Advertisement

ಮನುಷ್ಯನ ಸರಳ ಬದುಕಿಗೆ ವಚನ ಸಾಹಿತ್ಯವೇ ಸಂಜೀವಿನಿ

06:40 PM Aug 06, 2022 | Team Udayavani |

ಗಜೇಂದ್ರಗಡ: ಬಸವಣ್ಣನವರು ವಚನಗಳ ಮೂಲಕ ನೀಡಿದ ಕಾಯಕ ಸಂಸ್ಕೃತಿಯ ಸಂದೇಶವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಆದರೆ, ನಾವು ಯಾಂತ್ರೀಕರಣದ ವ್ಯಾಮೋಹದಲ್ಲಿ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿರುವುದು ದುರಂತ. ಸಮಯದ ಸದ್ಬಳಕೆಗೆ ಮನೆಗಳಲ್ಲಿ ವಚನ ಗ್ರಂಥಗಳನ್ನಿಡಬೇಕೆಂದು ಶ್ರೀ ಅನ್ನದಾನೀಶ್ವರ ಶಾಸ್ತ್ರಿಗಳು ಹೇಳಿದರು.

Advertisement

ಪಟ್ಟಣದ ಮೈಸೂರ ಮಠದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ನಡೆಯುತ್ತಿರುವ ಶರಣ ಚರಿತಾಮೃತ ಪುರಾಣ ಪ್ರವಚನದಲ್ಲಿ ಪಾಲ್ಗೊಂಡು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯಗಳೇ ಇಂದಿನ ವಿಶ್ವವಿದ್ಯಾಲಯಗಳ ಸಂಶೋಧನೆಯ ಅಸ್ತ್ರಗಳಾಗಿವೆ. ಜೊತೆಗೆ ಸರಳ ಬದುಕಿಗೆ ಸಂಜೀವಿನಿಯಾಗಿವೆ. ಇಂತಹ ಸರಳ ಮತ್ತು ಸಮಾನತೆ ಬಿಂಬಿಸುವ ಕೋಶದ ಚಿಂತನೆ ಬಿಟ್ಟು ಸ್ವಾರ್ಥಕ್ಕಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಮಾತಿಗೆ ಮಾರು ಹೋಗುತ್ತಿರುವುದು ಬಸವ ಧರ್ಮಕ್ಕೆ ಅಪಚಾರವೆಸಗಿದಂತೆ ಎಂದರು.

ಸಮಾಜ ಲೌಕಿಕ ಶಕ್ತಿಯ ಹಿಂದೆ ಬಿದ್ದು ಜಗತ್ತಿಗೆ ಬಸವಣ್ಣನವರು ನೀಡಿದ ಕಾಯಕ ಸಂಸ್ಕೃತಿಯನ್ನು ಮರೆತಿದೆ. ಹೀಗಾಗಿ, ಭಾರತ ಯಾಂತ್ರೀ ಕರಣ ಒಪ್ಪಿಕೊಂಡ ದೇಶಗಳಿಗೆ ಮಾತ್ರ ಪ್ರಬಲ ದೇಶವಾಗಿ ಕಾಣುತ್ತಿದೆ. ವಾಸ್ತವದಲ್ಲಿ ದೇಶ ಬಲಿಷ್ಠವಾಗಿಲ್ಲ. ಏಕೆಂದರೆ ಬಸವಣ್ಣನವರು ನೀಡಿದ ಕಾಯಕ ಸಂಸ್ಕೃತಿಯನ್ನು ಒಪ್ಪಿಕೊಂಡು ಜಗತ್ತು ಸಾಗುತ್ತಿದ್ದರೆ, ನಾವು ಮಾತ್ರ ಕೆಲಸ ಮಾಡುತ್ತಿದ್ದೇವೆ. ಆದರೆ, ಸಮಾಜ ಕಾಯಕ ಮಾಡುತ್ತಿಲ್ಲ. ಕೇವಲ ಕೆಲಸ ಮಾಡುತ್ತಿದ್ದೇವೆ ಎನ್ನುವ ಸತ್ಯವನ್ನು ತಿಳಿಯಲು ವಿಫಲವಾಗಿದ್ದೇವೆ ಎಂದರು.

