Advertisement
ಹೌದು ! ಏಳು ಮಂದಿಯನ್ನು ಬಲಿ ಪಡೆದ ಕಟ್ಟಡ ಕುಸಿದ ಘಟನೆಯಲ್ಲಿ ಮೂರು ವರ್ಷದ ಕಂದಮ್ಮ ಸಂಜನಾ ಪವಾಡ ಸದೃಶವಾಗಿ ಬದುಕಿದ್ದಾಳೆ. ಅಗ್ನಿಶಾಮಕ ಹಾಗೂ ಎನ್‌ಡಿಆರ್‌ಎಫ್ ರಕ್ಷಣಾ ತಂಡ ಆ ಕಂದಮ್ಮನ್ನು ರಕ್ಷಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Related Articles
Advertisement
ನಂತರ ಇಡೀ ರಕ್ಷಣಾ ತಂಡ ಮಗುವಿನ ರಕ್ಷಣೆಯಲ್ಲಿ ತೊಡಗಿತು. ಕೊನೆಗೆ ಸತತ 40 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ 10.40ರ ಸುಮಾರಿಗೆ ಮಗುವಿಗೆ ಯಾವುದೇ ರೀತಿಯ ತೊಂದರೆಯಾಗದ್ದಂತೆ ಸುರಕ್ಷಿತವಾಗಿ ರಕ್ಷಿಸಿದರು. ಮಲಗಿದ್ದ ಸಂಜನಾಳ ಮೇಲೆ ಲಂಬವಾಗಿ ಅಲ್ಮೆರಾ ಬಿದಿದ್ದೆ. ಇದರ ಮೇಲೆ ಗೋಡೆ ಬಿದ್ದಿತ್ತು.
ಹೀಗಾಗಿ ಸಂಜಾನಾಳಿಗೆ ಹೆಚ್ಚಿನ ಹಾನಿ ಆಗಲಿಲ್ಲ. ಆದರೆ, ಸಿಲಿಂಡರ್ ಸ್ಫೋಟದಿಂದ ಆಕೆಯ ಮುಖ, ಕೈ ಮತ್ತು ಕಾಲುಗಳು ಶೇ.60ರಷ್ಟು ಸುಟ್ಟಿದೆ. ಇನ್ನು ಅಡುಗೆ ಮನೆಯಲ್ಲಿ ಸಿಲುಕಿದ್ದ ಈಕೆಯ ತಾಯಿ ಅಶ್ವಿನಿಯ ಮೃತ ದೇಹವನ್ನು ಹೊರ ತೆಗೆಯಲಾಯಿತು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.
ಕಂಬನಿ ಮಿಡಿದ ಸ್ಥಳೀಯರು: ಇತ್ತ ರಕ್ಷಿಸಿದ ಸಂಜಾನಾಳನ್ನು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಮ್ಮ ತೊಳಿನಲ್ಲಿ ಕರೆ ತರುವಾಗ ಕಂದಮ್ಮ ಸ್ಥಿತಿ ಕಂಡು ಅವರೇ ಭಾವುಕರಾದರು. ಮತ್ತೂಂದೆಡೆ ನೆರೆದಿದ್ದ ಸ್ಥಳೀಯರ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತಿತ್ತು. ಜತೆಗೆ ಸ್ಥಳೀಯರು ಶೆಳ್ಳೆ ಹೊಡೆದು ರಕ್ಷಣಾ ಸಿಬ್ಬಂದಿ ಕಾರ್ಯವನ್ನು ಶ್ಲಾ ಸಿದರು.
