Advertisement

ರೈತ ಸಂಘದವರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ

12:57 PM Mar 07, 2017 | Team Udayavani |

ದಾವಣಗೆರೆ: ಬಗರ್‌ ಹುಕುಂ ಹಕ್ಕುಪತ್ರ ನೀಡುವ ಸಂಬಂಧ ತಹಶೀಲ್ದಾರ್‌ ಕಚೇರಿಯಲ್ಲಿ ಪ್ರತೀ ವಾರ ಸಭೆ ನಡೆಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಜಿಪಂ ಕಚೇರಿ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಗ್ರಹಿಸಿದರು.ಸುಮಾರು ಅರ್ಧ ತಾಸು ಹೆದ್ದಾರಿ ತಡೆ ನಡೆಸಿದ ಕಾರ್ಯಕರ್ತರು ತಕ್ಷಣ ಜಿಲ್ಲಾಡಳಿತ ತಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. 

Advertisement

ಕಾರ್ಯಕರ್ತರನ್ನು ಉದ್ದೇಶಿಸಿ,ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌, ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ, ಹಲವು ವರ್ಷಗಳಿಂದ ಹೋರಾಟನಡೆಯುತ್ತಿದೆ. ಆದರೆ, ಇದುವರೆಗೆ ನಮ್ಮ ಬೇಡಿಕೆ ಈಡೇರಿಲ್ಲ. ಇದೀಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಾಲ್ಲೂಕು ಮಟ್ಟದಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಿರುವುದಾಗಿ ಹೇಳುತ್ತಾರೆ.

ಆದರೆ,  ತಹಶೀಲ್ದಾರರು ಸರ್ಕಾರದ ಆದೇಶ ಪಾಲಿಸುತ್ತಿಲ್ಲ ಎಂದರು. ಇನ್ನು ಮುಂದಾದರು ತಹಶೀಲ್ದಾರರು, ಉಪ ತಹಶೀಲ್ದಾರರು ಸರ್ಕಾರದ ಆದೇಶ ಪಾಲಿಸಬೇಕು. ಪ್ರತೀ ಶನಿವಾರ ತಹಶೀಲ್ದಾರ್‌ ಕಚೇರಿಯಲ್ಲಿ ಬಗರ್‌ ಹುಕುಂ ಸಾಗುವಳಿದಾರರ ಅರ್ಜಿ ವಿಲೇವಾರಿ ಮಾಡಬೇಕು. ಉಪ ತಹಶೀಲ್ದಾರರು ಅರಣ್ಯ ಭೂಮಿ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಬೇಕು. ಸಭೆಗೆ ರೈತ ಮುಖಂಡರು, ಸ್ಥಳೀಯರನ್ನು ಆಹ್ವಾನಿಸಬೇಕು ಎಂದು ಅವರು ಆಗ್ರಹಿಸಿದರು.
 
ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ, ಸಮಸ್ಯೆಗೆ ಪರಿಹಾರ ಮಾರ್ಗ ಸೂಚಿಸದೇ ಹೊರತು ನಾವು ರಸ್ತೆ ತಡೆ ತೆರವುಗೊಳಿಸುವುದಿಲ್ಲ ಎಂಬುದಾಗಿ ಹೋರಾಟಗಾರರು ಪಟ್ಟು ಹಿಡಿದರು. ಕೊನೆಗೆ ಸ್ಥಳಕ್ಕೆ ಆಗಮಿಸಿದ ಉಪ ಅರಣ್ಯ  ಸಂರಕ್ಷಣಾಧಿಕಾರಿಗಳು, ಈ ಕುರಿತು ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ನಂತರ ರಸ್ತೆ ತಡೆ ಕೈಬಿಡಲಾಯಿತು. 

ಸಂಘಟನೆಯ ಎಲೇದಹಳ್ಳಿ ರವಿ,  ಆಲೂರುಪರುಶುರಾಮ, ಪಣಿಯಪ್ಪರ ಬಸವರಾಜ ದ್ಯಾಮಜ್ಜಯ ಹನುಮಂತ, ಹರಕೇರಿ ನಾಗರಾಜ, ಗೋಣಿಹಳ್ಳಿ ಸಿದ್ಧವೀರಪ್ಪ, ಅನ್ನಪೂರ್ಣ ಶರಣಮ್ಮ, ಹೀರಾನಾಯ್ಕ ಹೋರಾಟದ ನೇತೃತ್ವ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next