ಬೆಳಗಾವಿ: ಹಲವಾರು ವರ್ಷಗಳಿಂದ ಗೋವಿನ ರಕ್ಷಣೆಯಲ್ಲಿ ತೊಡಗಿ ಗೋವುಗಳಿಗೆ ಸಂಜೀವಿನಿ ಆಗಿರುವ ಅನೇಕ ಗೋಶಾಲೆಗಳು ಗಡಿ ಜಿಲ್ಲೆ ಬೆಳಗಾವಿಯಲ್ಲಿವೆ. ಸಾವಿರಕ್ಕೂ ಹೆಚ್ಚು ಗೋವುಗಳು ಮಠದ ಆಸರೆಯಲ್ಲಿ ಆರೈಕೆ ಪಡೆಯುತ್ತಿದ್ದು, ಗೋ ರಕ್ಷಣೆಯಲ್ಲಿ ಈ ಶಾಲೆಗಳು ಹಗಲಿರುಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದ್ದು, ಗೋವುಗಳ ರಕ್ಷಣೆಯಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಿರುವ ಗೋಶಾಲೆಗಳು ಸರ್ಕಾರದ ಅನುದಾನಕ್ಕಾಗಿ ಕಾಯುತ್ತಿವೆ. ಮಠ ಮಾನ್ಯಗಳು ತಮ್ಮ ಖರ್ಚಿನಲ್ಲಿಯೇ ಇದರ ಆರೈಕೆ, ಪಾಲನೆ-ಪೋಷಣೆ ಮಾಡುತ್ತಿವೆ. ಜಿಲ್ಲೆಯಲ್ಲಿ ಸದ್ಯ ಅಧಿ ಕೃತವಾಗಿ ಎಂಟು ಗೋಶಾಲೆಗಳಿದ್ದು, ಇಲ್ಲಿ ಸಾವಿರಕ್ಕೂ ಹೆಚ್ಚು ಗೋವುಗಳ ರಕ್ಷಣೆ ನಿರಂತರವಾಗಿ ನಡೆದಿದೆ.
ಹುಕ್ಕೇರಿ ತಾಲೂಕಿನ ನಿಡಸೋಶಿ ಮಠದ ಗೋಶಾಲೆ, ಬೆಳಗಾವಿ ತಾಲೂಕಿನ ಶಿವಾಪುರದ ಮುಕ್ತಿನ ಕಾಡಸಿದ್ಧೇಶ್ವರ ಸೇವಾ ಸಮಿತಿ ಗೋಶಾಲೆ, ನಿಪ್ಪಾಣಿಯ ಶಹಾಬಾದಿಮಠ ಗೋಶಾಲೆ, ಮುಕ್ತಿಮಠದ ಗೋಶಾಲೆ, ಇಂಚಲದ ಶ್ರೀ ಭಾರತಿ ಶಿವಾನಂದ ಸ್ವಾಮಿಗಳ ಗೋಶಾಲೆ, ಕಮಕಾರಟ್ಟಿಯ ಜೈನ ಸಮುದಾಯದ ಭಗವಾನ ಮಹಾವೀರ ಗೋಶಾಲೆ, ನಿಲಜಿಯ ಅಲೌಕಿಕ ಧ್ಯಾನ ಮಂದಿರದ ಗೋಶಾಲೆ, ಕಾಕತಿ ಸಮೀಪದ ಹುಣಸೆವಾರಿ ಮಠದ ಗೋಶಾಲೆ, ಮುರಗೋಡ ಶ್ರೀ ದುರದುಂಡೇಶ್ವರ ಮಠದ ಗೋಶಾಲೆ, ಬೈಲಹೊಂಗಲ ತಾಲೂಕಿನ ನಾಗನೂರು ಮಠದ ಗೋಶಾಲೆ, ಅಥಣಿ ಗೋಶಾಲೆ, ಗೋಕಾಕನ ರಾಠೊಡ ಟ್ರಸ್ಟ್‌ನ ಗೋಶಾಲೆ ಸದ್ಯ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ.
