Advertisement

ಸಂಧ್ಯಾ ಪೈ ಅವರ ಬರವಣಿಗೆ ಶೈಲಿಯಲ್ಲಿ ಬುದ್ಧನ ಪ್ರಭಾವ: ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ

10:12 PM Dec 04, 2022 | Team Udayavani |

ಬೆಂಗಳೂರು: ಲೇಖಕಿ ಸಂಧ್ಯಾ ಎಸ್‌. ಪೈ ಅವರ ಬರವಣಿಗೆಯ ಶೈಲಿ ಮತ್ತು ನಿರೂಪಣೆ ನೋಡಿದಾಗ ಬುದ್ಧನ ಪ್ರಭಾವ ಗಾಢವಾಗಿರುವುದು ಭಾಸವಾಗುತ್ತದೆ ಎಂದು ಹಿರಿಯ ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಹೇಳಿದ್ದಾರೆ.

Advertisement

ಅಂಕಿತ ಪುಸ್ತಕ ಪ್ರಕಾಶನ ರವಿವಾರ ಜಾಲತಾಣದಲ್ಲಿ ಹಮ್ಮಿಕೊಂಡಿದ್ದ ಲೇಖಕಿ ಹಾಗೂ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರ “ಸ್ಮತಿ ಗಂಧವತೀ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃತಿಯು ಪುನರ್‌ ಜನ್ಮಗಳು ಕೂಡ ಸ್ಮತಿಯ ನಿರಂತರತೆಯ ಫ‌ಲ ಎಂದು ಹೇಳುತ್ತದೆ. ಬುದ್ಧ ಕೂಡ ಇದನ್ನೇ ಹೇಳಿದ್ದಾನೆ ಎಂದರು.

ಸಂಧ್ಯಾ ಪೈ ಅವರ ಬರವಣಿಗೆಯಲ್ಲಿ ಕಾವ್ಯಾತ್ಮಕತೆ ಇದೆ. “ಸ್ಮತಿ ಗಂಧವತೀ’ ಸುಂದರವಾದ ಪ್ರಬಂಧ ಪರ್ಯಟನಾ ಕೃತಿಯಾಗಿದೆ. ಓದುಗರಿಗೆ ಇದು ತುಂಬಾ ಇಷ್ಟವಾಗುತ್ತದೆ. ಇಡೀ ಪುಸ್ತಕಕ್ಕೆ ನೆನಪುಗಳೇ ಆಧಾರ. ಲೇಖಕರ ದೃಷ್ಟಿಯಲ್ಲಿ ಸ್ಮತಿ ಎಂಬುದಕ್ಕೆ ಕೇವಲ ನೆನಪು ಎಂಬ ಅರ್ಥ ಬರುವುದಿಲ್ಲ ಇನ್ನೂ ಗಂಭೀರ ಅರ್ಥವಿದೆ ಎಂದು ಹೇಳಿದರು.

ಸುಮಾರು 50 ವರ್ಷಗಳ ಸ್ಮತಿಪಟಲವನ್ನು ಲೇಖಕರು ಸರಾಗವಾಗಿ ಬಿಡಿಸಿಟ್ಟಿದ್ದಾರೆ. ಅವರ ಬರವಣಿಗೆ ಕೇವಲ ನಿರೂಪಣೆಯಲ್ಲ, ಕಥನವಲ್ಲ, ಭಾಷೆಯ ಸೂಕ್ಷ್ಮತೆಯನ್ನೂ ತಮ್ಮ ಬರವಣಿಗೆಯಲ್ಲಿ ದಾಖಲಿಸುತ್ತಾರೆ. ಜಗತ್ತನ್ನು ಭಿನ್ನವಾಗಿ ತೋರಿಸುವ ಶೈಲಿಯನ್ನು ಇವರ ಬರವಣಿಗೆ ಪಡೆದುಕೊಂಡಿದೆ ಎಂದು ಬಣ್ಣಿಸಿದರು. ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್‌ ಕಂಬತ್ತಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

 ಮಮತೆಯ ತಾಯಿಯಾಗಿ ಕಾಣುತ್ತಾರೆ:

Advertisement

ಕೃತಿ ಕುರಿತು ಮಾತನಾಡಿದ ಲೇಖಕಿ ನಂ. ನಾಗಲಕ್ಷ್ಮೀ, ವೈವಿಧ್ಯಮಯ ರೀತಿಯಲ್ಲಿ ಬರೆಯುವುದು ಲೇಖಕಿ ಸಂಧ್ಯಾ ಎಸ್‌. ಪೈ ಅವರಿಗೆ ಸಿದ್ಧಿಸಿದೆ. ನೆನಪುಗಳ ಭಂಡಾರವನ್ನು ಈ ಕೃತಿಯಲ್ಲಿ ಓದುಗರಿಗೆ ತೆರೆದಿಟ್ಟಿದ್ದಾರೆ. ನೆನಪುಗಳೇ ಬದುಕಿನ ಸಾರ ಎಂದು ಕೃತಿಯಲ್ಲಿ ಹೇಳುತ್ತಾರೆ ಎಂದು ತಿಳಿಸಿದರು. ಈ ಕೃತಿಯಲ್ಲಿ ಮೌಲ್ಯವಿದೆ, ನಡೆದು ಬಂದ ನೆನಪುಗಳಿವೆ. ಲೇಖಕಿ ಮನೆಯ ಹಿರಿಯ ಮಗಳಾಗಿ ಸಹೋದರ -ಸಹೋದರಿಯ ಜವಾಬ್ದಾರಿ ಹೊರುವುದು ಸೇರಿದಂತೆ ಹತ್ತಾರು ಘಟನೆಗಳ ತೆರೆದಿರುವುದು ಮನಸಿಗೆ ತಟ್ಟುತ್ತದೆ ಎಂದರು. ವಾತ್ಸಲ್ಯದ ಸಹೋದರಿಯಾಗಿ, ಮಮತೆಯ ತಾಯಿಯಾಗಿ, ಪ್ರೀತಿಯ ಗೆಳತಿಯಾಗಿ, ಸಾಂಸಾರಿಕ ಜೀವನ ಪರಿಚಯಿಸುವ ವೇದಾಂತಿಯಾಗಿ ಲೇಖಕರು ಇಲ್ಲಿ ಕಾಣುತ್ತಾರೆ ಎಂದರು.

