ನೆಲಮಂಗಲ: ಪರಿವೀಕ್ಷಣಾ ಮಂದಿರದಲ್ಲಿ ಬೆಳೆಸಲಾಗಿದ್ದ ಶ್ರೀಗಂಧ ಮರಗಳ ಕಳ್ಳತನ ಪ್ರಕರಣ ದಾಖಲಾಗಿ 6 ದಿನದಲ್ಲೇ ಮತ್ತೆ ಕಳ್ಳತನ ನಡೆದಿದ್ದು, ಖದೀಮರ ಅಟ್ಟಹಾಸಕ್ಕೆ ಲಕ್ಷಾಂತರ ಬೆಲೆ ಬಾಳುವ ಶ್ರೀಗಂಧ ಮರಗಳ ಮಾರಣ ಹೋಮ ನಡೆದಿದೆ. ನಗರದ ಹೃದಯಭಾಗದಲ್ಲಿರುವ ಪರಿವೀಕ್ಷಣಾ ಮಂದಿರದ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಶ್ರೀಗಂಧ ಮರಗಳು 10 ರಿಂದ 12ವರ್ಷಗಳಿಂದ ಬೆಳೆಸಲಾಗಿದೆ.
ಆದರೆ, ಒಂದು ವಾರದಿಂದ ನಾಲ್ಕು ಮರಗಳನ್ನು ಕಟಾವು ಮಾಡಿ ಕಳ್ಳರು ಸಾಗಿಸಿದರೆ, ಈ ಹಿಂದೆ ಕಳ್ಳತನವಾದಾಗ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ದೂರು ನೀಡದೆ ಬೇಜವ್ದಾರಿಯಾಗಿ ವರ್ತಿಸಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿಕೊಂಡರೂ, ಒಂದೇ ವಾರದಲ್ಲಿ ಮತ್ತೆರಡು ಮರಗಳು ಕಳ್ಳರ ಕೈನಿಂದ ಬಲಿಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಗಳ ನಡೆ ನಿಗೂಢ: ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶ್ರೀಗಂಧ ಮರಗಳ ಕಳ್ಳತ ನವಾದಾಗ ನಾಲ್ಕು ದಿನ ದೂರು ನೀಡಿರಲಿಲ್ಲ, ನಂತರ ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲುಮಾಡಿದರು. ಅಧಿಕಾರಿಗಳ ಒತ್ತಡದಿಂದ ತನಿಖೆ ಚುರುಕು ಪಡೆಯದೇ ಇದ್ದ ಪರಿಣಾಮ ಮತ್ತೆ ಎರಡು ಶ್ರೀಗಂಧ ಮರಗಳ ಕಳ್ಳತನವಾಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಮಗೆಗೊತ್ತಿಲ್ಲ ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಿಸಿಟೀವಿ ಹಾಗೂ ಕಾವಲುಗಾರರು ಇರುವ ಪರಿವೀಕ್ಷಣಾಮಂದಿರದಲ್ಲಿಯೇ ಈ ರೀತಿ ನಡೆದರೂ, ಅಧಿಕಾರಿಗಳು ನಡೆದುಕೊಳ್ಳುತ್ತಿರುವ ನಡೆ ನಿಗೂಢವಾಗಿದೆ.
ಸಿಸಿಟಿವಿ ಎದುರೇ ಕಳ್ಳತನ: ಪರಿವೀಕ್ಷಣಾ ಮಂದಿರವಲ್ಲದೇ ಕೆಲವು ಸರ್ಕಾರಿ ಕಚೇರಿಗಳ ಆವರಣದಲ್ಲಿಯೂ ಶ್ರೀಗಂಧ ಮರಗಳಿವೆ. ಆದರೆ, ಖದೀಮರು ಪರಿವೀಕ್ಷಣಾ ಮಂದಿರದಲ್ಲಿ ಸಿಸಿಟೀವಿ ಕ್ಯಾಮೆರಾದ ಎದುರಿನಲ್ಲಿಯೇ ಶ್ರೀಗಂಧ ಮರವನ್ನು ಕಟಾವು ಮಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಸಿಸಿಟೀವಿ ಪರೀಕ್ಷೆ ಮಾಡುವುದಾಗಿಅಧಿಕಾರಿಗಳು ಹೇಳಿದ್ದು, ಸತ್ಯತೆಯ ಬಗ್ಗೆ ಮಾತ್ರ ಮಾಹಿತಿ ನೀಡಿಲ್ಲ.
ಪ್ರತಿಭಟನೆ: ಶ್ರೀಗಂಧ ಮರಗಳನ್ನು ಪದೇ ಪದೆ ಕಳ್ಳತನ ಮಾಡುತ್ತಿದ್ದರೂ ಕ್ರಮಕೈಗೊಳ್ಳದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ನಮ್ಮ ಕರ್ನಾಟಕ ಜನಸೈನ್ಯ ಹಾಗೂ ಕರವೇ ಪ್ರವೀಣ್‌ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ನರಸಿಂಹಯ್ಯ, ನವೀನ್,ಕರವೇ ಹನುಮಂತರಾಜು, ಶಿವಕುಮಾರ್, ಮಂಜುಳಾ ಮತ್ತಿತರರಿದ್ದರು.
ಪ್ರಾಮಾಣಿಕ ತನಿಖೆ ಅನಿವಾರ್ಯ :
10 ರಿಂದ 12 ವರ್ಷದ ಶ್ರೀಗಂಧ ಮರಗಳನ್ನು ಸರ್ಕಾರಿ ಅಧಿಕಾರಿಗಳು ಕಚೇರಿಯ ಆವರಣದಲ್ಲಿಯೇ ಮಾರಣಹೋಮ ಮಾಡಿರುವುದು ದುರಂತ. ಪ್ರಾಮಾಣಿಕ ತನಿಖೆ ನಡೆದು ಆರೋಪಿ ಗಳನ್ನು ಬಂಧನ ಮಾಡಿದರೇ ಮಾತ್ರ ಅರಣ್ಯ ಇಲಾಖೆ ಉಳಿದ ಮರಗಳನ್ನು ರಕ್ಷಣೆ ಮಾಡಲುಸಾಧ್ಯ. ಇಲ್ಲದಿದ್ದರೆ ಖದೀಮರ ಅಟ್ಟಹಾಸಕ್ಕೆಉಳಿದ ಮರಗಳು ಕಳೆದುಕೊಳ್ಳಬೇಕಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.