Advertisement

ನಮ್ಮವರೇ ನಮಗೆ ಮೇಲು! ಸಂಕಷ್ಟದಲ್ಲೂ ಒಗಟ್ಟು ಪ್ರದರ್ಶಿಸಿದ ಸಿನಿ ಮಂದಿ

01:38 PM Jun 11, 2021 | Team Udayavani |

“ಓ ದೇವರೇ, ನಮ್ಮ ಕಷ್ಟವನ್ನು ಕೇಳುವವರು ಯಾರು ಇಲ್ವೇ, ಈ ಕಷ್ಟಕ್ಕೊಂದು ಪರಿಹಾರ ಕೊಡು ದೇವ ….’ -ಕೆಲವು ಸಿನಿಮಾಗಳ ಕ್ಲೈಮ್ಯಾಕ್ಸ್‌ನಲ್ಲಿ ಕಷ್ಟದಲ್ಲಿರುವ ಜನ ಹೀಗೆ ದೇವರನ್ನು ಬೇಡಿಕೊಳ್ಳುತ್ತಾರೆ. ಆಗ ಜೋರಾಗಿ ಗಾಳಿ ಬೀಸುತ್ತದೆ, ತರಗೆಲೆಗಳು ಹಾರಾಡಲಾರಂಬಿಸಿದಾಗ, ಹೀರೋ ಎಂಟ್ರಿಯಾಗಿ ಕಷ್ಟದಲ್ಲಿದ್ದ ಜನರನ್ನು ರಕ್ಷಣೆ ಮಾಡಿ, “ನಿಮ್ಮ ಜೊತೆ ನಾನಿದ್ದೇವೆ’ ಎಂಬ ಭರವಸೆ ನೀಡುತ್ತಾನೆ. ಇದು ಸಿನಿಮಾದ ದೃಶ್ಯ ಆಗಿರಬಹುದು. ಆದರೆ, ಈ ಬಾರಿ ಕೊರೊನಾ ಲಾಕ್‌ಡೌನ್‌ ನಿಂದ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದುಕೊಂಡು ಸಹಾಯದ ನಿರೀಕ್ಷೆಯಲ್ಲಿದ್ದ  ಸಿನಿಮಾ ಮಂದಿಯ ಪಾಲಿಗೆ ಹೀರೋಗಳಾಗಿ ಬಂದು ಸಹಾಯ ಮಾಡಿದ್ದು ತೆರೆ ಮೇಲಿನ ಹಾಗೂ ತೆರೆ ಹಿಂದಿನ ಚಿತ್ರರಂಗದ ಹೀರೋಗಳು ಎಂಬುದು ಗಮನಾರ್ಹ.

Advertisement

ಸಿನಿಮಾ ಚಿತ್ರೀಕರಣವಿಲ್ಲದೇ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದ ಸಿನಿಮಾ ಮಂದಿಯ ಕಷ್ಟಕ್ಕೆ ಮೊದಲು ಸ್ಪಂದಿಸಿದ್ದು ನಮ್ಮ ಚಿತ್ರರಂಗದವರೇ. ಅಲ್ಲಿಗೆ ಸಿನಿಮಾ ರಂಗ ಒಂದು ಕುಟುಂಬ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಸಣ್ಣಪುಟ್ಟ ಮನಸ್ತಾಪಗಳು ಬಂದು ಹೋಗುತ್ತವೆ. ಆದರೆ, ತಮ್ಮವರು ಕಷ್ಟದಲ್ಲಿದ್ದಾಗ ಅವರ ಕೈ ಹಿಡಿಯುವ ಮನಸ್ಸು ಎಲ್ಲಕ್ಕಿಂತ ದೊಡ್ಡದು. ಅದನ್ನು ನಮ್ಮ ಸಿನಿಮಾ ಚಿತ್ರರಂಗದವರು ಮಾಡಿದ್ದಾರೆ. ಅಲ್ಲಿಗೆ ನಮ್ಮ ಕಷ್ಟಕ್ಕೆ ಯಾವತ್ತೂ ನಮ್ಮವರೇ ಆಗೋದು- ನಮ್ಮವರೇ ನಮಗೆ ಮೇಲು!

ಇದನ್ನೂ ಓದಿ:ದಾಸನ ಕಳಕಳಿಗೆ ಬುದ್ಧಿವಂತನ ಬೆಂಬಲ: ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರ

ಚಿತ್ರೀಕರಣ ಸ್ತಬ್ಧವಾಗಿ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಮುಂದೆ ಜೀವನ ನಡೆಸೋದು ಹೇಗೆ ಎಂದು ಆಲೋಚಿಸುತ್ತಿದ್ದ ಸಮಯದಲ್ಲಿ, “ನೀವೇನು ಹೆದರಬೇಡಿ, ನಿಮ್ಮ ಜೊತೆ ನಾವಿದ್ದೇವೆ’ ಎಂದು ಮುಂದೆ ಬಂದವರು ಸಿನಿಮಾದವರೇ. ಯಶ್‌, ಉಪೇಂದ್ರ, ಪುನೀತ್‌, ವಿಜಯ್‌ ಕಿರಗಂದೂರು, ಸುದೀಪ್‌, ಶಿವಣ್ಣ, ದರ್ಶನ್‌, ಆರ್‌. ಚಂದ್ರು, ಸಂಜನಾ, ಮನು ರಂಜನ್‌, ರಾಗಿಣಿ, ಧನಂಜಯ್‌, ಪ್ರಥಮ್‌ …. ಹೀಗೆ ಸಹಾಯಕ್ಕೆ ನಿಂತ ಮಂದಿಯ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.