ಅಜ್ಜಿ ಹೇಳಿದ ಕಥೆಗಳೇ ನನಗೆ ಪ್ರೇರಣೆ :

ಮೂಲತಃ ನಾನು ಬರಹಗಾರ್ತಿ ಅಲ್ಲ. ಅನಿವಾರ್ಯ ಸನ್ನಿವೇಶ ನನ್ನನ್ನು ತರಂಗದ ಚುಕ್ಕಾಣಿ ಹಿಡಿಯುವಂತೆ ಮಾಡಿತು. ಅಲ್ಲಿ ಕೂತಾಗ ಏನಾದರೂ ಬರೆಯಬೇಕು ಎನಿಸಿತು. ಆಂಗ್ಲ ಭಾಷೆಯಲ್ಲಿ ಹಿಡಿತವಿದ್ದ ನನಗೆ ಕನ್ನಡದಲ್ಲಿ ಮೊದ ಮೊದಲು ಬರೆಯುವಾಗ ಸ್ಪಲ್ಪ ಮಟ್ಟಿನ ಭಯವಿತ್ತು ಎಂದು “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಹೇಳಿದರು.

ಕಚೇರಿಯಲ್ಲಿ ಕೆಲಸ ಮಾಡುವಾಗ ಸಿಬಂದಿ ನನ್ನಲ್ಲಿ ತಾಪತ್ರಯ ಹೇಳಿಕೊಳ್ಳುತ್ತಿದ್ದರು. ಪುಟ್ಟ ನೀತಿ ಕಥೆ ಹೇಳುವ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದೆ. ಹೀಗೆ ಕಥೆ ಹೇಳುವ ಸಂಸ್ಕೃತಿ ಕೂಡ ಮುಂದುವರಿಯಿತು. ನಮ್ಮಜ್ಜನ ಮನೆ ಬಂಟ್ವಾಳ. ಅಲ್ಲಿ ನಮ್ಮದು ಕೂಡು ಕುಟುಂಬ. ಮನೆಯಲ್ಲಿ ಅಜ್ಜಿ ಕಥೆ ಹೇಳುತ್ತಿದ್ದರು. ಒಂದು ದಿನ ರಾಮಾಯಣ, ಮತ್ತೂಂದು ದಿನ ಭೂತಪ್ರೇತದ ಕಥೆಗಳನ್ನು ಮನೆಯವರೆಲ್ಲರನ್ನೂ ಕೂರಿಸಿಕೊಂಡು ಹೇಳುತ್ತಿದ್ದರು. ಹಾಗೆಯೇ ಮನೆಯಲ್ಲಿರುವ ಎಲ್ಲರೂ ಒಂದೊಂದು ಕಥೆ ಹೇಳುತ್ತಿದ್ದರು. ಆ ವಾತಾವರಣವೇ ನನಗೆ ಕಥೆ ಬರೆಯಲು ಪ್ರೇರಣೆ ನೀಡಿತು. ಕಥೆಗಳ ಮೂಲಕ ಬದುಕನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಂಡೆ ಎಂದು ತಿಳಿಸಿದರು.

ತರಂಗ, ತುಷಾರ, ಉದಯವಾಣಿ ಗುಣಮಟ್ಟ ಉಳಿಸಿಕೊಂಡಿದೆ: ಎಚ್ಚೆಸ್ವಿ :

ಸಂಧ್ಯಾ ಎಸ್‌. ಪೈ ಅವರ ಸಾಹಿತ್ಯ ಕೃಷಿಯನ್ನು ನೋಡಿದರೆ ತುಂಬಾ ಸಂತೋಷವಾಗು ತ್ತದೆ. ನನಗೆ ತುಷಾರ, ತರಂಗ, ಉದಯವಾಣಿಯೊಂದಿಗೆ ನಿಕಟವಾದ ಸಂಬಂಧವಿದೆ. “ಉದಯವಾಣಿ’ ಪತ್ರಿಕೆ ನನಗೆ ಜನಪ್ರಿಯತೆಯನ್ನು ಕೂಡ ತಂದುಕೊಟ್ಟಿದೆ ಎಂದು ಸಾಹಿತಿ ಎಚ್‌.ಎಸ್‌. ವೆಂಕಟೇಶ ಮೂರ್ತಿ ಹೇಳಿದರು. ತುಷಾರ’ ಪತ್ರಿಕೆಯಲ್ಲಿ ನನ್ನ ಕಾದಂಬರಿ ಈ ಹಿಂದೆ ಧಾರಾವಾಹಿಯಾಗಿ ಪ್ರಕಟವಾಗಿತ್ತು. ತುಷಾರ, ತರಂಗ ಮತ್ತು ಉದಯವಾಣಿ ದಿನಪತ್ರಿಕೆ ಇಂದಿಗೂ ಕೂಡ ಗುಣಮಟ್ಟವನ್ನು ಉಳಿಸಿಕೊಂಡಿದೆ ಎಂದು ತಿಳಿಸಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next