Advertisement

ಸಾಣೇಹಳ್ಳಿ ಶ್ರೀ ಮಠ ಬಿಡ್ತಾರಾ?: ರಘು

05:05 PM Nov 24, 2018 | |

ಚಿತ್ರದುರ್ಗ: ಉಪ ಮುಖ್ಯಮಂತ್ರಿ ಡಾ|ಜಿ. ಪರಮೇಶ್ವರ್‌ ಸಾಣೇಹಳ್ಳಿ ಮಠದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವೇಳೆ ಭದ್ರತಾ ಸಿಬ್ಬಂದಿ ಊಟದ ಪರೀಕ್ಷೆ ನಡೆಸಿರುವ ಬಗ್ಗೆ ಉಂಟಾದ ವಾದ ವಿವಾದ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ಬಗ್ಗೆ ಮಾತನಾಡಿದ್ದ ವಿಧಾನ ಪರಿಷತ್‌ ಸದಸ್ಯ ರಘು ಆಚಾರ್‌ ಮತ್ತೂಮ್ಮೆ ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಗೇ ಸವಾಲು ಹಾಕಿದ್ದಾರೆ.

Advertisement

ಶುಕ್ರವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಘು ಆಚಾರ್‌, “ನಾನು ವಿಧಾನ ಪರಿಷತ್‌ ಸ್ಥಾನಕ್ಕೆ ಈಗಲೇ ರಾಜೀನಾಮೆ ಸಲ್ಲಿಸಿ ರಾಜಕೀಯ ನಿವೃತ್ತಿ ಹೊಂದಿ ಈಚೆಗೆ ಬರುತ್ತೇನೆ. ಪಂಡಿತಾರಾಧ್ಯರು ಮಠ ಬಿಟ್ಟು ಬರುತ್ತಾರಾ’ ಎಂದು ಪ್ರಶ್ನಿಸಿದರು.

ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ನನ್ನನ್ನು ಮೂಲಭೂತವಾದಿ ಎಂದು ಕರೆದಿದ್ದಾರೆ. ನನಗೆ ಮೂಲಭೂತವಾದಿ, ಸಮಾಜವಾದಿ ಎಂದರೆ ಗೊತ್ತಿಲ್ಲ. ನಾನು 10ನೇ ತರಗತಿ ಓದಿದ್ದೇನೆ. ನನಗೆ ಅವು ಅರ್ಥ ವಾಗುವುದಿಲ್ಲ. ನನಗೆ ಅರ್ಥವಾಗಿರುವುದು ಎರಡೇ, ಒಂದು ಒಳ್ಳೆಯದು, ಇನ್ನೊಂದು ಕೆಟ್ಟದ್ದು ಎಂದರು.
 
ನಾನು ಯಾವುದೇ ಜಾತಿಯನ್ನು ನಂಬಲ್ಲ. ಡಿಸಿಎಂ ಅವರಿಗೆ ಸ್ವಾಮೀಜಿಗಳು ಅವಮಾನ ಮಾಡಿದ್ದು ಸರಿನಾ? ಶಿಷ್ಟಾಚಾರ ಬೇಡ ಎಂದರೆ ಜನಪ್ರತಿನಿಧಿಗಳನ್ನು ಯಾಕೆ ಆಹ್ವಾನಿಸಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ. ನಾನೇಕೆ ಹೆದರಬೇಕು. ನಾನು ಸ್ವಾಭಿಮಾನ ಇಟ್ಟುಕೊಂಡು ಬಂದಿದ್ದೇನೆ.

ಸ್ವಾಮೀಜಿ ಎಂದರೆ ಎಲ್ಲ ಜಾತಿಗೂ, ಭಕ್ತರಿಗೂ ಸ್ವಾಮೀಜಿ ತಾನೇ. ನಾನು ಯಾವುದೇ ಸ್ವಾರ್ಥ ಇಟ್ಟುಕೊಂಡಿಲ್ಲ. ಸ್ವಾಮೀಜಿಗಳು ಎಲೆಕ್ಷನ್‌ ಮಾಡುತ್ತಾರಾ ಮಾಡಲಿ, ನಾನೂ ಎಲೆಕ್ಷನ್‌ ಮಾಡುತ್ತೇನೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಷ್ಟಾಚಾರ ಇದೆ. ಶಿಷ್ಟಾಚಾರ ಗೊತ್ತಿಲ್ಲದಿದ್ದರೆ ರಾಜಕಾರಣಿಗಳನ್ನು ಮಠಕ್ಕೆ ಕರೆಯಬೇಡಿ. ನನ್ನ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಯೋಚಿಸಬೇಕು. ನಾನು 11 ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಎಂಎಲ್‌ಸಿ. ನಾನು ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದವನು. ನಾನು ತಪ್ಪು ಮಾಡಿದ್ದರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ.
ನೀವು ಮಠ ಬಿಟ್ಟು ಹೊರಬರುತ್ತೀರಾ ಎಂದು ಸಾಣೇಹಳ್ಳಿ ಶ್ರೀಗಳಿಗೆ ಸವಾಲು ಹಾಕಿದರು.

