ಹೊಸದಿಲ್ಲಿ: ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (WFI) ಹೊಸ ಅಧ್ಯಕ್ಷರಾಗಿ ಗುರುವಾರ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಖ್ಯಾತ ಕುಸ್ತಿ ತಾರೆ ಸಾಕ್ಷಿ ಮಲಿಕ್ ಅವರು ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
ಹಲವಾರು ಮುಂದೂಡಿಕೆಗಳ ನಂತರ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಚುನಾವಣೆಯನ್ನು ಡಿಸೆಂಬರ್ 21 ರಂದು ಗುರುವಾರ ನಡೆಸಲಾಯಿತು. ಹೊಸದಿಲ್ಲಿಯಲ್ಲಿ ಮುಂಜಾನೆ ಮತದಾನ ನಡೆದಿದ್ದು, ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ನಡೆಯಿತು.
ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರ ಪ್ಯಾನೆಲ್ 40 ಮತಗಳಿಂದ ಗೆದ್ದರೆ ಇನ್ನೊಂದು ಪ್ಯಾನೆಲ್ 7 ಮತಗಳನ್ನು ಪಡೆದುಕೊಂಡಿತು. ವಿಜೇತರ ಘೋಷಣೆಯ ನಂತರ, ಕುಸ್ತಿಪಟು ಸಾಕ್ಷಿ ಮಲಿಕ್ ಕುಸ್ತಿಯಿಂದ ಹೊರಬರಲು ನಿರ್ಧರಿಸಿದರು.
“ನಾವು 40 ದಿನಗಳ ಕಾಲ ರಸ್ತೆಗಳಲ್ಲಿ ಮಲಗಿದ್ದೇವೆ. ಈ ವರ್ಷದ ಆರಂಭದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ನಮ್ಮನ್ನು ಬೆಂಬಲಿಸಲು ಬಂದ ನಮ್ಮ ದೇಶದ ಹಲವಾರು ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಬ್ರಿಜ್ ಭೂಷಣ್ ಸಿಂಗ್ ಅವರ ವ್ಯಾಪಾರ ಪಾಲುದಾರ ಮತ್ತು ನಿಕಟ ಸಹವರ್ತಿ ಡಬ್ಲ್ಯುಎಫ್‌ಐ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಕ್ಕೆ ನಾನು ಕುಸ್ತಿಯನ್ನು ತ್ಯಜಿಸುತ್ತಿದ್ದೇನೆ” ಎಂದು ಸಾಕ್ಷಿ ಮಲಿಕ್ ಗುರುವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
“ರಾಷ್ಟ್ರೀಯ ಶಿಬಿರಗಳನ್ನು (ಕುಸ್ತಿಗಾಗಿ) ಆಯೋಜಿಸಲಾಗುವುದು. ರಾಜಕೀಯ ಮಾಡಲು ಬಯಸುವ ಕುಸ್ತಿಪಟುಗಳು ರಾಜಕೀಯ ಮಾಡಬಹುದು, ಕುಸ್ತಿ ಮಾಡಲು ಬಯಸುವವರು ಕುಸ್ತಿ ಮಾಡುತ್ತಾರೆ” ಎಂದು ಸಂಜಯ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.