ಚಿತ್ರದುರ್ಗ: ಇತ್ತೀಚೆಗೆ ಸಾಹಿತ್ಯದ ಗಂಧ ಗಾಳಿ ಇಲ್ಲದವರು ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದು, ಇದರಿಂದ ಪರಿಷತ್ತು ಅವನತಿಯತ್ತ ಸಾಗಲಿದೆ ಎಂದು ಸ್ಪರ್ಧಾಕಾಂಕ್ಷಿ ಸಂಗಮೇಶ ಬಾದವಾಡಗಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 9 ರಂದು ಸಾಹಿತ್ಯ ಪರಷತ್ತಿಗೆ ಚುನಾವಣೆ ನಿಗ ಯಾಗಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಸಾಹಿತಿಯಾದ ನಾನು ಕಳೆದ ಸಲಸ್ಪರ್ಧೆ ಮಾಡಿದ್ದೆ. ಆದರೆ, ಗೆಲುವು ಸಾಧ್ಯವಾಗಲಿಲ್ಲ. ಆದರೆ ಈಗ ಮತ್ತೂಮ್ಮೆ ಸ್ಪರ್ಧೆಗೆ ಅಣಿಯಾಗಿದ್ದು, ಮತದಾರರು ಈ ಸಲ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಇತರೆ ಸಾರ್ವತ್ರಿಕ ಚುನಾವಣೆಯಂತೆ ಅಲ್ಲ. ಇದು ಬುದ್ದಿವಂತರ ಚುನಾವಣೆ. ಇಲ್ಲಿ ಸ್ಪರ್ಧೆ ಮಾಡುವವರು ಸಾಹಿತಿ, ಸಾಹಿತ್ಯಾಸಕ್ತಾಗಿರಬೇಕು. ಈ ಸಾಲಿನವರನ್ನು ಬಿಟ್ಟು ಬೇರೆಯವರು ಆಯ್ಕೆಯಾದರೆ ಸಾಹಿತ್ಯ ಕ್ಷೇತ್ರ ನಿಂತ ನೀರಾಗುತ್ತದೆ ಎಂದು ವಿಷಾದಿಸಿದರು.
ಇದನ್ನೂ ಓದಿ :ಜೀತ-ಮಲ ಹೊರುವ ಪದ್ಧತಿ ಸಮಾಜಕ್ಕೆ ಕಳಂಕ
ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಖುದ್ದು ನಾಲ್ಕು ಸೂತ್ರಗಳನ್ನು ರೂಪಿಸಿಕೊಂಡಿದ್ದೇನೆ. ಇದರಲ್ಲಿ ಪಾಲುದಾರಿಕೆ, ಸಾಹಿತ್ಯ ಒಲವಿಗೆ ಆದ್ಯತೆ, ಪರಿಷತ್ತಿನ ನಂಟು ಹಾಗೂ ಅನುಕಂಪ. ಈ ಅಂಶಗಳ ಮೇಲೆ ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ತೀರ್ಮಾನಿಸಿದ್ದೇನೆ ಎಂದರು.
ಪರಿಷತ್ತಿಗೆ ರಾಜ್ಯದಲ್ಲಿ 3.29 ಲಕ್ಷ ಮತದಾರರಿದ್ದು ಇದರಲ್ಲಿ 3.09 ಲಕ್ಷ ಮತದಾರರು ಮಾತ್ರ ಮತದಾನದ ಹಕ್ಕು ಪಡೆದಿದ್ದಾರೆ. ಚುನಾವಣೆ ಎನ್ನುವುದು ಆರ್ಥಿಕವಾಗಿ ಹೊರೆಯಾಗುತ್ತದೆ ಮುಂದಿನ ದಿನದಲ್ಲಿ ನಿಜವಾದ ಸಾಹಿತಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾರದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದನ್ನು ತಪ್ಪಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ, ಕೆ.ಎ.ಕಂದಗಲ್, ಭೀಮಣ್ಣ ಭಾಗವಹಿಸಿದ್ದರು.