳು ಕೂಡಾ ಈ ಹೆಣ್ಣು ಗಂಡುಗಳ ಸಂಯೋಜನೆಯೊಂದಿಗೆ ನಿವಾರಣೆಯಾಗಿ ಉತ್ತಮ ಸಂತಾನಕ್ಕೆ ಕಾರಣವಾಗಬಲ್ಲದು.

ಚಂದ್ರನ ಕ್ಷೀಣ ಸ್ಥಿತಿ ಸಂತಾನಕ್ಕೆ ಅಪಾಯಕಾರಿ
ಸಂತಾನ ಸ್ಥಾನವಾದ ಪೂರ್ವಪುಣ್ಯ ಅಥವಾ ಪಂಚಮಭಾವಕ್ಕೆ ದೋಷವಿದ್ದಾಗ ಜಾತಕದಲ್ಲಿ ಚಂದ್ರನೇ ಕ್ಷೀಣನಾಗಿ ಪಂಚಮಾಧಿಪತಿಯೂ ಆಗಿದ್ದರೆ ಪಂಚಮ ಭಾವದಲ್ಲೇ ಕ್ಷೀಣ ಚಂದ್ರನಿದ್ದರೆ ಸಂತಾನಹೀನತೆ ದೊಡ್ಡ ಸಮಸ್ಯೆಯಾಗಬಲ್ಲದು. ಈ ಸಂದರ್ಭದಲ್ಲಿ ತಂದೆತಾಯಿ, ಅತ್ತೆ ಮಾವಂದಿರ ಸಾಂತ್ವನ ಬೆಂಬಲದ ಆಸರೆ, ಹಾರೈಕೆ, ಧೈರ್ಯದ ಮಾತು ಚಂದ್ರನ ದೋಷವನ್ನು ನಿವಾರಿಸಬಲ್ಲದು. ಚಂದ್ರನೊಟ್ಟಿಗೆ ಸಂಪನ್ನವಾದ ಯೋಗವನ್ನು ಒಡಮೂಡಿಸುವ ಗುರುಗ್ರಹದ ಶಕ್ತಿಯು ಕೂಡಾ ಚಂದ್ರನ ಕ್ಷೀಣತೆಯನ್ನು ಸಾಕಷ್ಟು ದೂರ ಮಾಡುತ್ತದೆ. ಗುರುಗ್ರಹವು ಸಹಜವಾಗಿ ಚಂದ್ರನ ಜೊತೆ ಅಪಾರವಾದ ಒಳಿತುಗಳನ್ನು ಒಬ್ಬ ವ್ಯಕ್ತಿಗೆ ಕೊಡಮಾಡುವಲ್ಲಿ ನಿರಂತರವಾಗಿ ಹೆಣಗುತ್ತಿರುತ್ತದೆ. 

Advertisement

ಸರ್ಪದೋಷ ಮತ್ತು ಸಂತಾನ ಪೀಡೆ
ಭಾಗ್ಯಸ್ಥಾನದಲ್ಲಿನ ಸರ್ಪ ನೆರಳು, ಸುಖಸ್ಥಾನದಲ್ಲಿನ ಸರ್ಪದ ನೆರಳು, ಪಂಚಮ ಸ್ಥಾನದ ಸರ್ಪದ ನೆರಳು ಮುಖ್ಯವಾಗಿ ರಾಹು ದೋಷದಿಂದ ಒದಗುವಂಥದ್ದು. ಹೀಗಾಗಿ ರಾಹುವೂ ವ್ಯಕ್ತಿಯ ಜಾತಕದಲ್ಲಿ ಪ್ರಮುಖ ಘಟಕವಾಗಿಬಿಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಸರ್ಪಾರಾಧನೆಗೆ ಮಹತ್ವ ಪಾತ್ರವಿದೆ. ನಾಗಬನ ನಾಗಪೂಜೆ, ನಾಗಾರಾಧನೆ, ನಾಗ ಪ್ರತಿಷ್ಠೆ, ನಾಗ ಸಂಸ್ಕಾರ, ಇತ್ಯಾದಿಗಳನ್ನು ನಾಗರ ಪ್ರೀತ್ಯರ್ಥವಾಗಿ ನೆರವೇರಿಸಿ ಮುಖ್ಯವಾಗಿ ಸಂತಾನಫ‌ಲಕ್ಕಾಗಿ ಸಂತಾನ ಫ‌ಲ ದೊರಕಿದರೂ ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳನ್ನು ಕಳೆದಿಕೊಳ್ಳುವ ಪ್ರಾರಬ್ಧ ನಿವಾರಣೆಗಾಗಿ ಮಕ್ಕಳಿಂದಲೇ ಪರಮಪೀಡೆಗಳನ್ನು ಅನುಭವಿಸುವ ಯಾತನೆಯ ಶಮನಕ್ಕಾಗಿ ಸರ್ಪದೋಷಗಳನ್ನು ಕಳೆದುಕೊಳ್ಳುತ್ತಾರೆ.