ಇದನ್ನೂ ಓದಿ:ಸ್ಪೈಡರ್ ಲುಕ್ ಹೇರ್‌ಸ್ಟೈಲ್‌ನಲ್ಲಿ ಶಿಷ್ಯ ದೀಪಕ್
ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಗೋವುಗಳನ್ನು ಇಲ್ಲಿ ಸಾಕಲಾಗುತ್ತಿದೆ. ಜಿಲ್ಲೆಯಲ್ಲಿ ನಿಡಸೋಶಿ ಮಠದ ಅತಿ ದೊಡ್ಡ ಗೋಶಾಲೆ ಹೊಂದಿದ್ದು, ಇಲ್ಲಿ 150ಕ್ಕೂ ಹೆಚ್ಚು ಗೋವುಗಳಿವೆ. ಮಠದ ಸುಮಾರು 50 ಎಕರೆ ಜಮೀನು ಗೋವುಗಳಿಗಾಗಿಯೇ ಮೀಸಲಿಡಲಾಗಿದೆ. ಗೋಮೂತ್ರವನ್ನು ಔಷಧಕ್ಕಾಗಿ, ಸೆಗಣಿಯನ್ನು ವಿಭೂತಿಗಾಗಿ ಬಳಸಲಾಗುತ್ತದೆ. ಮಠದ ಜಮೀನುಗಳಿಗೆ ಸೆಗಣಿಯನ್ನು ಗೊಬ್ಬರವಾಗಿ ಬಳಸಲಾಗುತ್ತಿದೆ. ಶಿವಾಪುರದ ಗೋಶಾಲೆಯಲ್ಲಿಯೂ 50ಕ್ಕೂ ಹೆಚ್ಚು ಗೋವುಗಳಿವೆ. ರೈತರು ಇಲ್ಲಿಂದ ಒಂದು ಟ್ರ್ಯಕ್ಟರ್ ಗೊಬ್ಬರ ತೆಗೆದುಕೊಂಡರೆ ಇದಕ್ಕೆ ಪ್ರತಿಯಾಗಿ ಒಂದು ಟ್ರಾÂಕ್ಟರ್ ಮೇವು ತಂದು ಕೊಡುತ್ತಾರೆ. ಪಕ್ಕದ ಹಳ್ಳ, ಹೊಳೆಯ ನೀರನ್ನು ಬಳಸಲಾಗುತ್ತಿದೆ. ಬಹುತೇಕ ಎಲ್ಲ ಮಠಗಳಲ್ಲಿರುವ ಗೋವುಗಳ ಸೆಗಣಿಯನ್ನು ವಿಭೂತಿ ಹಾಗೂ ಗೊಬ್ಬರವನ್ನಾಗಿ ಬಳಕೆ ಮಾಡಲಾಗುತ್ತಿದೆ.
ಮಠಗಳಲ್ಲಿರುವ ಎಲ್ಲ ಗೋವುಗಳ ಆರೈಕೆಯನ್ನು ಮಠಗಳ ವ್ಯವಸ್ಥಾಪನೆ ಜತೆಗೆ ಭಕ್ತರೂ ನೋಡಿಕೊಳ್ಳುತ್ತಾರೆ. ರೈತರು ತಮ್ಮ ಕೈಲಾದ ಮಟ್ಟಿಗೆ ನಿತ್ಯವೂ ಗೊಶಾಲೆಗಳಿಗೆ ಮೇವು ದಾನ ಮಾಡುತ್ತಾರೆ. ರೈತರಿಗೆ ಬೇಡವಾದ ದನ, ಎತ್ತು, ಗೋವುಗಳನ್ನು ಗೋಶಾಲೆಗೆ ತೆಗೆದುಕೊಂಡರೆ ಅವುಗಳನ್ನು ಇಲ್ಲಿ ಸ್ವೀಕರಿಸಲಾಗುತ್ತಿದೆ. ಇವುಗಳಿಗೆ ಔಷಧೋಪಚಾರ, ವೈದ್ಯರಿಂದ ಚಿಕಿತ್ಸೆ ನೀಡಿ ಗಟ್ಟಿಮುಟ್ಟಾಗಿ ಮಾಡಲಾಗುತ್ತಿದೆ. ಜತೆಗೆ ಗೋಶಾಲೆಗಳಲ್ಲಿರುವ ಗೋವುಗಳನ್ನು ಕೃಷಿಚಟುವಟಿಕೆಗಳಿಗೆ ಅಥವಾ ಸಾಕಲು ಗೋವುಗಳನ್ನು ಮಾರಾಟ ಮಾಡುವ ವ್ಯವಸ್ಥೆಯೂ ಇದೆ. ಸರ್ಕಾರದಿಂದ ಮಾನ್ಯತೆ ಪಡೆದ ಗೋಶಾಲೆಗಳಿಗೆ ಅನುದಾನವೂ ಬರುತ್ತಿದೆ. ಒಂದು ಗೋವಿಗೆ ಪ್ರತಿನಿತ್ಯ 17 ರೂ.ಗಳಂತೆ ಅನುದಾನ ಬರುತ್ತಿದೆ. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಅನುದಾನ ಬಂದಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದಾಗಿನಿಂದ ಈ ಗೋಶಾಲೆಗಳಿಗೆ ಮತ್ತಷ್ಟು ಅನುಕೂಲವಾಗಲಿದ್ದು, ಹೆಚ್ಚಿನ ಅನುದಾನದ ನಿರೀಕ್ಷೆ ಇದೆ ಎನ್ನುತ್ತಾರೆ ಶಿವಾಪುರ ಮಠದ ಶ್ರೀ ಶಿವಾನಂದ ಸ್ವಾಮೀಜಿ.
ಭೈರೋಬಾ ಕಾಂಬಳೆ