ಹಾಸ್ಯ ಕಲಾವಿದನಾಗಿ ಪ್ರೇಕ್ಷಕರನ್ನು ರಂಜಿಸಿದ್ದ ನಟ ಸಂಗಮೇಶ್ ಉಪಾಸೆ, ಈ ಬಾರಿ ಗಂಭೀರ ವಿಷಯವೊಂದನ್ನು ಇಟ್ಟುಕೊಂಡು, ಮನಮುಟ್ಟುವ ಪಾತ್ರವೊಂದರ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಸಂಗಮೇಶ್ ಉಪಾಸೆ ಸದ್ಯ “ರಂಜಾ ನ್’ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಈಗಾಗಲೇ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿರುವ “ರಂಜಾನ್’ ಇದೇ ಏ. 21ಕ್ಕೆ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ.
ಇನ್ನು ಬಹುಕಾಲದ ನಂತರ ಗಂಭೀರ ಚಿತ್ರ ಮತ್ತು ಪಾತ್ರದ ಮೂಲಕ ಬರುತ್ತಿರುವ ಸಂಗಮೇಶ್ ಉಪಾಸೆ, ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ. “ಈ ಸಿನಿಮಾದ ಹೆಸರು “ರಂಜಾನ್’ ಅಂತಿದ್ದರೂ, ಇದು ಯಾವುದೇ ಧರ್ಮದ ವಿಷಯಕ್ಕೆ ಸೀಮಿತವಾದ ಸಿನಿಮಾವಲ್ಲ. “ರಂಜಾನ್’ ಎಂಬ ಹೆಸರಿನ ಬಡ ಮುಸ್ಲಿಂ ರೈತನೊಬ್ಬ ಹಸಿವಿನ ವಿರುದ್ಧ ಮತ್ತು ಭೂಮಿಯನ್ನು ಕಬಳಿಸಲು ಹೊರಟ ಸರ್ಕಾರದ ವಿರುದ್ಧ ಹೇಗೆ ಹೋರಾಡುತ್ತಾನೆ ಎಂಬುದೇ “ರಂಜಾನ್’ ಸಿನಿಮಾದ ಕಥೆಯ ಒಂದು ಎಳೆ. ಈ ಸಿನಿಮಾದಲ್ಲಿ “ರಂಜಾನ್’ ಎಂಬ ಬಡ ಮುಸ್ಲಿಂ ರೈತನ ಪಾತ್ರದಲ್ಲಿ ನಾನು ಅಭಿನಯಿಸಿದ್ದೇನೆ. ತನ್ನದೇ ಆದ ಅಂಗೈ ಅಗಲದ ಭೂಮಿಯನ್ನು ನಂಬಿ ಪುಟ್ಟ ಸಂಸಾರ ಕಟ್ಟಿಕೊಂಡು, ಬದುಕು ನಡೆಸಲು ಹರಸಾಹಸ ಪಡುತ್ತಿರುವ “ರಂಜಾನ್’ನ ಬದುಕಿನಲ್ಲಿ ಏನೇನು ನಡೆಯುತ್ತದೆ ಎನ್ನುವುದರ ಸುತ್ತ ಇಡೀ ಸಿನಿಮಾ ಸಾಗುತ್ತದೆ’ ಎಂದು ತಮ್ಮ ಚಿತ್ರ ಮತ್ತು ಪಾತ್ರ ಪರಿಚಯ ಮಾಡಿಕೊಡುತ್ತಾರೆ ಸಂಗಮೇಶ್.
“ಫಕೀರ್ ಮಹಮ್ಮದ್ ಕಟಾ³ಡಿ ಅವರ “ನೋಂಬು’ ಕಥೆ ಆಧಾರಿಸಿ, ಈ ಸಿನಿಮಾ ಮಾಡಲಾಗಿದೆ. ಹಸಿವು, ಬಡತನ, ಹೋರಾಟ, ಶಿಕ್ಷಣ, ಆರೋಗ್ಯ, ರೈತರ ಸಮಸ್ಯೆ ಹೀಗೆ ಇಂದಿನ ಸಮಕಾಲಿನ ಸಮಾಜದಲ್ಲಿ ಕಾಣುವ ಹಲವು ಅಂಶಗಳು ಈ ಸಿನಿಮಾದಲ್ಲಿವೆ. ಮಾನವೀಯ ಮೌಲ್ಯಗಳು, ದಾರ್ಮಿಕ ಸಾಮರಸ್ಯ ಮತ್ತು ಸಾಮಾಜಿಕ ಕಳಕಳಿಯ ವಿಷಯ ಗಳನ್ನು ಇಟ್ಟುಕೊಂಡು ಮಾಡಲಾದ ಈ ಸಿನಿಮಾ ಎಲ್ಲ ವರ್ಗದವರೂ ನೋಡುವಂತಿದೆ’ ಎಂಬುದು ಸಂಗಮೇಶ್ ಮಾತು.
ಇನ್ನು “ರಂಜಾನ್’ ಸಿನಿಮಾದಲ್ಲಿ ಸಂಗಮೇಶ್ ಉಪಾಸೆ ಅವರೊಂದಿಗೆ ಪ್ರೇಮಾವತಿ ಉಪಾಸೆ, ಬೇಬಿ ಈಶಾನಿ ಉಪಾಸೆ, ಮಾ. ವೇದಿಕ್, ಭಾಸ್ಕರ್, ಮಾ.ನೀಲ್, ಜಯಲಕ್ಷ್ಮೀ ಮಧುರಾಜ್, ಮಂಜುನಾಥ್ ಕರುವಿನಕಟ್ಟೆ, ಆರ್ಯನ್, ಆದ್ಯತಾ ಭಟ್ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಕಲಾವಿದರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಪಂಚಾಕ್ಷರಿ ಸಿ. ನಿರ್ದೇಶನದಲ್ಲಿ ಮೂಡಿ ಬಂದಿರುವ “ರಂಜಾನ್’ ಸಿನಿಮಾವನ್ನು ಮಡಿವಾಳಪ್ಪ ಎಂ. ಗೋಗಿ ನಿರ್ಮಾಣ ಮಾಡಿದ್ದಾರೆ. ಮಂಗಳೂರು, ಉಡುಪಿ, ಕಟಾಡಿ, ಗುಲ್ವಾಡಿ, ಕುಂದಾಪುರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