ಬಳ್ಳಾರಿ: ಸಂಡೂರು ವಿಧಾನಸಭೆಗೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಮತ್ತು ಬಿ.ನಾಗೇಂದ್ರ ನಡುವಿನ ವಾಕ್ಸಮರ ಹೆಚ್ಚಾಗಿದೆ. ಇಬ್ಬರ ನಡುವೆ ಮಾತಿನ ಕೌಂಟರ್ ಗಳು ಮುಂದುವರದಿದ್ದು, “ನಾಗೇಂದ್ರ ನಿನ್ನೆ ದಿನ ಕಣ್ಣೀರು ಹಾಕಿದ್ದಾರೆ. ನಾಗೇಂದ್ರ ಹಾಕಿದ ಕಣ್ಣೀರು ಪಶ್ಚಾತ್ತಾಪದ ಕಣ್ಣೀರು. ರಾಜಕೀಯವಾಗಿ ನಾಗೇಂದ್ರರನ್ನು ಬೆಳೆಸಿದ್ದು ನಾವೇ ಇಂತವರನ್ನು ನಾವು ಬೆಳಿಸಿದ್ದೇವಾ ಎಂದು ಪಶ್ಚಾತ್ತಾಪ ಪಟ್ಟುಕೊಳ್ಳುತ್ತಿದ್ದೇವೆ” ಎಂದು ರೆಡ್ಡಿ ಹೇಳಿದ್ದಾರೆ.
ಸಂಡೂರಿನಲ್ಲಿ ಗೃಹ ಪ್ರವೇಶ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ, ಶಾಸಕ ಜನಾರ್ದನ ರೆಡ್ಡಿ, ಸರ್ಕಾರದ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ. ನಾಗೇಂದ್ರ ವಂಚನೆ ಮಾಡಿದ್ದನ್ನು ಕಿರುಪುಸ್ತಕ ಮಾಡಿ ಹಂಚುತ್ತೇನೆ. ಚಾರ್ಜ್ ಶೀಟ್ ಅಂಶಗಳನ್ನು ಎರಡು ಮೂರು ದಿನದಲ್ಲಿ ಬುಕ್ ಲೆಟ್ ಮಾಡಿ ಬಿಡುಗಡೆ ಮಾಡುತ್ತೇನೆ ಎಂದರು.
ಸಂಡೂರಿನಲ್ಲಿ ಪ್ರಚಾರಕ್ಕೆ ನಾಗೇಂದ್ರ ಬರುತ್ತಾರೋ, ಸೋನಿಯಾ ಗಾಂಧಿ ಬರುತ್ತಾರೋ ಗೊತ್ತಿಲ್ಲ. ಸಂಡೂರಿನಲ್ಲಿ ತುಕಾರಾಂ ಏನೂ ಅಭಿವೃದ್ಧಿ ಮಾಡಿಲ್ಲ. ನಾಗೇಂದ್ರನ ಬಗ್ಗೆ ಮಾತನಾಡುವುದು ತಪ್ಪು. ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿರುವವನು. ನಾಗೇಂದ್ರನನ್ನು ಕಾಂಗ್ರೆಸ್ ಸಂಪೂರ್ಣ ಬಳಕೆ ಮಾಡಿಕೊಂಡಿದೆ. ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಕಾಡುತ್ತಿದೆ, ಹೀಗಾಗಿ ಕಣ್ಣೀರು ಹಾಕಿದ್ದಾನೆ ಎಂದು ಹೇಳಿದರು.
ಸರ್ಕಾರಿ ಮೌಕರ ಆತ್ಮಹತ್ಯೆ ಮಾಡಿಕೊಂಡಾಗ ಸತ್ಯ ಹೊರಬಂತು. ಸುಳ್ಳು ಹೇಳಿದ್ದರೆ ಅಧಿಕಾರಿ ಸಾಯುತ್ತಿರಲಿಲ್ಲ, ಸತ್ಯ ಹೇಳಿ ಸತ್ತು ಹೋಗಿದ್ದಾನೆ. ಗೋವಾಕ್ಕೆ ಕರೆದೊಯ್ದು ವಿಡಿಯೋ ಮಾಡಿಸಿ ಹೆದರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗೇಂದ್ರ ಏನೇ ಮಾತಾಡಿದರೂ ನಂಬುವ ಸ್ಥಿತಿಯಲ್ಲಿ ಜನ ಇಲ್ಲ. ನಾಗೇಂದ್ರ ಮಾಡಿದ ಹಗರಣ ಕುರಿತು ಸಂಪೂರ್ಣ ಮಾಹಿತಿ ಕೊಡುತ್ತೇನೆ ಎಂದು ರೆಡ್ಡಿ ಹೇಳಿದರು.