ನವದೆಹಲಿ: ಒಂದು ತಿಂಗಳ ವಿರಾಮದ ಬಳಿಕ ಸಂಸತ್‌ನ ಬಜೆಟ್ ಅಧಿವೇಶನದ ಎರಡನೇ ಭಾಗ ಸೋಮವಾರ (ಮಾ.13)ದಿಂದ ಶುರುವಾಗಲಿದ್ದು, ಏ.6ರವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಒಟ್ಟು 17 ಕಲಾಪಗಳು ಇರಲಿವೆ.
ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶ, ವಯನಾಡ್ ಸಂಸದ ರಾಹುಲ್ ಗಾಂಧಿ ಯು.ಕೆ.ಪ್ರವಾಸದ ವೇಳೆ ನೀಡಿರುವ ಹೇಳಿಕೆಗಳು, ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ಕಾಂಗ್ರೆಸ್ ಮಾಜಿ ಅಧ್ಯಕ್ಷರ ವಿರುದ್ಧ ಮಾಡಿದ ಆರೋಪಗಳು ಮೇಲ್ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇದಲ್ಲದೆ ಪ್ರತಿಪಕ್ಷಗಳ 12 ಸಂಸದರ ವಿರುದ್ಧ ರಾಜ್ಯಸಭೆ ಸಭಾಪತಿ ಹಕ್ಕುಚ್ಯುತಿ ಗೊತ್ತುವಳಿ ಅನ್ವಯ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿರುವುದು ಕೂಡ ಗದ್ದಲಕ್ಕೆ ನಾಂದಿ ಹಾಡಲಿದೆ.
ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ವರದಿ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ಮುಂದುವರಿಸುವ ಸಾಧ್ಯತೆಗಳು ಇವೆ. ಆರೋಪಗಳ ವಿರುದ್ಧ ತನಿಖೆಗೆ ಸಂಸತ್‌ನ ಜಂಟಿ ಸಮಿತಿ ರಚಿಸಬೇಕು ಎಂದೂ ಒತ್ತಾಯಿಸಲಿವೆ.
ಈ ಅವಧಿಯಲ್ಲಿ ಫೆ.1ರಂದು ಮಂಡಿಸಿದ 2023-24ನೇ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆಯಲಾಗುತ್ತದೆ. ಪ್ರಮುಖ ವಿಧೇಯಕಗಳಿಗೂ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ.
Related Articles
ಇಂದು ಪ್ರತಿಪಕ್ಷಗಳ ಸಭೆ
ಅಧಿವೇಶನದಲ್ಲಿ ಪ್ರತಿಪಕ್ಷಗಳ ನಿಲುವಿನ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೋಮವಾರ ಸಂಸತ್ ಭವನದಲ್ಲಿ ಸಭೆ ನಡೆಯಲಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆಯೂ ನಡೆಯಲಿದೆ.