ವಾಡಿ : ಸಮೀಪದ ಸನ್ನತಿ ಐತಿಹಾಸಿಕ ಬೌದ್ಧ ಸ್ತೂಪ ಸ್ಥಳ ಅಭಿವೃದ್ಧಿಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆಯಿಂದ 3.5 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಮೂಲ ಸ್ತೂಪ ಆಕೃತಿಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರಗೊಳಿಸಲಾಗುವುದು ಎಂದು ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ವಿಭಾಗೀಯ ನಿರ್ದೇಶಕಿ ಡಾ.ಮಹೇಶ್ವರಿ ಹೇಳಿದರು.
ಬುಧವಾರ ಸನ್ನತಿಯ ಸಾಮ್ರಾಟ್ ಅಶೋಕನ ಕುರುಹು ದೊರೆತ ಬೌದ್ಧ ಸ್ತೂಪ ಸ್ಥಳ ಅಭಿವೃದ್ಧಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಹಳ ವರ್ಷಗಳ ನಂತರ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಅನುದಾನ ನೀಡಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಜು.7 ರಿಂದಲೇ ಅಭಿವೃದ್ಧಿ ಶುರುವಾಗಲಿದೆ. ವಿಶ್ವದ ಗಮನ ಸೆಳೆಯುವ ರೀತಿಯಲ್ಲಿ ಈ ಸನ್ನತಿಯ ಬೌದ್ಧ ವಿಹಾರ ನಿರ್ಮಾಣವಾಗಲಿದೆ. ಉತ್ಖನನದಲ್ಲಿ ದೊರೆತ ಶಿಲೆಗಳನ್ನೇ ಬಳಸಿಕೊಂಡು ವಿವಾಹರ ಮರು ನಿರ್ಮಾಣ ಮಾಡಲಾಗುತ್ತದೆ ಎಂದರು.
ಕ್ರಿ.ಪೂ. 3ನೇ ಶತಮಾನಕ್ಕೆ ಸೇರಿದ ಬೌದ್ಧ ಸ್ತೂಪ ಜಾಗದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ, ಸನ್ನತಿ ಬೌದ್ಧ ತಾಣದ ಅಭಿವೃದ್ಧಿಗೆ ಕಾಲ ಕೂಡಿ ಬಂದಿದೆ. ಇದಕ್ಕಾಗಿ ನಾವು ನಿಯೋಗ ಹೋಗಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ ಬಳಿಕ ಪ್ರಧಾನಿ ಮೋದಿಯವರು ಅನುದಾನ ನೀಡಲು ಸಾಧ್ಯವಾಗಿದೆ. ಪ್ರಪಂಚದ ಗಮನ ಸೆಳೆದಿರುವ ಸನ್ನತಿಯನ್ನು ಅತ್ಯಾಕರ್ಷಕವಾಗಿ ಅಭಿವೃದ್ಧಿ ಪಡಿಸಲಾಗುವುದು. ಇಲ್ಲಿ ಅಧ್ಯಯನ ಕೇಂದ್ರದ ಜತೆಗೆ ವಸ್ತುಸಂಗ್ರಹಾಲಯ ನಿರ್ಮಾಣವಾಗಬೇಕಿದೆ. ಜನರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ : ಆಸ್ತಿ ಹಂಚಿಕೆಯಲ್ಲಿ ಕಲಹ: ಸ್ವಂತ ಅಣ್ಣನನ್ನು ಕೊಂದ ಮೂವರ ಸೆರೆ
ದ್ವೀದಳ ದಾನ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಸೇಡಂ ಸಹಾಯಕ ಆಯುಕ್ತ ಎಂ.ಕಾರ್ತಿಕ್, ಪ್ರಾಚ್ಯವಸ್ತು ಇಲಾಖೆಯ ಡಾ.ರವಿಕುಮಾರ್, ನಿಹೀಲ್ ದಾಸ, ನಾಲವಾರ ಕಂದಾಯ ಅಧಿಕಾರಿ ಪ್ರಶಾಂತ ರಾಠೋಡ, ಸೇಡಂ ಗ್ರೇಡ್ 2 ತಹಶೀಲ್ದಾರ ಸಿದ್ರಾಮ ನಾಚವಾರ, ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರ, ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ಡಾ.ವೀರೇಶ ಎಣ್ಣಿ, ದಲಿತ ಯುವ ಮುಖಂಡ ಸಂದೀಪ ಕಟ್ಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.