Advertisement

ತಿರಸ್ಕೃತ ಅರ್ಜಿ ಮರು ಪರಿಶೀಲಿಸಿ

11:53 AM Jun 13, 2019 | Team Udayavani |

ಸಂಡೂರು: ಅರಣ್ಯ ಹಕ್ಕು ಸಮಿತಿಯ ಅಡಿಯಲ್ಲಿ ಅರ್ಜಿ ಹಾಕಿದ ರೈತರ ಅರ್ಜಿಗಳು ತಿರಸ್ಕೃತಗೊಂಡಿದ್ದು, ಅವುಗಳನ್ನು ಪುನರ್‌ ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಆದೇಶದಂತೆ ತಾಲೂಕಿನ ಎಲ್ಲ ಪಿಡಿಒಗಳು, ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಉನ್ನತಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಹಶೀಲ್ದಾರ್‌ ಸಿದ್ದೇಶ್‌ ತಿಳಿಸಿದರು.

Advertisement

ಪಟ್ಟಣದ ತಾಪಂ ಅವರಣದಲ್ಲಿ ನಡೆದ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಹಾಕಿದ ರೈತರು, ವಿವಿಧ ಸಂಘಟನೆಗಳು, ತಾಲೂಕಿನ ಎಲ್ಲ ಪಿಡಿಒಗಳು, ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಅವರಿಗೆ ನ್ಯಾಯ ಕೊಡುವ ರೀತಿಯಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬ ಪಿಡಿಒಗಳು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪುನರ್‌ ಪರಿಶೀಲಿಸಿ ಸೂಕ್ತ ದಾಖಲೆ, ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಬೇಕು. ಕಾರಣ ಅವರು ಆ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಿದ ಬಗ್ಗೆ ಮತ್ತು ಎಷ್ಟು ದಿನಗಳಿಂದ ನಡೆಸಿದ್ದಾರೆ ಎಂಬ ಬಗ್ಗೆಯೂ ಸಹ ಸೂಕ್ತ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ತಕ್ಷಣ ಮಾಡಬೇಕು ಎಂದು ತಿಳಿಸಿದರು.

ಇಒ ಜೆ.ಎಂ. ಅನ್ನದಾನಯ್ಯ ಸ್ವಾಮಿ ಮಾತನಾಡಿ, ರೈತರು ತಮ್ಮಲ್ಲಿರುವ ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಬೇಕು. ಅಲ್ಲದೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ವಿಶೇಷ ಸಮಿತಿಗಳನ್ನು ಸಹ ರಚಿಸಲಾಗಿದೆ. ಅವುಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲೆಗಳೊಂದಿಗೆ ಸಲ್ಲಿಸಿದ್ದು, ಅವುಗಳಲ್ಲಿ ದಾಖಲೆಗಳ ಕೊರತೆ ಮತ್ತು ಇತರ ಕಾರಣಗಳಿಂದ ತಿರಸ್ಕೃತಗೊಳಿಸಲಾಗಿತ್ತು. ಅದರೆ ಈಗ ಕೋರ್ಟ್‌ ಆದೇಶದಂತೆ ಮತ್ತೂಮ್ಮೆ ಪರಿಶೀಲಿಸಲಾಗುತ್ತಿದ್ದು, ರೈತರು ಸೂಕ್ತ ಅಂಶ ನೀಡಬೇಕು. ಅದರಂತೆ ಪರಿಶೀಲಿಸಿ ವರದಿ ನೀಡಬೇಕು ಎಂದು ಪಿಡಿಒಗಳಿಗೆ ತಿಳಿಸಿದರು.

ವಲಯ ಅರಣ್ಯಾಧಿಕಾರಿ ದಾದಾ ಖಲಂದರ ಮಾತನಾಡಿ, ಇಲಾಖೆಗೆ ಸಲ್ಲಿಸಲಾದ ದಾಖಲೆ ಪರಿಶೀಲಿಸಿ ನಿಯಮಾನುಸಾರವೇ ವರದಿ ಸಲ್ಲಿಸಲಾಗುವುದು. ಯಾವುದೇ ಕಾರಣಕ್ಕೂ ತಾರತಮ್ಯವಾಗಲಿ, ಅಕ್ರಮವಾಗಲಿ, ರೈತರಿಗೆ ಮೋಸವಾಗಲಿ ಮಾಡುತ್ತಿಲ್ಲ. ಸರ್ಕಾರದ ನಿಯಮದ ಪ್ರಕಾರವೇ ವರದಿ ನೀಡಲಾಗುವುದು. ದಾಖಲಾತಿಗಳನ್ನು ಪರಿಶೀಲನೆ ಸಹ ಮಾಡಲಾಗುವುದು ಎಂದರು. ಜೂ.6ರಂದು ಕರ್ನಾಟಕ ಪ್ರಾಂತ ರೈತ ಸಂಘ, ಸಂಡೂರು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದ ಎಲ್ಲ ರೈತ ಮುಖಂಡರಾದ ಜಿಲ್ಲಾಧ್ಯಕ್ಷ ವಿ.ಎಸ್‌. ಶಿವಶಂಕರ, ಯು.ತಿಪ್ಪೇಸ್ವಾಮಿ, ಎ.ಸ್ವಾಮಿ ಇತರ ರೈತರು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ರೈತರಿಗೆ ಉಂಟಾಗಿರುವ ಸಮಸ್ಯೆಗಳು, ಅರಣ್ಯ ಹಕ್ಕು ಸಮಿತಿಯಲ್ಲಿ ಕೈಗೊಳ್ಳಬೇಕಾದ ನಿಯಮಗಳು ಮತ್ತು ಅಧಿಕಾರಿಗಳು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ರೈತರಿಗೆ ಉಂಟಾಗಿರುವ ಸಂಕಷ್ಟ ಸಹ ತಿಳಿಸಿದರು. ಅಂತಿಮವಾಗಿ ಮತ್ತೂಮ್ಮೆ ಪರಿಶೀಲಿಸಿ ರೈತರಿಗೆ ನ್ಯಾಯ ಕೊಡಬೇಕು ಎಂದು ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next