ಮಕ್ಕಳಿದ್ದರೂ ಪೀಡೆ
ಮನುಷ್ಯನ ಬದುಕಿನಲ್ಲಿ ಪೀಡೆಯ ಘಟ್ಟ ಎಲ್ಲಿಂದ ಪ್ರಾರಂಭ ಎಂದು ನಿಖರವಾಗಿ ಊಹಿಸಲು ಬಾರದು. ಉತ್ತಮವಾದ ಬಾಲ್ಯ, ಯುಕ್ತ ವಯಸ್ಸಿನಲ್ಲಿ ಮದುವೆ, ಶೀಘ್ರ ಸಂತಾನ ಅದರಲ್ಲೂ ಪುತ್ರ ಪ್ರಾಪ್ತಿಯ ಸುಯೋಗ  ಕೇಳಬೇಕೆ ಸ್ವರ್ಗಕ್ಕೆ ಮೂರೇ ಗೇಣು. ಆದರೆ ಹುಣ್ಣಿಮೆಯ ಚಂದ್ರನಂತೆ ಪರಿಶೋಭಿಸಬೇಕಾದ ಮಗನೋ, ಮಗಳೊ ಅಡ್ಡದಾರಿ ಹಿಡಿದರೆ ದುರಹಂಕಾರ ಅಲ್ಪಮತಿಗಳಿಂದ ಬಳಲಿದರೆ, ಮನುಷ್ಯನ ನಡುವಯಸ್ಸು ವೃದ್ಧಾಪ್ಯ ಕೇಳುವುದೇ ಬೇಡ. ನಿತ್ಯ ನರಕವಾಗಬಲ್ಲದು. ಸಂತಾನ ಸ್ಥಾನವಾದ ಪಂಚಮಭಾವಕ್ಕೆ ದೋಷದ ಅಬುìದ ಪೀಡೆ ಸಂತಾನಹೀನತೆಯನ್ನು ಮಾತ್ರ ಕೊಡುವ ರೀತಿಯಲ್ಲಿರುತ್ತದೆ ಎಂದು ಭಾವಿಸಬಾರದು. ಸಂತಾನ ದೋಷಕ್ಕೆ ಪೀಡಕರಾದ ಮಕ್ಕಳೂ ತಂತಮ್ಮ ಪಾಲನ್ನು ಧಾರೆ ಎರೆಯಬಲ್ಲರು. ಹೀಗಾಗಿ ಬಂಜೆ ಎಂದು ಯಾರನ್ನೂ ಜರೆಯದಿರಿ. ನಿಮ್ಮನ್ನು ಬಂಜೆಯಲ್ಲ ಎಂದು ಸಾಬೀತು ಪಡಿಸಿದ ಮಕ್ಕಳೇ ಮುಂದೆ ವ್ಯಾಘ್ರಗಳಾಗಿ ತಲೆತಿನ್ನಬಲ್ಲರು. 

