Advertisement

ಕೊಪ್ಪಳದಲ್ಲಿ ಮತ್ತೆ ಕರಡಿ ಕುಣಿತ; ನಡೆಯದ ಹಿಟ್ನಾಳ್‌ ಹವಾ

04:43 AM May 24, 2019 | mahesh |

ಕೊಪ್ಪಳ: ಬಿಸಿಲನಾಡು ಕೊಪ್ಪಳ ಲೋಕಸಭಾ ಕ್ಷೇತ್ರ ಮೂರನೇ ಅವಧಿಗೂ ಕೇಸರಿಮಯವಾಗಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಕುಣಿತದ ನಾಗಾಲೋಟ ಮುಂದುವರಿದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕ್ಷೇತ್ರವಾಗಿದ್ದ ಕೊಪ್ಪಳದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಸೋಲನುಭವಿಸಿದ್ದಾರೆ. ಸಂಗಣ್ಣ ಕರಡಿ ಟಿಕೆಟ್‌ ಪಡೆಯಲು ಹೈಕಮಾಂಡ್‌ ಮಟ್ಟದಲ್ಲಿ ಭಾರಿ ಪ್ರಯತ್ನ ನಡೆಸಿ ಕೊನೆಯ ಹಂತಕ್ಕೆ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Advertisement

ಟಿಕೆಟ್‌ ಸಿಗುತ್ತಿದ್ದಂತೆ ತಮ್ಮ ಪಡೆಯೊಂದಿಗೆ ಎಂಟೂ
ವಿಧಾನಸಭಾ ಕ್ಷೇತ್ರದಲ್ಲಿ ಟೆಂಪಲ್‌ ರನ್‌ ನಡೆಸಿ, ಮಠಾಧಿಧೀಶರನ್ನು ಭೇಟಿ ಮಾಡಿದ್ದರು. ಕರಡಿಗೆ ಮೋದಿಯ ಅಲೆ, ಯುವಕರ ದೇಶಭಕ್ತಿಯೇ ದೊಡ್ಡ ಶಕ್ತಿಯಾಗಿ ಪರಿಣಮಿಸಿತು. ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಸಿದ್ದರಾಮಯ್ಯ ಬೆನ್ನು ಬಿದ್ದು, ನಾನಾ ಪ್ರಯತ್ನ ನಡೆಸಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕೊನೆ ಗಳಿಗೆಯಲ್ಲಿ ಕೈ ಮುಖಂಡರಲ್ಲಿ ಟಿಕೆಟ್‌ಗೆ ನಡೆದ ಭಿನ್ನಮತ ಹಿಟ್ನಾಳ ಸೋಲಿಗೆ ಕಾರಣವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

