ಕಮಲನಗರ/ಔರಾದ: ಆಧುನಿಕ ಯುಗದಲ್ಲಿ ಜೀವಿಸುತ್ತಿರುವ ಇಂದಿನ ಪೀಳಿಗೆ ಬಿಡುವಿಲ್ಲದೆ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದ ರಿಂದ ಜೀವನದಲ್ಲಿ ಶಾಂತಿ, ನೆಮ್ಮದಿಗಳಿಲ್ಲದೇ ವರ್ತಿಸುತ್ತಿದೆ. ಈ ನಿಟ್ಟಿನಲ್ಲಿ ರೋಗ ಮುಕ್ತ ಜೀವನಕ್ಕೆ ಜಾನಪದ ಕಲೆ ಸಂಜೀವಿನಿಯಾಗಿದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.
ಕಮಲನಗರದಲ್ಲಿ ಸೋಮವಾರ ತಾಲೂಕು ಜಾನಪದ ಪರಿಷತ್ ಆಯೋಜಿಸಿದ್ದ ಡಾ| ಚನ್ನಬಸವ ಪಟ್ಟದೇವರ 128ನೇ ಜಯಂತಿ ಹಾಗೂ ಮಹಿಳಾ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ನಿತ್ಯ ಜೀವನದಲ್ಲಿ ಜಾನಪದ ಕಲೆ ಹಾಗೂ ಸಾಹಿತ್ಯವನ್ನು ಅನುಕರಣೆ ಮಾಡಿ ಶಾಂತಿ-ನೆಮ್ಮದಿ, ಮಾನವೀಯ ನೆಲೆಯಲ್ಲಿ ಜೀವಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ| ಜಗನಾಥ ಹೆಬ್ಟಾಳೆ ಮಾತನಾಡಿ, ಮನದಲ್ಲಿನ ಪ್ರತಿಯೊಬ್ಬರ ಭಾವನೆಗಳನ್ನು ಗಾಯನದ ಮೂಲಕ ಹಾಡುವುದೇ ಜಾನಪದ ಸಾಹಿತ್ಯವಾಗಿದೆ. ಗಡಿ ತಾಲೂಕಿನಲ್ಲಿ ಅನೇಕ ಜಾನಪದ ಕಲಾವಿದ್ದರು ಇದ್ದಾರೆ. ಅಂಥವರನ್ನು ಗುರುತಿಸಿ ಉತ್ತಮ ವೇದಿಕೆ ನೀಡಬೇಕೆನ್ನುವ ಉದ್ದೇಶದಿಂದ ತಾಲೂಕಿನಲ್ಲಿ ಜಾನಪದ ಪರಿಷತ್ ನಿರಂತರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ ಪಟ್ಟದೇವರು, ಮಹಾದೇವಪ್ಪ ತಾಯಿ, ಸಮ್ಮೇಳನಾಧ್ಯಕ್ಷೆ ಪಾರ್ವತಿ, ಜಿಪಂ ಸದಸ್ಯ ಬಾಬುಸಿಂಗ್ ಹಜಾರಿ, ಪ್ರಥಮ ದರ್ಜೆ ಗುತ್ತಿಗೇದಾರ ಸೂರ್ಯಕಾಂತ ಅಲ್ಮಾಜೆ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸಂಜುಕುಮಾರ ಜುಮ್ಮಾ, ಹಿರಿಯ ಪ್ರತ್ರಕರ್ತ ಅನೀಲಕುಮಾರ ದೇಶಮುಖ, ಪ್ರಶಾಂತ
ಮಠಪತಿ, ಡಾ|ಭೀಮಶೇನ ಸಿಂದೆ ಹಾಗೂ ಇನ್ನಿತರರು ವೇದಿಕೆಯಲ್ಲಿದ್ದರು.