ಕಾಯಕದಲ್ಲಿ ಸಮಾನತೆ, ನಿಸ್ವಾರ್ಥತೆ, ದಾಸೋಹದಂತಹ ಮಹತ್ವದ ಗುಣಗಳು ಅಡಕವಾಗಿವೆ. ಆದರೆ, ಇಂದಿನ ಸಮಾಜದಲ್ಲಿ ಕೆಲಸವನ್ನು ಸ್ವಾರ್ಥ ಮತ್ತು ಅಹಂ ಗುಣಗಳನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.

Advertisement

ಬಸವಣ್ಣನವರು 12ನೇ ಶತಮಾನದಲ್ಲಿಯೇ ಕುಡಿಯುವ ನೀರು ಒಂದೇ, ಸೇವಿಸುವ ಗಾಳಿ ಒಂದೇ, ನಾವೆಲ್ಲರೂ ಸಮಾನರು. ನಮ್ಮಲ್ಲಿ ಮೇಲು, ಕೀಳೆಂಬ ನಿಜ ಉಣಬಡಿಸಿ ಸಮಾಜ ಒಗ್ಗೂಡಿಸಲು ತಮ್ಮ ವಚನಗಳ ಮೂಲಕ ಸಂದೇಶ ಸಾರಿ, ಅನುಭವ ಮಂಟಪ ಸ್ಥಾಪಿಸಿ, ಕಾಯಕ ಸಂಸ್ಕೃತಿಯ ಜಾರಿಗೆ ತಂದರು ಎಂದು ತಿಳಿಸಿದರು.

ಮನೆಯಲ್ಲಿರುವ ಪೆಡಂಭೂತದಂತಹ ವಸ್ತುಗಳನ್ನು ತೆಗೆದು ಹಾಕಿ ವಚನ ಗ್ರಂಥಗಳನ್ನು, ಭಾರತದ ಸಂಸ್ಕೃತಿಗಳ ಗ್ರಂಥಗಳನ್ನು ಇಡಬೇಕು. ಅಂದಾಗ ಮಾತ್ರ ಮನುಕುಲ ಉಳಿಯಲು ಸಾಧ್ಯ. ದೇಶದ ಸಂಸ್ಕೃತಿ ಅತಿಥಿ ದೇವೋಭವ ಎಂಬ ಪರಂಪರೆಯನ್ನು  ಬೆಳೆಸಬೇಕು ಎಂದು ಕರೆ ನೀಡಿದರು.

ವೀರಶೈವ ಲಿಂಗಾಯತ ಸಮಾಜದ ಕಾರ್ಯಾಧ್ಯಕ್ಷ ಸಿದ್ದಪ್ಪ ಬಂಡಿ, ಎಸ್‌.ಎಸ್‌. ವಾಲಿ, ಟಿ.ಎಸ್‌. ರಾಜೂರ, ಶರಣಪ್ಪ ರೇವಡಿ, ಬಸವರಾಜ ಪುರ್ತಗೇರಿ, ಐ.ಎ. ರೇವಡಿ, ಪ್ರಭು ಚವಡಿ, ಪವಾಡೆಪ್ಪ ಮ್ಯಾಗೇರಿ, ಸುಗೀರಯ್ಯ ಹಿರೇಮಠ, ಕಳಕಪ್ಪ ಮಳಗಿ, ಸಂಗಪ್ಪ ಕುಂಬಾರ, ಈರಮ್ಮ ತಾಳಿಕೋಟಿ, ದಾನಮ್ಮ ಪಟ್ಟೇದ, ಭೀಮಾಂಬಿಕಾ ನೂಲ್ವಿ, ಎಂ.ಎನ್‌. ಕಡಗದ, ಕೆ.ಜಿ. ಸಂಗಟಿ, ಮಲ್ಲಪ್ಪ ನಂದಿಹಾಳ, ಮಲ್ಲಿಕಾರ್ಜುನ್‌ ಮಲ್ಲನಗೌಡ್ರ, ಕಳಕಪ್ಪ ಸಜ್ಜನರ, ಈರಪ್ಪ ಇಂಡಿ, ಮಹಾಂತೇಶ ಮಳಗಿ, ಎಸ್‌.ಎಸ್‌. ನರೇಗಲ್ಲ, ಮಲ್ಲಯ್ಯಸ್ವಾಮಿ ಹಿರೇಮಠ, ಶಾಂತಯ್ಯ ಹಿರೇಮಠ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next