ಹಿಟ್ನಾಳ ಕುಟುಂಬ ರಾಜಕಾರಣವೂ ಸೋಲಿಗೆ ಕಾರಣವಾಗಿದೆ ಎನ್ನುವ ವಿಶ್ಲೇಷಣೆ ಕ್ಷೇತ್ರದಲ್ಲಿ ನಡೆದಿದೆ.
ಒಟ್ಟಿನಲ್ಲಿ 2009ರಿಂದ ಬಿಜೆಪಿಯ ಗೆಲುವಿನ ನಾಗಾಲೋಟ ಮುಂದುವರೆದಿದ್ದು ಮೂರನೇ ಅವಧಿಗೆ ಕೊಪ್ಪಳ ಕ್ಷೇತ್ರ ಮತ್ತೆ ಕಮಲದ ಹಿಡಿತದಲ್ಲಿದೆ. ಪ್ರಧಾನಿ ಮೋದಿ ಕ್ಷೇತ್ರಕ್ಕೆ ಬಂದು ಹೋದ ಮೇಲಂತೂ ಬಿಜೆಪಿ ಅಲೆ ಜೋರಾಗಿದ್ದು, ಭಾರಿ ಪೈಪೋಟಿ ನಡೆಸಿದ್ದ ಕಾಂಗ್ರೆಸ್‌ ಹಿನ್ನಡೆ ಸಾಧಿಸಲು ಮೋದಿ
ಸಮಾವೇಶ ಕೂಡ ಪ್ರಬಲ ಕಾರಣವಾಯಿತು. ರಾಜಶೇಖರ ಹಿಟ್ನಾಳ ಎಂಟೂ ಕ್ಷೇತ್ರಗಳ ಮೇಲೆ ಭಾರಿ ನಿರೀಕ್ಷೆಯನ್ನಿಟ್ಟಿದ್ದರು. ಆದರೆ ಸಿರಗುಪ್ಪಾ ಒಂದೇ ಕ್ಷೇತ್ರದಲ್ಲಿ ಮಾತ್ರ 12 ಸಾವಿರ ಮತ ಮುನ್ನಡೆ ಪಡೆದಿದ್ದು, ಬಿಟ್ಟರೆ ಮತ್ಯಾವ ಕ್ಷೇತ್ರದಲ್ಲೂ ಮುನ್ನಡೆ ಸಿಗಲೇ ಇಲ್ಲ. ಅಚ್ಚರಿಯಂದರೆ ಸಹೋದರ ರಾಘವೇಂದ್ರ ಹಿಟ್ನಾಳ ಪ್ರತಿನಿಧಿ ಸುವ ಕೊಪ್ಪಳ ಕ್ಷೇತ್ರದಲ್ಲೇ 11,678 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಸಿಂಧನೂರು, ಕುಷ್ಟಗಿ, ಗಂಗಾವತಿ ಕ್ಷೇತ್ರಗಳ ಮೇಲೆ ಹೆಚ್ಚಿನ ನಿರೀಕ್ಷೆಯಿಟ್ಟಿದ್ದ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕ ವೆಂಕಟರಾವ್‌ ನಾಡಗೌಡ ಇದ್ದರೂ ಸಹಿತ ಕಾಂಗ್ರೆಸ್‌ಗೆ ಬಲ ನೀಡಿಲ್ಲ. ಮೈತ್ರಿ ಧರ್ಮದ ಲೆಕ್ಕಾಚಾರ ಕೈ ಹಿಡಿದಿಲ್ಲ. ಸಿಂಧನೂರು ಕ್ಷೇತ್ರದಲ್ಲೂ ಕಾಂಗ್ರೆಸ್‌ 80 ಮತಗಳ ಹಿನ್ನಡೆ ಅನುಭವಿಸಿದೆ. ಉಳಿದಂತೆ ಏಳೂ ಕ್ಷೇತ್ರಗಳು ಕಾಂಗ್ರೆಸ್‌ಗೆ ಕೈ ಕೊಟ್ಟಿವೆ.

ಮೋದಿ ಅಲೆ, ಯುವಕರ ದೇಶಾಭಿಮಾನ, ನಾನು ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿದ್ದೇನೆ.
ಸಂಗಣ್ಣ ಕರಡಿ, ವಿಜೇತ ಬಿಜೆಪಿ ಅಭ್ಯರ್ಥಿ

ನೂತನ ಸಂಸದರಿಗೆ ಅಭಿನಂದನೆ. ಕ್ಷೇತ್ರದಲ್ಲಿ ಮತದಾರರ ತೀರ್ಪಿಗೆ ನಾನು ತಲೆ ಬಾಗುತ್ತೇನೆ. ಸೋಲಿನ ಕುರಿತು ಪರಾಮರ್ಶೆ ಮಾಡಬೇಕಿದೆ. ಮತದಾರರು ಕೈ ಹಿಡಿಯುವ ವಿಶ್ವಾಸವಿತ್ತು.
ರಾಜಶೇಖರ ಹಿಟ್ನಾಳ,, ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ

Advertisement

Advertisement

Udayavani is now on Telegram. Click here to join our channel and stay updated with the latest news.

Next