ಅನೇಕರು ಸದ್ದಿಲ್ಲದೇ ಎಲೆ ಮರೆಯ ಕಾಯಿಯಂತೆ ತಮ್ಮ ಕೈಲಾದ ಸಹಾಯವನ್ನು ತಮ್ಮ ತಮ್ಮ ಸಿನಿಮಾ ತಂಡಗಳಿಗ ಮಾಡಿದ್ದಾರೆ, ಮಾಡುತ್ತಿದ್ದಾರೆ. ಸರ್ಕಾರವೇ ಸಹಾಯಕ್ಕೆ ಮುಂದಾಗಲೀ ಎಂದು ಇವರ್ಯಾರು ಕಾದು ಕೂರಲಿಲ್ಲ. ನಮ್ಮ ಚಿತ್ರರಂಗಕ್ಕೆ ನಾವು ಸಹಾಯ ಮಾಡದಿದ್ದರೆ ಬೇರೆ ಯಾರು ಮಾಡುತ್ತಾರೆ ಎಂದು ಮುಂದೆ ನುಗ್ಗಿ ಬಂದಿದ್ದಾರೆ. ಪರಿಣಾಮವಾಗಿ ಇನ್ನಷ್ಟು ಸಂಘ-ಸಂಸ್ಥೆಗಳು ಕೂಡಾ ಸಿನಿಮಾಮಂದಿಯ ಸಹಾಯಕ್ಕೆ ಧಾವಿಸುವಂತಾಯಿತು.

Advertisement

ಇದನ್ನೂ ಓದಿ: ಒಂದು ಕಡೆ ಖುಷಿ ಮತ್ತೊಂದು ಕಡೆ ಬೇಜಾರು: ಸಂಗೀತಾ ಶೃಂಗೇರಿ ಲಾಕ್‌ ಡೌನ್‌ ಡೈರಿ

ಇದು ವ್ಯಕ್ತಿಗತ ಸಹಾಯವಾದರೆ, ಚಿತ್ರರಂಗದ ಅಂಗಸಂಸ್ಥೆಗಳಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಾರ್ಮಿಕರ ಒಕ್ಕೂಟ, ಕಲಾವಿದರ ಸಂಘ, ನಿರ್ಮಾಪಕರ ಸಂಘ … ಹೀಗೆ ಪ್ರತಿ ಸಂಘಗಳು ತಮ್ಮ ಸದಸ್ಯರಿಗೆ ಲಸಿಕೆ ಕೊಡಿಸುವ ಜವಾಬ್ದಾರಿಯಿಂದ ಹಿಡಿದು ಸರ್ಕಾರ ಪ್ಯಾಕೇಜ್‌ ಘೋಷಿಸುವವರೆಗೂ ಶ್ರಮಿಸಿದೆ.

ನಟ ಯಶ್‌ ಅಂತೂ ಸಿನಿಮಾ ಮಂದಿಯ ಅಕೌಂಟ್‌ಗೆ ತಲಾ ಐದು ಸಾವಿರ ರೂಪಾಯಿ ಹಾಕಿದರೆ, ನಿರ್ಮಾಪಕ ವಿಜಯ್‌ ಕಿರಗಂದೂರು 32 ಲಕ್ಷ ರೂ., ಪುನೀತ್‌ ರಾಜ್‌ಕುಮಾರ್‌ 10 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ನೀಡಿದ್ದಾರೆ. ನಟ ಉಪೇಂದ್ರ ಅವರ ಸಹಾಯ ಹಸ್ತಕ್ಕೆ ಮತ್ತಷ್ಟು ದಾನಿಗಳು ಸೇರಿಕೊಳ್ಳುವ ಮೂಲಕ ಸಿನಿಮಾ ಮಂದಿಯ ಮನೆ ಮನೆಗೆ ದಿನಸಿ ಕಿಟ್‌ ಗಳು ತಲುಪಿದೆ. ನಟ ಸುದೀಪ್‌ ತಮ್ಮ ಚಾರಿಟೇಬಲ್‌ ಮೂಲಕ ಸಿನಿಮಾ ಮಂದಿಗೆ ಸಹಾಯ ಹಸ್ತ ಚಾಚಿದ್ದಾರೆ. ಶಿವಣ್ಣ, ದರ್ಶನ್‌, ಆರ್‌. ಚಂದ್ರು, ಸಂಜನಾ, ಮನುರಂಜನ್‌, ರಾಗಿಣಿ, ಧನಂಜಯ್‌… ಹೀಗೆ ಪ್ರತಿಯೊಬ್ಬರು ತಮ್ಮದೇ ರೀತಿಯಲ್ಲಿ ಚಿತ್ರರಂಗಕ್ಕೆ ನೆರವಾಗಿದ್ದಾರೆ.

ಕೊರೊನಾದಂತಹ ಮಹಾಮಾರಿಯಿಂದ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದ ಮಂದಿಗೆ ಇವರ ಸಹಾಯ ಹಸ್ತ ಮರುಭೂಮಿಯಲ್ಲಿ ನೀರು ಸಿಕ್ಕಂತಾಗಿದೆ. ಸದ್ಯ ಕೊರೊನಾ ಎರಡನೇ ಅಲೆ ಕಡಿಮೆಯಾಗುತ್ತಿದೆ. ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯೂ ಇದೆ. ಈಗ ಸಿನಿಮಾ ಮಂದಿ ತಮ್ಮವರಿಗೆ ಕೆಲಸ ಕೊಟ್ಟು ಮತ್ತೂಮ್ಮೆ ಪ್ರೋತ್ಸಾಹ ನೀಡಬೇಕಿದೆ.

ರವಿ ಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next