ಅಶುಭ ಗ್ರಹಗಳ ದಶಾಕಾಲ ಮತ್ತು ಪುತ್ರನಾಶ
 ಯಾವಾಗಲೂ ಅಶುಭ ಗ್ರಹಗಳಾದ ಸೂರ್ಯ, ಶನಿ, ಕುಜ ರಾಹು ಕೇತುಗಳು ಸಂತಾನ ಭಾಗದಲ್ಲಿರುವುದು ಅಷ್ಟು ಕ್ಷೇಮವಲ್ಲ. ಯೋಗಕಾರಕನಾಗಿ ಜಾತಕಕ್ಕೆ ಒಳ್ಳೆಯವನಾಗಿ ಅಶುಭ ಗ್ರಹಗಳು ಇದ್ದರೂ ಶನಿಕಾಟದ ಸಂದರ್ಭದಲ್ಲಿ ದುಷ್ಟದಶಾಕಾಲದಲ್ಲಿ ಈ ಅಶುಭ ಗ್ರಹಗಳೇನಾದರೂ ದುಷ್ಟ ದಶಾನಾಥನ ಕಕ್ಷೆಯಲ್ಲಿ ನರಳುವ ಸಂದರ್ಭಗಳು ಒದಗಿದಲ್ಲಿ ಮಕ್ಕಳಿಂದ ತೊಂದರೆ ಸಂತಾನ ನಾಶ, ಸಂತಾನಹೀನತೆ ಇತ್ಯಾದಿ ಏನೋ ಒಂದು ನಿಸ್ಸಂಶಯವಾಗಿಯೂ ಸಂಭವಿಸಿಯೇ ತೀರುತ್ತದೆ.

ಈ ಮೇಲಿನ ಅಂಶಗಳನ್ನು ಭಾರತದ ಮಾಜಿ ಪ್ರಧಾನಿಯೋರ್ವರ ಜೀವನದಲ್ಲಿ ಗಮನಿಸಬಹುದಾಗಿದೆ. ಇವರ ಜಾತಕದಲ್ಲಿ ಪಂಚಮ ಸ್ಥಾನಸ್ಥಿತ ಸೂರ್ಯ ಅವನ ವೈರಿಯಾದ ಶನೈಶ್ಚರನ ನಕ್ಷತ್ರದಲ್ಲಿದ್ದದ್ದು ಪ್ರಮುಖವಾಗಿದೆ. ಜೊತೆಗೆ ಸೂರ್ಯನಿಗೆ ಪಂಚಮಾಧಿಪತಿ ಕುಜನೊಂದಿಗೆ ಪರಿವರ್ತನಯೋಗವೂ ಇತ್ತು. ಇದರಿಂದಾಗಿ ಮುಂದೆ ಬಹುಮುಖ್ಯವಾದ ಅಧಿಕಾರ ಯೋಗವನ್ನು ಪಡೆಯುವ ಪ್ರತಿಭೆಯನ್ನು ಪಡೆಯುವ, ಪ್ರತಿಭೆಯನ್ನು ಇವರ ಪುತ್ರನಿಗೆ ಆ ಪರಿವರ್ತನಯೋಗ ಒದಗಿಸಿಕೊಡುವಷ್ಟು ಬಲವಾಗಿತ್ತು. ಆದೆ ಶನೈಶ್ಚರನ ದಶಾಕಾಲದಲ್ಲಿ ಶನೈಶ್ಚರ ಸೂರ್ಯನ ನಕ್ಷತ್ರವಾದ ಉತ್ತರಾ ನಕ್ಷತ್ರದಲ್ಲಿ ಸಂಚರಿಸುವಾಗ ಪುತ್ರನನ್ನು ಕಳೆದುಕೊಳ್ಳುವ‌ ಯೋಗವನ್ನು ಈ ಮಾಜಿ ಪ್ರಧಾನಿಗಳಿಗೆ ಒದಗಿಸಿಬಿಟ್ಟಿದ್ದ. ಕಳೆದುಕೊಂಡ ಆ ಪ್ರಧಾನಿ ಪಟ್ಟ ಹಿಂತಿರುಗಿ ಪಡೆದ ಸಂದರ್ಭದಲ್ಲೂ ಅವರಿಗೆ ಈ ಶೋಕ ಶನಿ ಹಾಗೂ ಸೂರ್ಯರ ದೋಷಪೂರ್ಣ ಜಟಾಪಟಿಯಿಂದ ಆವರಿಸುವಂತಾಯ್ತು.

Advertisement

Udayavani is now on Telegram. Click here to join our channel and stay updated with the latest news.

Next