ಕೂಡಲೇ ಮಗುವಿಗೆ ಆ್ಯಂಬುಲೆನ್ಸ್‌ನಲ್ಲಿ ಆಮ್ಲಜನಕ ನೀಡಿ ಚಿಕಿತ್ಸೆ ನೀಡಿದರು. ಇನ್ನು ಅವಘಡ ಕುರಿತು ವಿಷಯ ತಿಳಿಯುತ್ತಿದ್ದಂತೆ ಮೃತ ಸಂಬಂಧಿಕರು, ಆಪ್ತರು ಘಟನಾ ಸ್ಥಳದ ಬಳಿ ಆಗಮಿಸಿದರು. ಮೃತ ದೇಹಗಳನ್ನು ಕಂಡು ಗೋಳಾಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಅಗ್ನಿಶಾಮಕ ದಳದ ಉಪ ಆಯುಕ್ತ ವರದರಾಜನ್, ಸುಟ್ಟ ಗಾಯಗಳಿಂದ ಆಕೆ ನರಳುತ್ತಿದ್ದಳು. ಈ ಮಗುವಿನ ಸ್ಥಿತಿಯನ್ನು ನನ್ನ ಕೈಯಲ್ಲಿ ನೋಡಲು ಸಾಧ್ಯವಾಗಲಿಲ್ಲ.
ಆದರೆ, ಆಕೆಯನ್ನು ಆ್ಯಂಬುಲೆನ್ಸ್‌ನಲ್ಲಿ ಕೂರಿಸಿದಾಗ, “ಏನು ಆಗಿಲ್ಲ ಅಳಬೇಡ ಮಗು’ ಎಂದು ಹೇಳುವಾಗ ನೋವಾಯಿತು. ಆ ಮಗು ಬೇಗ ಗುಣಮುಖವಾಗಲಿ ಎಂದು ಹಾರೈಸುತ್ತೇನೆ. ಜತೆಗೆ ಸ್ಥಳೀಯರು ಹೇಳುವ ಪ್ರಕಾರ, ಸಂಜನಾ ಪೋಷಕರು ದೀಪಾವಳಿ ಹಬ್ಬಗೆ ಆಕೆಯ ತಾತನ ಮನೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ ಎಂದರು.
ಮದುವೆ ನಿಶ್ಚಯವಾಗಿತ್ತು: ಘಟನೆಯಲ್ಲಿ ಮೃತ ಪಟ್ಟ ಪವನ್ ಕಲ್ಯಾಣ್‌ಗೆ ಮದುವೆ ನಿಶ್ಚಯವಾಗಿತ್ತು. ಈ ಕುರಿತು ಚರ್ಚಿಸಲು ಮಲಾಶ್ರೀ ಮತ್ತು ಪ್ರಸಾದ್ ಭಾನುವಾರ ರಾತ್ರಿ ಬಂದಿದ್ದರು. ಸೋಮವಾರ ಬೆಳಗ್ಗೆ ಮಾತುಕತೆ ನಡೆಸಿ ಹೋಗಲು ನಿರ್ಧರಿಸಿದ್ದರು. ಈ ಮಧ್ಯೆ ಈ ರೀತಿ ದುರ್ಘಟನೆ ನಡೆದಿದೆ.
ರಕ್ಷಣಾ ಸಿಬ್ಬಂದಿಗೆ ಗಾಯ: ಇನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ 50ಕ್ಕೂ ಅಧಿಕ ಮಂದಿಯ ಪೈಕಿ ಕಾರ್ಯಾಚರಣೆ ವೇಳೆ ಮೂವರು ಗಾಯಗೊಂಡಿದ್ದರು. ಚಿಕ್ಕಚೂಡಯ್ಯ (32), ಸುಭಾನ್ ಖಾನ್ (34),ಸುರೇಶ್ ರಾವ್ (45), ಕೃಷ್ಣಪ್ಪ (52) ಗಾಯಗೊಂಡಿದ್ದರು. ಮನೆ ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರನ್ನು ಮೊದಲಿಗೆ ರಕ್ಷಿಸಲಾಯಿತು. ನಂತರ ಮಗು ರಕ್ಷಿಸುವ ವೇಳೆ ಆ ಭರದಲ್ಲಿ ಮುಂದಕ್ಕೆ ನುಗ್ಗಿದಾಗ ಅರ್ಥ ಕುಸಿದಿದ್ದ ಬೀಮ್ ಸಂಪೂರ್ಣವಾಗಿ ಕುಸಿದರಿಂದ ತಂಡದ ನಾಲ್ಕು ಮಂದಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
* ಮೋಹನ್ ಭದ್ರಾವತಿ