ಚಿಕ್ಕಮಗಳೂರು: ಶ್ರೀಗಂಧದ ಮರಗಳನ್ನು ಕಳೆದುಕೊಂಡು, ಪರಿಹಾರದ ಹಣವೂ ಸಿಗದ ಕಾರಣ ಶ್ರೀಗಂಧ ಬೆಳೆಗಾರರೊಬ್ಬರು ಮರಣ ಪತ್ರ ಬರೆದಿಟ್ಟು, ನೋವಿನ ವಿಡಿಯೋ ಮಾಡಿ ನಾಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ತರೀಕೆರೆ ಪಟ್ಟಣದ ವಿಶುಕುಮಾರ್ ಎಂಬ ಶ್ರೀಗಂಧ ಬೆಳೆಗಾರ ಕಣ್ಮರೆಯಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು, ವಿಡಿಯೋ ಮಾಡಿಟ್ಟು ವಿಶುಕುಮಾರ್ ನಾಪತ್ತಯಾಗಿದ್ದಾರೆ.
ಕುಟುಂಬದವರನ್ನ ಉದ್ದೇಶಿಸಿ ವಿಡಿಯೋ ಮಾಡಿರುವ ವಿಶು ಕುಮಾರ್ ನಿಮಗೆಲ್ಲಾ ಮೋಸ ಮಾಡಿ ಹೋಗುತ್ತಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಾಗಿ ರೈತರು ಬೆಳೆದ ಶ್ರೀಗಂಧದ ಮರಗಳ ಹನನ ಮಾಡಲಾಗಿತ್ತು. ಈ ಬಗ್ಗೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು. ಆದರೆ ಕೋರ್ಟ್ ಸೂಚನೆ ನೀಡಿದರೂ ಪ್ರಾಧಿಕಾರ ನಿರ್ಲಕ್ಷ್ಯ ತೋರಿದೆ. ಸುಮಾರು 22 ಮಂದಿ ರೈತರಿಗೆ ಪರಿಹಾರ ನೀಡಲು ಪ್ರಾಧಿಕಾರ ಮೀನಾಮೇಷ ಏಣಿಸುತ್ತಿದ್ದು, ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ಪರಿಹಾರದ ಹಣಕ್ಕಾಗಿ ಕಚೇರಿಗಳಿಗೆ ಅಲೆದಾಡಿದ ಸಂತ್ರಸ್ತ ಬೆಳೆಗಾರರು, ಮೂರು ದಿನದ ಹಿಂದೆ ತುಮಕೂರಿನ ಪ್ರಾಧಿಕಾರ ಕಚೇರಿಯೆದುರು ಪ್ರತಿಭಟನೆ ಕೂಡಾ ನಡೆಸಿದ್ದರು.