Advertisement

ನೀವು ಚುನಾವಣೆಯಲ್ಲಿ ನನ್ನ ಸೋಲಿಸಲು ಮುಂದೆ ಬಂದರೆ ನಾನು ಮತ್ತೆ ಸ್ಪರ್ಧಿಸಿ ಗೆದ್ದು ತೋರಿಸುತ್ತೇನೆ. ಸ್ವಾಮೀಜಿಗಳು, ಎಂಎಲ್‌ಎಗಳು ಮೇಲಿಂದ ಬಂದಿರೋದಿಲ್ಲ. ಎಲ್ಲರೂ ಸಮಾನರು ಅಂತಾದರೆ ಸ್ವಾಮೀಜಿಗಳು ಕಾಲಿಗೆ ಯಾಕೆ ಬೀಳಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಇಂದು ಮಠ, ಮಾನ್ಯಗಳು ಇಲ್ಲದಿದ್ದರೆ ರಾಜ್ಯದ ಜನ ಇಷ್ಟು ನೆಮ್ಮದಿಯಿಂದ ಬದುಕುತ್ತಿರಲಿಲ್ಲ.

ನಾನೂ ಕೂಡಾ ಸಾಣೇಹಳ್ಳಿ ಶ್ರೀಗಳ ಭಕ್ತ. ಚಿತ್ರದುರ್ಗ ಎಲ್ಲ ಸಮುದಾಯದ ಸ್ವಾಮೀಜಿಗಳಿರುವ ಜಿಲ್ಲೆ. ಇಲ್ಲಿರುವ ಸ್ವಾಮೀಜಿಗಳೆಲ್ಲ ಒಳ್ಳೆಯವರು. ಹೀಗಾಗಿ ಜನ ನೆಮ್ಮದಿಯಿಂದ ಇದ್ದೇವೆ. ಯಾರ ಬಗ್ಗೆಯೂ ಈ ರೀತಿ ಮಾತನಾಡಬೇಡಿ ಎಂದು ಸ್ವಾಮೀಜಿಗಳಿಗೆ ನಾನು ವಿನಮ್ರ ಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ಹೇಳಿದರು. 

ಫೋನ್‌ ಕದ್ದಾಲಿಕೆ ಗೊತ್ತಿಲ್ಲ
ಟೆಲಿಪೋನ್‌ ಕದ್ದಾಲಿಕೆ ವಿಚಾರ ನನಗೆ ಗೊತ್ತಿಲ್ಲ. ಆ ಬಗ್ಗೆ ಅಶೋಕ್‌ ಅವರನ್ನೇ ಕೇಳಬೇಕು. ಕದ್ದಾಲಿಕೆ ಯಾವ ರೀತಿ ಆಗುತ್ತೆ ಅನ್ನೋದು ನನಗೇನು ಗೊತ್ತಾಗುತ್ತೆ. ಟೆಕ್ನಾಲಜಿ ಚೆನ್ನಾಗಿದೆ. ಹೈದರಾಬಾದ್‌ಗೆ ನಾನೇ ಶಾಸಕರನ್ನು ಕರೆದುಕೊಂಡು ಹೋಗಿದ್ದೆ. ಒಬ್ಬ ಗ್ರಾಮ ಪಂಚಾಯತಿ ಸದಸ್ಯರನ್ನು ಹಿಡಿದಿಟ್ಟು ಕೊಳ್ಳಲು ಆಗುವುದಿಲ್ಲ. ಇನ್ನೂ ಶಾಸಕರು ಹೋಗುತ್ತೇನೆ ಎಂದು ಡಿಸೈಡ್‌ ಮಾಡಿದರೆ ಹಿಡಿದಿಟ್ಟುಕೊಳ್ಳಲು ಆಗುತ್ತಾ. ಅವೆಲ್ಲಾ ಆಗುವ ಪ್ರಶ್ನೆಯೇ ಅಲ್ಲ. ಎಂಎಲ್‌ಎಗಳು ಯಾರ ಮಾತು ಕೇಳ್ತಾರೆ. ಇದೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಗುವುದಿಲ್ಲ. ನಮ್ಮ ಪಕ್ಷದ ಶಾಸಕರು ನಮ್ಮ ಜತೆಗೆ ಇದ್ದಾರೆ. ಸರ್ಕಾರ ಸುಭದ್ರವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next