ಸಂಡೂರು: ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ 3667 ಎಕರೆ ಭೂಮಿಯನ್ನು ಖಾಸಗಿ ಜಿಂದಾಲ್ ಕಂಪನಿಗೆ ಮಾರಾಟ ಮಾಡಲು ಸಚಿವ ಸಂಪುಟದ ನಿರ್ಧಾರವನ್ನು ತಕ್ಷಣ ಕೈ ಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಅರ್.ಎಸ್. ಬಸವರಾಜ ಎಚ್ಚರಿಸಿದರು.
ತೋರಣಗಲ್ಲಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಭೂ ಸಂತಸ್ತ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಅನಿರ್ದಿಷ್ಟ ಧರಣಿಯಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ವಸತಿ ಹೀನ ಮತ್ತು ಬಡ ಕೂಲಿ ಕಾರ್ಮಿಕರಿಗೆ ಖಾಲಿ ನಿವೇಶನ ಜಾಗ ಒದಗಿಸಲು 20 ಎಕರೆ ಜಮೀನು ನೀಡಿ ವಸತಿ ಸೌಕರ್ಯಕ್ಕೆ ಅಭಿವೃದ್ಧಿ ಪಡಿಸಬೇಕು. ಸರ್ಕಾರ ಜಿಂದಾಲ್ ಕಂಪನಿಯ ಡಾಂಬರ್ ತಯಾರಿಕ ಘಟಕದಿಂದ ಉಂಟಾಗುವ ಪರಿಸರ ಮಾಲಿನ್ಯ ಮತ್ತು ಜೀವ ಸಂಕುಲದ ಮೇಲೆ ಉಂಟಾಗುವ ದುಷ್ಪರಿಣಾಮ ಪರಿಗಣಿಸಿ ತಕ್ಷಣ ಈ ಕಂಪನಿಗೆ ನೀಡಿದ ಪರವಾನಗಿ ರದ್ದು ಮಾಡುವುದರ ಜತೆಗೆ ಜಾಗ ಹಿಂಪಡೆಯಬೇಕು. ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ, ಗಣಿ ಕಾರ್ಮಿಕರಿಗೆ ಆರೋಗ್ಯ, ಶಿಕ್ಷಣ, ವಸತಿ, ಅಸ್ಪತ್ರೆ ಸೌಲಭ್ಯ ಒದಗಿಸಬೇಕು. ಕುಮಾರಸ್ವಾಮಿ ದೇವಸ್ಥಾನ, ರಾಮಘಡ ಒಳಗೊಂಡ ಕಾಯ್ದಿಟ್ಟ ಅರಣ್ಯ ಹೊಂದಿರುವ ಭೂಮಿಯನ್ನು ಗಣಿಗಾರಿಕೆಗೆ ನೀಡುವುದನ್ನು ರದ್ದು ಮಾಡುವ ಮೂಲಕ ಅರಣ್ಯ ರಕ್ಷಣೆ ಮತ್ತು ಪರಿಸರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಸಿದ್ದೇಶ್ ಅವರು ಭೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿ ಮಾತನಾಡಿ, ಮನವಿ ಕೊಡಿ ಉನ್ನತಾಧಿಕಾರಿಗಳಿಗೆ ಮಾಹಿತಿ ರವಾನಿಸಲಾಗುವುದು. ಇದು ರಾಜ್ಯಮಟ್ಟದಲ್ಲಿ ಕೈಗೊಂಡ ನಿರ್ಧಾರವಾಗಿದೆ. ಈ ಬಗ್ಗೆ ಕೂಲಂಕುಷವಾದ ವರದಿಯನ್ನು ಸಹ ಸಲ್ಲಿಸಲಾಗುವುದು. ಜುಲೈ 3 ರಂದು ತಾಲೂಕು ಕಚೇರಿಯಲ್ಲಿ ಕಂಪನಿಯವರು, ಹೋರಾಟಗಾರರು, ಸರ್ಕಾರಿ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಸಮಸ್ಯೆ ಬಗೆಹರಿಸುವ ಬಗ್ಗೆ ನಿರ್ಧಾರಿಸಲಾಗುವುದು. ಅದ್ದರಿಂದ ಪ್ರತಿಭಟನೆ ಹಿಂಪಡೆಯಬೇಕು ಎಂದು ಸೂಚಿಸಿದರು.
ತೋರಣಗಲ್ಲು ಗ್ರಾಮದಲ್ಲಿ ಹೋರಾಟಗಾರರು ಬೃಹತ್ ಮೆರವಣಿಗೆ ನಡೆಸಿದರು. ತಹಶೀಲ್ದಾರ್ ಜತೆಗೆ ಮಾತಿನ ಚಕಮಕಿ ನಡೆಯುತು. ಗಾದಿಗನೂರು ಠಾಣೆ, ತೋರಣಗಲ್ಲು ಪೊಲೀಸ್ ಠಾಣೆಯ ಪಿಎಸ್‌ಐಗಳು, ಪೋಲಿಸರು ಉಪಸ್ಥಿತರಿದ್ದು, ಪರಿಸ್ಥಿತಿ ತಿಳಿಗೊಳಿಸಿದ್ದು, ಅಲ್ಲದೆ ಸಮಸ್ಯೆಯ ಪರಿಹಾರಕ್ಕೆ ಕುಳಿತು ಚರ್ಚಿಸಲು ತಹಶೀಲ್ದಾರ್ ಅವಕಾಶ ನೀಡಿದ್ದು, ಅದಕ್ಕೆ ಸ್ಪಂದಿಸುವಂತೆ ತಿಳಿಸಿದರು. ಮಾತುಕತೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದಾಗ ಪ್ರತಿಭಟನಾ ನಿರತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು
ಡಿವೈಎಫ್‌ಐ ಮುಖಂಡ ವೀರೇಶ್, ಕಟ್ಟಡ ಕಾರ್ಮಿಕರಾದ ವಿ.ತಿಪ್ಪೇಸ್ವಾಮಿ, ಚಂದ್ರಪ್ಪ, ದೊಡ್ಡಬಸಪ್ಪ, ಕಾಲೂಬ್ ಹಾಗೂ ಮಹಿಳೆಯರು, ಮುಖಂಡರಾದ ಎಚ್.ಶಂಕರಲಿಂಗ್, ಶಿವಮ್ಮ, ಶಂಕ್ರಮ್ಮ ವಿ.ಎಸ್. ಶಿವಶಂಕರ, ಯು.ತಿಪ್ಪೇಸ್ವಾಮಿ, ಬಿ.ಈರಣ್ಣ, ಅಂಚೆ ಬಾಬು, ಲಕ್ಕಮ್ಮ, ಹನುಮಕ್ಕ, ದುರುಗಮ್ಮ ಇದ್ದರು.